300 ಕೋಟಿಯ ರಾಮಮಂದಿರ| ಆ.3 ಅಥವಾ 5ಕ್ಕೆ ಭೂಮಿಪೂಜೆ\ ಪ್ರಧಾನಿ ಮೋದಿಗೆ ಆಹ್ವಾನ\ ದೇಗುಲ ಟ್ರಸ್ಟ್ ನಿರ್ಧಾರ| ನ.25ರಿಂದ ಡಿ.25ರವರೆಗೆ ನಿಧಿ ಸಂಗ್ರಹ: ಪೇಜಾವರಶ್ರೀ
ನವದೆಹಲಿ/ಉಡುಪಿ(ಜು.19): ಹಿಂದೂಗಳ ಶತಮಾನದ ಕನಸಾದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಇದೇ ಆಗಸ್ಟ್ 3 ಅಥವಾ 5 ರಂದು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನಿರ್ಧರಿಸಿದೆ. ಸುಮಾರು 300 ಕೋಟಿ ರು. ವೆಚ್ಚದಲ್ಲಿ ದೇಗುಲ ಮತ್ತು ಅಂದಾಜು 1000 ಕೋಟಿ ರು. ವೆಚ್ಚದಲ್ಲಿ 67.3 ಎಕರೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲೂ ನಿರ್ಧರಿಸಲಾಗಿದೆ. ಜೊತೆಗೆ ಶನಿವಾರ ನಡೆದ ಈ ಮಹತ್ವದ ಸಭೆಯಲ್ಲಿ ಮಂದಿರದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಲೂ ನಿರ್ಧರಿಸಲಾಗಿದೆ.
ಅಯೋಧ್ಯೆಯಲ್ಲಿ ನಡೆದ ಸಭೆಗೆ ಟ್ರಸ್ಟ್‌ನ 15 ಸದಸ್ಯರ ಪೈಕಿ 12 ಜನ ಸ್ವತಃ ಭಾಗಿಯಾಗಿದ್ದರೆ, ಟ್ರಸ್ಟಿನ ವಿಶ್ವಸ್ಥರಲ್ಲೊಬ್ಬರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಮೂವರು ವಿಡಿಯೋ ಕಾನ್ಫರೆನ್ಸ್ ಮೂಕ ಹಾಜರಾಗಿದ್ದರು.
ಆಗಸ್ಟ್‌ನಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ: ಮೋದಿ ಭಾಗಿ ಸಾಧ್ಯತೆ!
ಸಭೆಯ ಕುರಿತು ಮಾಹಿತಿ ನೀಡಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅಯೋಧ್ಯೆಯಲ್ಲಿ 300 ಕೋಟಿ ರು.ಗಳ ವೆಚ್ಚದಲ್ಲಿ ಭವ್ಯ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವುದಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಈ ಹಣವನ್ನು ಭಕ್ತರಿಂದ ಸಂಗ್ರಹಿಸಲಾಗುತ್ತದೆ, ಅದಕ್ಕಾಗಿ ನ. 25ರಿಂದ ಡಿ. 25ರ ವರೆಗೆ 1 ತಿಂಗಳ ಅಭಿಯಾನ ನಡೆಸಲಾಗುತ್ತದೆ. ಪ್ರತಿಯೊಬ್ಬ ಭಕ್ತರು ತಲೆಗೆ 10 ರು.ಗಳಂತೆ ಮತ್ತು ಕುಟುಂಬದಿಂದ 100 ರು.ಗಳಂತೆ ಸಂಗ್ರಹಿಸುವ ಉದ್ದೇಶವಿದೆ. ಒಟ್ಟು 10 ಕೋಟಿ ಕುಟುಂಬಗಳ ಮೂಲಕ 300 ಕೋಟಿ ರು. ಸಂಗ್ರಹ ಮಾಡಲಾಗುತ್ತದೆ ಎಂದವರು ಹೇಳಿದರು.
ಅಲ್ಲದೆ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯವು ನೀಡಿರುವ 67.03 ಎಕರೆ ಭೂಮಿಯನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಅದಕ್ಕಾಗಿ 1000 ಕೋಟಿ ರು.ಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಮೊತ್ತವನ್ನು ವಿವಿಧ ಉದ್ಯಮ ಸಂಸ್ಥೆಗಳ ಸಿಆರ್‌ಎಸ್ ನಿಧಿಯಿಂದ ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಶ್ರೀಗಳು ಹೇಳಿದರು.
ತಾಮ್ರ ಪತ್ರ:
ಮಂದಿರದ ಅಡಿಯಲ್ಲಿ 200 ಅಡಿ ಆಳದಲ್ಲಿ ತಾಮ್ರಪತ್ರವನ್ನು ಅಳವಡಿಸಲು ಯೋಜಿಸಲಾಗುತ್ತದೆ. ಈ ತಾಮ್ರಪತ್ರದಲ್ಲಿ ಏನು ಬರೆಯಬೇಕು ಎಂಬುದು ಇನ್ನಷ್ಟೇ ನಿರ್ಣಯವಾಗಬೇಕಿದೆ. ಎಲ್ ಆ್ಯಂಡ್ ಟಿ ಕಂಪನಿಗೆ ಮಂದಿರ ನಿರ್ಮಾಣದ ಹೊಣೆ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.
ಅಯೋಧ್ಯೆ ರಾಮ ಮಂದಿರ ಟ್ರಸ್ಟಿಗಳ ಮಾಹಿತಿ ನಿರಾಕರಿಸಿದ ಗೃಹ ಸಚಿವಾಲಯ
161 ಅಡಿ ಎತ್ತರ:
ಇದೇ ವೇಳೆ ಸಭೆ ಬಳಿಕ ಅಯೋಧ್ಯೆಯಲ್ಲಿ ಮಾಹಿತಿ ನೀಡಿರುವ ಕಮಲೇಶ್ವರ್ ಚೌಪಾಲ್, ದೇಗುಲದ ಎತ್ತರವನ್ನು 148ರಿಂದ 161 ಅಡಿಗೆ ಏರಿಸಲು ಮತ್ತು 3ರ ಬದಲು 5 ಗೋಪುರ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ದೇಗುಲ ನಿರ್ಮಾಣ ಮೂರರಿಂದ ಮೂರೂವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
2ನೇ ಸಭೆ:
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್ ರಚನೆಯಾದ ಮೇಲೆ ಶನಿವಾರ ನಡೆದಿದ್ದು 2ನೇ ಸಭೆ. ಮೊದಲ ಸಭೆ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿತ್ತು. ಶನಿವಾರ ಆಯೋಧ್ಯೆಯಲ್ಲಿಯೇ ನಡೆದ ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ನೃತ್ಯಗೋಪಾಲದಾಸ್ ವಹಿಸಿದ್ದರು.