ಕೊನೆಗೂ ಖಚಿತವಾಯ್ತು.. ಕಾರ್ಕಳದ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಲಿದೆ ಅಯೋಧ್ಯೆ ರಾಮನ ಮೂರ್ತಿ!

By Santosh Naik  |  First Published Apr 19, 2023, 7:57 PM IST

ನೇಪಾಳ, ಬಿಹಾರ, ಮಹಾರಾಷ್ಟ್ರ ರಾಜ್ಯಗಳಿಂದ ಶಿಲೆಗು ಅಯೋಧ್ಯೆಗೆ ಬಂದರೂ.. ಕಟ್ಟಕಡೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮನ ಮೂರ್ತಿಗೆ ಕರ್ನಾಟಕದ ಕಾರ್ಕಳದ ನೆಲ್ಲಿಕಾರಿನಿಂದ ಹೋಗಿದ್ದ ಕೃಷ್ಣಶಿಲೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಚಿತಪಡಿಸಿದೆ.


ಅಯೋಧ್ಯೆ (ಏ.19): ಮುಂದಿನ ವರ್ಷ ಮಕರ ಸಂಕ್ರಾಂತಿಯಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೂಲ ಗರ್ಭಗುಡಿಯಲ್ಲಿ ರಾಮ ಲಲ್ಲಾನ ಹೊಸ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದಕ್ಕಾಗಿ ಶ್ರೀರಾಮನ ಭಕ್ತರು ಹಾಗೂ ಅಪಾರ ಹಿಂದುಗಳು ತಾಳ್ಮೆಯಿಂದ ಈವರೆಗೂ ಕಾದಿದ್ದು, ಈ ನಡುವೆ ಶ್ರೀರಾಮಮಂದಿರ ಟ್ರಸ್ಟ್‌ ಹೊಸ ವಿಗ್ರಹದ ವಿಚಾರವಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರಾಗಿರುವ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಈ ಕುರಿತಾಗಿ ವಿಚಾರವನ್ನು ಖಚಿತಪಡಿಸಿದ್ದಾರೆ. ಪ್ರಖ್ಯಾತ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ರಾಮಲಲ್ಲಾನ ವಿಗ್ರಹವನ್ನು ಕೆತ್ತನೆ ಮಾಡಲಿದ್ದಾರೆ. ಬಿಲ್ಲುಗಾರನ ರೀತಿಯಲ್ಲಿರುವ 5 ವರ್ಷದ ವಯಸ್ಸಿನ ಶ್ರೀರಾಮನ ಮೂರ್ತಿಯನ್ನು ಅರುಣ್‌ ಕೆತ್ತಲಿದ್ದು, ಅದಕ್ಕಾಗಿ ಕರ್ನಾಟಕದ ಕಾರ್ಕಳ ತಾಲೂಕಿನ ನೆಲ್ಲಿಕಾರಿನಿಂದ ಅಯೋಧ್ಯೆಗೆ ಹೋಗಿದ್ದ ಕೃಷ್ಣಶಿಲೆಯನ್ನು ಬಳಕೆ ಮಾಡಲಿದ್ದಾರೆ. 

'ಶ್ರೀರಾಮನ ವಿಗ್ರಹ ಐದು ಫೀಟ್‌ ಎತ್ತರ ಇರಲಿದೆ. 5 ವರ್ಷದ ಶ್ರೀರಾಮ ಬಿಲ್ಲು ಹಾಗೂ ಬಾಣವನ್ನು ಹಿಡಿದುಕೊಂಡಿರುವಂತೆ, ನಿಂತ ಸ್ಥಿತಿಯಲ್ಲಿ ವಿಗ್ರಹವನ್ನು ಕೆತ್ತಲಾಗುತ್ತದೆ' ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿದ್ದಾರೆ. ಮಂಗಳವಾರ ಮುಕ್ತಾಯಗೊಂಡ  ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ 2 ದಿನಗಳ ಪ್ರಮುಖ ಸಭೆಯ ಬಳಿಕ  ಶ್ರೀರಾಮನ ವಿಗ್ರಹದ ಕುರಿತಾದ ನಿರ್ಧಾರವನ್ನು ಮಾಡಲಾಗಿದೆ. ಕಳೆದ ತಿಂಗಳು ಕಾರ್ಕಳದ ನೆಲ್ಲಿಕಾರು ಗ್ರಾಮದಿಂದ ಬೃಹತ್‌ ಕೃಷ್ಣಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗಿತ್ತು.ಈ ತಿಂಗಳ ಆರಂಭದಲ್ಲಿ ಈ ಶಿಲೆ ಅಯೋಧ್ಯೆಗೆ ತಲುಪಿದೆ. ಇದರಲ್ಲಿಯೇ ಶ್ರೀರಾಮನ ವಿಗ್ರಹ ಕೆತ್ತನೆಯಾಗಲಿದೆ ಎಂದು ಟ್ರಸ್ಟ್‌ ನಿರ್ಧಾರ ಮಾಡಿದೆ.

ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥದಲ್ಲಿ 12 ಫೀಟ್‌ ಎತ್ತರದ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಅನಾವರಣ ಮಾಡಿದ್ದರು. ಈ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌. ಮೈಸೂರು ಅರಮನೆಯ ವಿನ್ಯಾಸಗಾರರ ಕುಟುಂಬದಿಂದ ಬಂದವರಾದ ಅರುಣ್‌ ಅವರ ತಂದೆ ಯೋಗಿರಾಜ್‌ ಶಿಲ್ಪಿ ಕೂಡ ಪ್ರಖ್ಯಾತ ಶಿಲ್ಪಿಯಾಗಿ ಹೆಸರು ಮಾಡಿದ್ದಾರೆ. ಅದರೊಂದಿಗೆ ಇಂಡಿಯಾ ಗೇಟ್‌ನಲ್ಲಿ ನಿರ್ಮಾಣವಾಗಿರುವ 28 ಫೀಟ್‌ ಎತ್ತರದ ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರ ಕಪ್ಪು ಗ್ರ್ಯಾನೈಟ್‌ನ ಪ್ರತಿಮೆಯನ್ನೂ ಕೂಡ ಅರುಣ್‌ ಯೋಗಿರಾಜ್‌ ಕೆತ್ತಿದ್ದಾರೆ.ಇದನ್ನೂ ಕೂಡ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣೆ ಮಾಡಿದ್ದರು.

 

Tap to resize

Latest Videos

undefined

Ram Sita Statue: ಗಂಡಕಿ ನದಿಯಿಂದ ತೆಗೆದ 40 ಟನ್‌ ತೂಕದ ಸಾಲಿಗ್ರಾಮ ಶಿಲೆ, 30ಕ್ಕೆ ಭಾರತ ಪ್ರವೇಶ!

ಅಯೋಧ್ಯೆಗೆ ತಲುಪಿರುವ ಕೃಷ್ಣಶಿಲೆ 10 ಟನ್‌ ತೂಕವಿದ್ದು, 9.5 ಫೀಟ್‌ ಎತ್ತರ ಹಾಗೂ 6 ಫೀಟ್‌ ಅಗಲವಿದೆ. ಕಾರ್ಕಳದ ನೆಲ್ಲಿಕಾರು ಗ್ರಾಮದ ಈಡುವಿನಲ್ಲಿ ಈ ಶಿಲೆ ಸಿಕ್ಕಿತ್ತು. ಬಳಿಕ ಇದನ್ನು ಅಯೋಧ್ಯೆಗೆ ಸಾಗಿಸಲಾಗಿತ್ತು. ಕಾರ್ಕಳದ ನೆಲ್ಲಿಕಾರು ಶಿಲೆಗಳನ್ನು ದೇಶ ವಿದೇಶಗಳ ವಿವಿಧ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಹಲವಾರು ಶಿಲ್ಪಗಳಲ್ಲಿ ಬಳಸಲಾಗಿದೆ. ಈ ಹಿಂದೆ ವಿಗ್ರಹದ ಕೆತ್ತನೆಗಾಗಿ ದೇಶ-ವಿದೇಶದ ಹಲವು ಸ್ಥಳಗಳಿಂದ ಬಂಡೆಗಳು ಅಯೋಧ್ಯೆಗೆ ಆಗಮಿಸಿದ್ದವು.

ಸಾಲಿಗ್ರಾಮದ ಶಿಲೆ ಸಿಗುವ ಗಂಡಕಿ ನದಿಯಿಂದ ಅಯೋಧ್ಯೆಗೆ ಬರಲಿದೆ ರಾಮನ ವಿಗ್ರಹ?

ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಈ ಕುರಿತಾಗಿ ಮಾತನಾಡಿದ್ದು 'ದೇಶದ ಉನ್ನತ ಸಂತರು, ಭೂವಿಜ್ಞಾನಿಗಳು, ಶಿಲ್ಪಿಗಳು, ಹಿಂದೂ ಧಾರ್ಮಿಕ ಗ್ರಂಥಗಳ ತಜ್ಞರು, ಶಿಲೆಗಳನ್ನು ಪರಿಶೀಲಿಸುವ ಎಂಜಿನಿಯರ್‌ಗಳು ಮತ್ತು ಮಂದಿರ ಟ್ರಸ್ಟ್‌ನ ಪದಾಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡವು ಶಿಲೆಗಳ ಮೇಲೆ ಆಳವಾದ ತಾಂತ್ರಿಕ ಮತ್ತು ಧಾರ್ಮಿಕ ಅಧ್ಯಯನವನ್ನು ನಡೆಸಿ ಈ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

click me!