ರಾಜ್ಯಸಭೆ ಚುನಾವಣೆ: ಹರ್ಯಾಣದಲ್ಲಿ ಗೆಲ್ಲುವ ಚಾನ್ಸ್‌ ಇದ್ದರೂ ಸೋತ ಕಾಂಗ್ರೆಸ್‌!

Published : Jun 12, 2022, 07:48 AM ISTUpdated : Jun 12, 2022, 08:04 AM IST
ರಾಜ್ಯಸಭೆ ಚುನಾವಣೆ: ಹರ್ಯಾಣದಲ್ಲಿ ಗೆಲ್ಲುವ ಚಾನ್ಸ್‌ ಇದ್ದರೂ ಸೋತ ಕಾಂಗ್ರೆಸ್‌!

ಸಾರಾಂಶ

* ಒಬ್ಬ ಶಾಸಕನಿಂದ ಅಡ್ಡ ಮತ, ಮತ್ತೊಬ್ಬನ ಮತ ಅಸಿಂಧು * ಪಕ್ಷದ ಅಧಿಕೃತ ಅಭ್ಯರ್ಥಿ ಮಾಕನ್‌ಗೆ ಸೋಲು: ಮುಖಭಂಗ * ಬಿಜೆಪಿಗೆ 1 ಸ್ಥಾನ, ಪಕ್ಷೇತರರಾಗಿದ್ದ ಮಾಧ್ಯಮ ಉದ್ಯಮಿ ಜಯ

ಚಂಡೀಗಢ(ಜೂ.12): ಹರ್ಯಾಣ ವಿಧಾನಸಭೆಯಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರೋಚಕ ಹಾಗೂ ಅನಿರೀಕ್ಷಿತ ಫಲಿತಾಂಶ ಬಂದಿದೆ. ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ನಿರೀಕ್ಷೆಯಂತೆಯೇ ಗೆಲುವು ಸಾಧಿಸಿದ್ದರೆ, ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಹುರಿಯಾಳಾಗಿ ಅಖಾಡಕ್ಕೆ ಧುಮುಕಿದ್ದ ನ್ಯೂಸ್‌ ಎಕ್ಸ್‌ ಮಾಧ್ಯಮ ಸಂಸ್ಥೆ ಒಡೆಯ ಕಾರ್ತಿಕೇಯ ಶರ್ಮಾ ಅವರು ಅನಿರೀಕ್ಷಿತವಾಗಿ ಜಯಭೇರಿ ಬಾರಿಸಿದ್ದಾರೆ. ಗೆಲುವಿಗೆ ಬೇಕಾದಷ್ಟುಮತಗಳನ್ನು ಹೊಂದಿದ್ದರೂ, ಅಡ್ಡ ಮತ ಹಾಗೂ ಅಸಿಂಧು ಮತಗಳಿಂದಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಅಜಯ್‌ ಮಾಕನ್‌ ಸೋಲುಂಡಿದ್ದಾರೆ. ಹೀಗಾಗಿ ಗೆಲ್ಲುವ ಅವಕಾಶ ಕಳೆದುಕೊಂಡ ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿದೆ.

ಚುನಾವಣೆ ನಿಯಮಗಳ ಉಲ್ಲಂಘನೆ ಕುರಿತು ದೂರು- ಪ್ರತಿ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಹೈಡ್ರಾಮಾ ನಡೆದು, ಶನಿವಾರ ನಸುಕಿನ ಜಾವ 2 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಯಿತು. 90 ಸದಸ್ಯ ಬಲದ ಹರಾರ‍ಯಣ ವಿಧಾನಸಭೆಯಲ್ಲಿ ಪ್ರತಿ ಅಭ್ಯರ್ಥಿ ಜಯಕ್ಕೆ 31 ಮತಗಳ ಅಗತ್ಯವಿತ್ತು. ಆದರೆ ಪಕ್ಷೇತರ ಶಾಸಕರೊಬ್ಬರು ಗೈರು ಹಾಜರಾದರು. ಇನ್ನೊಂದೆಡೆ, ಒಬ್ಬ ಶಾಸಕನ ಮತ ಅಸಿಂಧುವಾಯಿತು. ಹೀಗಾಗಿ ಗೆಲ್ಲಲು 29.34ಗಳು ಸಾಕಾಗಿದ್ದವು.

ಬಿಜೆಪಿ ಬಳಿ 40 ಶಾಸಕರು, ಕಾಂಗ್ರೆಸ್ಸಿನ ಬಳಿ 31 ಶಾಸಕರು ಇದ್ದರು. ಎರಡೂ ಪಕ್ಷಗಳು ಸುಲಭವಾಗಿ ಎರಡು ಸ್ಥಾನ ಗೆಲ್ಲಬಹುದಾಗಿತ್ತು. ಆದರೆ ಬಿಜೆಪಿ ಬೆಂಬಲದೊಂದಿಗೆ ಕಾರ್ತಿಕೇಯ ಶರ್ಮಾ ಅವರು ಪಕ್ಷೇತರರಾಗಿ ಅಖಾಡಕ್ಕೆ ಇಳಿದರು. ಕಾಂಗ್ರೆಸ್ಸಿನ ಒಬ್ಬ ಶಾಸಕನ ಮತ ಅಸಿಂಧು ಹಾಗೂ ಕಾಂಗ್ರೆಸ್‌ ಶಾಸಕ ಕುಲದೀಪ್‌ ಬಿಷ್ಣೋಯಿ ಅವರು ಕಾರ್ತಿಕೇಯ ಪರ ಮತ ಹಾಕಿದ್ದರಿಂದ ಆ ಪಕ್ಷದ ಅಭ್ಯರ್ಥಿ 29 ಮತಗಳನ್ನಷ್ಟೇ ಪಡೆದರು. ಈ ನಡುವೆ, ಬಿಜೆಪಿಯಿಂದ ವರ್ಗಾವಣೆಯಾದ ಮತಗಳೂ ಸೇರಿ ಕಾರ್ತಿಕೇಯ ಅವರಿಗೆ 29.66 ಮತಗಳು ಲಭಿಸಿದವು. ಬಿಜೆಪಿ ಅಭ್ಯರ್ಥಿ ನಿಗದಿಯಷ್ಟುಮತಗಳನ್ನು ಪಡೆದರು. ಹೀಗಾಗಿ ಕಾಂಗ್ರೆಸ್‌ ಸೋಲುಂಡಿತು.

ಮಾಕನ್‌ ಗೆದ್ದರೆಂದು ಸಂಭ್ರಮ ಆಚರಿಸಿದ್ದ ಕಾಂಗ್ರೆಸ್ಸಿಗೆ ಮುಜುಗರ

ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಅಜಯ್‌ ಮಾಕನ್‌ ಗೆದ್ದಿದ್ದಾರೆ ಎಂದು ಸಂಭ್ರಮಾಚರಣೆ ಮಾಡಿತ್ತು. ಆ ಪಕ್ಷಕ್ಕೆ ತನ್ನ ಅಭ್ಯರ್ಥಿಯ ಮತ ಅಸಿಂಧುವಾಗಿದೆ ಎಂಬುದು ತಿಳಿದಿರಲಿಲ್ಲ. ಎಣಿಕೆ ನಂತರ ತನ್ನ ಅಭ್ಯರ್ಥಿ ಸೋತಿದ್ದಾರೆ ಎಂದು ತಿಳಿದು ಮುಜುಗರಕ್ಕೆ ಒಳಗಾಯಿತು. ಮಾಕನ್‌ ಗೆದ್ದಿದ್ದಾರೆ ಎಂಬ ಟ್ವೀಟ್‌ ಅನ್ನು ಪಕ್ಷ ಡಿಲೀಟ್‌ ಮಾಡಿತು.

ಕಾಂಗ್ರೆಸ್ಸಿಗೆ ದುಬಾರಿಯಾದ ಬಿಷ್ಣೋಯಿ ಅಡ್ಡಮತ

ಚಂಡೀಗಢ: ಕಾಂಗ್ರೆಸ್‌ ಶಾಸಕ ಕುಲದೀಪ್‌ ಬಿಷ್ಣೋಯಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದು ಆ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ. ಆ ಒಂದು ಮತ ಅಜಯ್‌ ಮಾಕನ್‌ ಪರ ಚಲಾವಣೆಯಾಗಿದ್ದರೂ ಅವರು ಜಯ ಸಾಧಿಸುತ್ತಿದ್ದರು. ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದ ಬಿಷ್ಣೋಯಿ ಅವರು, ಕಾಂಗ್ರೆಸ್‌ ತನ್ನೆಲ್ಲಾ ಶಾಸಕರನ್ನು ರಾಯಪುರಕ್ಕೆ ಸ್ಥಳಾಂತರಿಸಿದ್ದರೂ ಹೋಗಿರಲಿಲ್ಲ. ಮೊದಲಿಗರಾಗಿ ಬಂದು ಅಡ್ಡಮತದಾನ ಮಾಡಿದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಕಾಂಗ್ರೆಸ್‌ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ