
ಬಾಲಸೋರ್ (ಒಡಿಶಾ): ಇಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 3 ನಿದ್ರೆಯಿಲ್ಲದ ರಾತ್ರಿಗಳು ಮತ್ತು 2 ವಿಶ್ರಾಂತಿ ಇಲ್ಲದ ಹಗಲುಗಳನ್ನು ಘಟನಾ ಸ್ಥಳದಲ್ಲೇ ಕಳೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಬಳಿಕ ಹೊಸ ಹಳಿಗಳನ್ನು ಜೋಡಿಸಿ, ರೈಲು ಸಂಚಾರ ಆರಂಭವಾಗುವವರೆಗೆ ಶ್ರಮವಹಿಸಿ ಕರ್ತವ್ಯ ಪಾಲನೆ ಮಾಡಿದ್ದಾರೆ. ಒಂದು ಕಡೆ ವಿಪಕ್ಷಗಳು ಸೇರಿ ಹಲವರು ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರೂ, ಇನ್ನೊಂದು ಕಡೆ ವೈಷ್ಣವ್ ಅವರ ಈ ಶ್ರಮ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
3 ದಿನ ಹಗಲು-ರಾತ್ರಿ ಶ್ರಮ:
ಗೋವಾ ಮತ್ತು ಮುಂಬೈ ಸಂಪರ್ಕಿಸುವ ವಂದೇ ಭಾರತ್ ರೈಲು ಚಾಲನೆ ಸಮಾರಂಭಕ್ಕಾಗಿ ಶುಕ್ರವಾರ ಸಾಯಂಕಾಲ ಸಚಿವ ವೈಷ್ಣವ್ ಗೋವಾಗೆ (Goa) ಹೋಗಿದ್ದರು. ಆದರೆ ಅದೇ ವೇಳೆ ರೈಲು ಅಪಘಾತದ ಸುದ್ದಿ ಬಂತು. ವಿಷಯ ತಿಳಿದು ದೆಹಲಿಗೆ ವಿಮಾನದಲ್ಲಿ ಶುಕ್ರವಾರ ರಾತ್ರಿಯೇ ಮರಳಿದರು. ವಿಮಾನ ನಿಲ್ದಾಣದಲ್ಲೇ ಕುಳಿತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಆದರೆ, ಒಡಿಶಾಗೆ (Odisha)ಹೋಗುವ ವಿಮಾನ ಶನಿವಾರ ಬೆಳಗ್ಗೆ 4 ಗಂಟೆಗೆ ಇತ್ತು. ಹೀಗಾಗಿ ಅಲ್ಲಿಯವರೆಗೆ ಕಾಯದೇ ಬೆಳಗ್ಗೆ 3 ಗಂಟೆಗೇ ಬಾಡಿಗೆ ವಿಮಾನ ಮಾಡಿಕೊಂಡು ಒಡಿಶಾ ತಲುಪಿದರು. ತಕ್ಷಣವೇ ಘಟನಾ ಸ್ಥಳವನ್ನು ತಲುಪಿ ಮೇಲ್ವಿಚಾರಣೆ ಆರಂಭಿಸಿದರು.
ಬಳಿಕ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಘಟನೆಯ ವಿವರಗಳನ್ನು ತಿಳಿಸಿ, ಸ್ಥಳೀಯ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು. ನಿರಂತರವಾಗಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗದಂತೆ ಎಚ್ಚರ ವಹಿಸಿದರು. ಬಳಿಕ ಶನಿವಾರ ಇಡೀ ರಾತ್ರಿ ಘಟನೆ ನಡೆದ ಸ್ಥಳದಲ್ಲೇ ಇದ್ದುಕೊಂಡು ರಕ್ಷಣಾ ಕಾರ್ಯಾಚರಣೆಯ ಬಳಿಕ ಹಳಿ ಅಳವಡಿಸುವ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಬದಲಾದ ಬೋಗಿ, ಬದುಕುಳಿಯಿತು ಜೀವ; ಅಪಘಾತ ರೈಲಿನಲ್ಲಿದ್ದ 110 ಕನ್ನಡಿಗರು ಸೇಫ್!
ಇನ್ನು ಭಾನುವಾರ ಕೂಡ ಬೆಳಗ್ಗೆ ಕಾರ್ಮಿಕರ ಜತೆಗೇ ನಿಂತು ಹಳಿ ಜೋಡಣೆ ಕಾರ್ಯ ಪೂರ್ಣ ಆಗುವಂತೆ ನೋಡಿಕೊಂಡರು. ಭಾನುವಾರ ರಾತ್ರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಮೊದಲ ರೈಲು ಸಂಚಾರ ಆರಂಭಿಸಿದಾಗ, ಕೈಬೀಸಿ ಹಾಗೂ ರೈಲಿನೆದುರೇ ಕೈಮುಗಿದು ಕರ್ತವ್ಯ ಪೂರ್ತಿಗೊಳಿಸಿದರು. ವೈಷ್ಣವ್ ಅವರ ಈ ಕಾರ್ಯತತ್ಪರತೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
Odisha Train Tragedy: ಚಿಕ್ಕಮಗಳೂರಿನ 110 ಜೈನ ಯಾತ್ರಾರ್ಥಿಗಳು ಬದುಕಿರುವುದಕ್ಕೆ ತಿರುವೇ ವಿಶಾಪಟ್ಟಣಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ