
ನವದೆಹಲಿ(ಜೂ.12): 57 ಸ್ಥಾನಗಳಿಗೆ ನಡೆದಿದ್ದ ರಾಜ್ಯಸಭೆ ಚುನಾವಣಾ ಪ್ರಕ್ರಿಯೆ ಹಲವು ತಾಂತ್ರಿಕ ಅಡ್ಡಿ-ಆತಂಕದ ನಡುವೆ ಭಾನುವಾರ ಬೆಳಗಿನ ಜಾವ ಪೂರ್ಣಗೊಂಡಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಅತಿ ಹೆಚ್ಚು ಸ್ಥಾನ ಗಳಿಸಿದ ಕೂಟವಾಗಿ ಹೊರಹೊಮ್ಮಿದೆ. ತೆರವಾಗಿದ್ದ ಒಟ್ಟು 57 ಸ್ಥಾನಗಳ ಪೈಕಿ ಬಿಜೆಪಿ ಹಾಗೂ ಮಿತ್ರರು 26ರಲ್ಲಿ ಜಯಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎಗೆ 17 ಹಾಗೂ ಇತರರಿಗೆ 14 ಸ್ಥಾನಗಳು ಲಭ್ಯವಾಗಿವೆ.
ಚುನಾವಣೆಯ ಆರಂಭದಲ್ಲೇ 57ರ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಅದರಲ್ಲಿ ಬಿಜೆಪಿ 17, ಕಾಂಗ್ರೆಸ್ 10 ಹಾಗೂ ಇತರರು 14 ಸ್ಥಾನ ಸಂಪಾದಿಸಿದ್ದರು. ಈಗ ಉಳಿದ 16 ಕ್ಷೇತ್ರಗಳಿಗೆ 4 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರರು 9 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ 7 ಸ್ಥಾನಗಳಲ್ಲಿ ಗೆದ್ದಿದೆ.
ರಾಜಸ್ಥಾನದಲ್ಲಿ 3 ಕಾಂಗ್ರೆಸ್‌ಗೆ, ಬಿಜೆಪಿಗೆ 1; ಕರ್ನಾಟಕದಲ್ಲಿ ಬಿಜೆಪಿಗೆ 3, ಕಾಂಗ್ರೆಸ್‌ಗೆ 1; ಮಹಾರಾಷ್ಟ್ರದಲ್ಲಿ ಯುಪಿಎಗೆ 3, ಬಿಜೆಪಿಗೆ 3 ಹಾಗೂ ಹರ್ಯಾಣದಲ್ಲಿ ಬಿಜೆಪಿಗೆ 1 ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರಗೆ 1 ಸ್ಥಾನ ಬಂದಿವೆ. ಈ ಬಾರಿಯ ರಾಜ್ಯಸಭೆ ಚುನಾವಣೆ ನಂತರ ಬಿಜೆಪಿ ಮೊದಲಿಗಿಂತ 2 ಸ್ಥಾನ ಕಡಿಮೆಗೆ ಇಳಿದಿದ್ದರೆ, ಕಾಂಗ್ರೆಸ್ 2 ಸ್ಥಾನ ಹೆಚ್ಚಿಸಿಕೊಂಡಿದೆ.
ಗೆದ್ದ ಪ್ರಮುಖರು:
ಕೇಂದ್ರ ಸಚಿವರಾದ ಪೀಯೂಶ್ ಗೋಯಲ್, ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ, ಪಿ.ಚಿದಂಬರಂ, ಸಮಾಜವಾದಿ ಪಾರ್ಟಿ ಬೆಂಬಲಿತ ಪಕ್ಷೇತರ ಕಪಿಲ್ ಸಿಬಲ್, ಆರ್‌ಎಲ್‌ಡಿಯ ಜಯಂತ ಚೌಧರಿ, ಆರ್‌ಜೆಡಿಯ ಮಿಸಾ ಭಾರತಿ, ವೈಎಸ್ಸಾರ್ ಕಾಂಗ್ರೆಸ್‌ನ ವಿಜಯಸಾಯಿ ರೆಡ್ಡಿ ಈ ಚುನಾವಣೆಯಲ್ಲಿ ಗೆದ್ದಿರುವ ಪ್ರಮುಖರು. ಪಕ್ಷೇತರ ಸುಭಾಷ್ ಚಂದ್ರ, ಕಾಂಗ್ರೆಸ್‌ನ ಅಜಯ್ ಮಾಕನ್ ಸೋತ ಪ್ರಮುಖರು.
ಎಲ್ಲಿ ಎಷ್ಟು ಸ್ಥಾನ?:
ಉತ್ತರಪ್ರದೇಶದ 11, ತಮಿಳುನಾಡು, ಮಹಾರಾಷ್ಟ್ರದ ತಲಾ 6, ಬಿಹಾರದ 5, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನದ ತಲಾ 4, ಮಧ್ಯಪ್ರದೇಶ, ಒಡಿಶಾದ ತಲಾ 3, ತೆಲಂಗಾಣ, ಛತ್ತೀಸ್‌ಗಢ, ಪಂಜಾಬ್, ಜಾರ್ಖಂಡ್, ಮತ್ತು ಹರ್ಯಾಣದ ತಲಾ 2 ಮತ್ತು ಉತ್ತರಾಖಂಡದ 1 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಒಟ್ಟಾರೆ 57 ಸ್ಥಾನದ ಫಲಿತಾಂಶ
ಕೂಟ ಸ್ಥಾನ
ಎನ್‌ಡಿಎ 26
ಯುಪಿಎ 17
ಇತರರು 14
ಮತದಾನ ನಡೆದ 16 ಸ್ಥಾನದ ಫಲಿತಾಂಶ
ಕೂಟ ಸ್ಥಾನ
ಎನ್‌ಡಿಎ 9
ಯುಪಿಎ 7
ಇತರರು 00
41 ಅವಿರೋಧ ಆಯ್ಕೆ
ಬಿಜೆಪಿ 17
ಕಾಂಗ್ರೆಸ್ 10
ಇತರರು 14
ಇನ್ನಿತರ ಪ್ರಮುಖ ಅಂಕಿ ಅಂಶ
57: ರಾಜ್ಯಸಭೆಯಲ್ಲಿ ತೆರವಾಗಿದ್ದ ಒಟ್ಟು ಸ್ಥಾನ
41: ಅವಿರೋಧ ಆಯ್ಕೆಯಾಗಿದ್ದ ಸ್ಥಾನಗಳು
16: ಚುನಾವಣೆ ನಡೆದ ಒಟ್ಟು ಸ್ಥಾನಗಳು
26: ಎನ್‌ಡಿಎಗೆ ದೊರೆತ ಒಟ್ಟು ಸ್ಥಾನಗಳು
17:ಯುಪಿಎ ಅಂಗಪಕ್ಷಗಳಿಗೆ ದೊರೆತ ಸ್ಥಾನ
14: ಇತರ ಪಕ್ಷ/ಅಭ್ಯರ್ಥಿ ಪಡೆದ ಸ್ಥಾನಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ