ರಜನಿ ರಾಜಕೀಯ ಮತ್ತೆ ಸಸ್ಪೆನ್ಸ್‌: ಭಾರೀ ಸಂಚಲನ ಮೂಡಿಸಿದೆ ಆಪ್ತನ ಹೇಳಿಕೆ!

By Suvarna NewsFirst Published Feb 5, 2021, 8:18 AM IST
Highlights

ರಜನಿ ರಾಜಕೀಯ ಮತ್ತೆ ಸಸ್ಪೆನ್ಸ್‌| ಎಂದಿಗೂ ರಾಜಕಾರಣಕ್ಕೆ ಬರಲ್ಲ ಎಂದು ರಜನಿ ಹೇಳಿಲ್ಲ| ಸದ್ಯಕ್ಕೆ ಬರಲ್ಲ ಎಂದಿದ್ದಾರೆ: ಆಪ್ತನ ಹೇಳಿಕೆ ಸಂಚಲನ

ಚೆನ್ನೈ(ಫೆ.05): ಸಕ್ರಿಯ ರಾಜಕಾರಣ ಪ್ರವೇಶಿಸುವುದಿಲ್ಲ ಎಂದು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು ಘೋಷಿಸಿದ ಒಂದು ತಿಂಗಳ ಬಳಿಕ ಮತ್ತೊಮ್ಮೆ ಅವರ ರಾಜಕೀಯ ಪ್ರವೇಶ ಕುರಿತು ಸಂಚಲನ ಮೂಡುವಂತಾಗಿದೆ. ರಜನೀ ಅವರು ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆಯೇ ಹೊರತು, ಎಂದಿಗೂ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ಹೇಳಿಲ್ಲ ಎಂದು ಅವರ ಆಪ್ತರಾಗಿರುವ ತಮಿಳರುವಿ ಮಣಿಯನ್‌ ಹೇಳಿರುವುದು ಚರ್ಚೆಗಳಿಗೆ ಕಾರಣವಾಗಿದೆ.

ನಾಳೆ ರಜನೀಕಾಂತ್‌ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದರೆ ತಮ್ಮ ನೇತೃತ್ವದ ಸಂಘಟನೆ ಗಾಂಧಿಯ ಮಕ್ಕಳ್‌ ಇಯಕ್ಕಮ್‌ ಕೂಡ ಅವರ ಜತೆಗೂಡಲಿದೆ. ಒಂದು ವೇಳೆ ರಜನಿ ಅವರು ರಾಜಕೀಯದಿಂದ ದೂರವೇ ಉಳಿದರೆ ಸೋದರ ಸಂಘಟನೆಯಾಗಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.

ರಜನೀಕಾಂತ್‌ ಅವರು ಸ್ಥಾಪಿಸಿದ್ದ ರಜನಿ ಮಕ್ಕಳ್‌ ಮಂದ್ರಂ ಸಂಘಟನೆಯಿಂದ ಪದಾಧಿಕಾರಿಗಳನ್ನು ಸೆಳೆಯಲು ರಾಜಕೀಯ ಶಕ್ತಿಗಳು ಯತ್ನಿಸುತ್ತಿವೆ. ಈಗಾಗಲೇ ಕೆಲವರು ರಾಜಕೀಯ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಇನ್ನಷ್ಟುಮುಂದಿ ಜಾಗ ಹುಡುಕುತ್ತಿದ್ದಾರೆ. ಈ ಸಂದರ್ಭದ ಲಾಭ ಪಡೆಯಲು ತಾವು ಯತ್ನಿಸುವುದಿಲ್ಲ. ರಜನಿ ಸಂಘಟನೆಯ ಸಭೆಯನ್ನು ಮಾ.7ರಂದು ತಿರುಪುರ್‌ನಲ್ಲಿ ನಡೆಸುತ್ತೇವೆ. ರಜನೀಕಾಂತ್‌ ಅವರು ಇನ್ನೂ ಮಂದ್ರಂ ಸಂಘಟನೆಯನ್ನು ವಿಸರ್ಜಿಸಿಲ್ಲ ಎಂದು ಹೇಳಿದ್ದಾರೆ.

ಹೊಸ ಪಕ್ಷ ಕಟ್ಟಿಸಕ್ರಿಯ ರಾಜಕಾರಣ ಪ್ರವೇಶಿಸುವುದಾಗಿ ರಜನೀಕಾಂತ್‌ ಘೋಷಿಸಿದ್ದರು. ಆದರೆ ಅಣ್ಣಾಟೆ ಸಿನಿಮಾ ಶೂಟಿಂಗ್‌ ವೇಳೆ ಕೊರೋನಾ ಸೋಂಕಿಗೆ ತುತ್ತಾದ ಅವರು ರಾಜಕಾರಣ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ಇದರಿಂದ ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿತ್ತು.

click me!