ಅಮೆರಿಕ, ಯುರೋಪಿಯನ್‌ ದೇಶಗಳು ಭಾರತದ ರಕ್ಷಣೆಗೆ ಬರಬೇಕು: ರಾಹುಲ್‌ ವಿವಾದ; ಬಿಜೆಪಿ ಆಕ್ರೋಶ

Published : Mar 08, 2023, 08:13 AM IST
ಅಮೆರಿಕ, ಯುರೋಪಿಯನ್‌ ದೇಶಗಳು ಭಾರತದ ರಕ್ಷಣೆಗೆ ಬರಬೇಕು: ರಾಹುಲ್‌ ವಿವಾದ; ಬಿಜೆಪಿ ಆಕ್ರೋಶ

ಸಾರಾಂಶ

ಭಾರತದಲ್ಲಿ ಪ್ರಜಾತಂತ್ರ ಸತ್ತಿದೆ ಎಂದು ರಾಹುಲ್‌ ಗಾಂಧಿ ಹೇಳಿದ್ದು, ಯುರೋಪ್‌, ಅಮೆರಿಕ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ರವಿಶಂಕರ ಪ್ರಸಾದ್‌, ಭಾರತದಲ್ಲಿ ವಿದೇಶಿ ಹಸ್ತಕ್ಷೇಪ ಸಲ್ಲದು ಎಂದು ಹೇಳಿದ್ದಾರೆ. 

ನವದೆಹಲಿ (ಮಾರ್ಚ್‌ 8, 2023): ಲಂಡನ್‌ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ನಾಐಕ ರಾಹುಲ್‌ ಗಾಂಧಿ ಇದೀಗ ‘ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಸಲು ಅಮೆರಿಕ ಹಾಗೂ ಯುರೋಪ್‌ ಮುಂದೆ ಬರಬೇಕು’ ಎಂದು ಕರೆ ಕೊಟ್ಟಿದ್ದಾರೆ.

ಏಕೆ ಸುಮ್ಮನಿದ್ದೀರಿ?
ಯುರೋಪ್‌ ಹಾಗೂ ಅಮರಿಕ ಪ್ರಜಾಪ್ರಭುತ್ವದ ರಕ್ಷಕ ದೇಶಗಳು. ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜಗೊಂಡಿದೆ ಎಂಬುದನ್ನು ಏಕೆ ಮರೆತಿವೆ?
ರಾಹುಲ್‌ ಗಾಂಧಿ

ಇದನ್ನು ಓದಿ: ರಾಹುಲ್‌ ಗಾಂಧಿ ಭಾರತ ವಿರೋಧಿ ಏಜೆನ್ಸಿಯಲ್ಲಿ ಏಜೆಂಟರಾಗಿ ಕೆಲಸ ಮಾಡ್ತಿದ್ದಾರಾ..? ಬಿಜೆಪಿ ಪ್ರಶ್ನೆ

ರಾಹುಲ್‌ ಆಡಿರುವ ಈ ಮಾತು ಭಾರಿ ವಿವಾದಕ್ಕೆ ಕಾರಣವಾಗಿದ್ದು, ‘ವಿದೇಶಿ ನೆಲದಲ್ಲಿ ರಾಹುಲ್‌ ಭಾರತವನ್ನು ಅವಮಾನ ಮಾಡುತ್ತಿದ್ದಾರೆ ಹಾಗೂ ಭಾರತದ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಮೊರೆ ಇಡುತ್ತಿದ್ದಾರೆ’ ಎಂದು ಬಿಜೆಪಿ ಕಿಡಿ ಕಾರಿದೆ. 

ಬ್ರಿಟಿಷ್‌ ಕಾಲಮಾನ ಸೋಮವಾರ ಸಂಜೆ ಲಂಡನ್‌ನ ಚಾಥಮ್‌ ಹೌಸ್‌ ಚಿಂತಕರ ಚಾವಡಿಯಲ್ಲಿ ಮಾತನಾಡಿದ ರಾಹುಲ್‌, ‘ಯುರೋಪ್‌ ಹಾಗೂ ಅಮೆರಿಕ ಪ್ರಜಾಪ್ರಭುತ್ವದ ರಕ್ಷಕ ದೇಶಗಳು. ಭಾರತದಲ್ಲಿ ಪ್ರಜಾಪ್ರಭುತ್ವ ನಿಸ್ತೇಜಗೊಂಡಿದೆ ಎಂಬುದನ್ನು ಏಕೆ ಮರೆತಿವೆ?’ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ, ಭಾರತದಲ್ಲಿ ವಿದೇಶಗಳ ಹಸ್ತಕ್ಷೇಪವನ್ನು  ಆಹ್ವಾನಿಸಿದ್ದಾರೆ. ‘ಭಾರತದಲ್ಲಿ ಪ್ರಜಾಪ್ರಭುತ್ವವು ಜಾಗತಿಕ ಹಾಗೂ ಸಾರ್ವಜನಿಕರ ಒಳಿತಿಗೆ ಇದೆ. ಇದು ನಮ್ಮ ಗಡಿಗಳ ಆಚೆಯೂ ಪರಿಣಾಮ ಬೀರುತ್ತದೆ. ಭಾರತೀಯ ಪ್ರಜಾಪ್ರಭುತ್ವವು ಕುಸಿದರೆ, ನನ್ನ ದೃಷ್ಟಿಯಲ್ಲಿ, ಭೂಮಿಯ ಮೇಲಿನ ಪ್ರಜಾಪ್ರಭುತ್ವವು ಅತ್ಯಂತ ಗಂಭೀರವಾದ, ಪ್ರಾಯಶ: ಮಾರಣಾಂತಿಕ ಹೊಡೆತವನ್ನು ಅನುಭವಿಸುತ್ತದೆ. ಆದ್ದರಿಂದ, ಇದು ನಮಗೆ ಮಾತ್ರವಲ್ಲ, ನಿಮಗೂ (ಪಾಶ್ಚಾತ್ಯ ದೇಶಗಳಿಗೂ) ಮುಖ್ಯವಾಗಿದೆ. ನಾವು ನಮ್ಮ ಸಮಸ್ಯೆಯನ್ನು ನಿಭಾಯಿಸುತ್ತೇವೆ. ಆದರೆ ಈ ಸಮಸ್ಯೆಯೂ ಜಾಗತಿಕ ಮಟ್ಟದಲ್ಲೂ ಪ್ರಭಾವ ಬೀರುತ್ತದೆ ಎಂದು ನೀವು ತಿಳಿದಿರಬೇಕು. ಅದರ ಬಗ್ಗೆ ನೀವು ಏನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಭಾರತದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕು. ಪ್ರಜಾಪ್ರಭುತ್ವ ಮಾದರಿಯ ಕಲ್ಪನೆಯ ಮೇಲೆ ದಾಳಿ ಆಗುತ್ತಿದೆ ಮತ್ತು ಬೆದರಿಕೆ ಇದೆ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ’ ಎಂದು ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿಯಂಥ ಬಚ್ಚಾ ಕಟ್ಟಿಕೊಂಡು ಕಾಂಗ್ರೆಸ್ ಏನು ಮಾಡಲು ಸಾಧ್ಯ?: ಬಿಎಸ್‌ವೈ ಟೀಕೆ

ಬಿಜೆಪಿ ತೀವ್ರ ಆಕ್ರೋಶ:

ರಾಹುಲ್‌ ಹೇಳಿಕೆಗೆ ಖಾರವಾಗಿ ಪ್ರತಿಕ್ರಯಿಸಿದ ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್‌,  ‘ವಿದೇಶಿ ನೆಲದಲ್ಲಿ ರಾಹುಲ್‌ ಭಾರತವನ್ನು ಅವಮಾನ ಮಾಡುತ್ತಿದ್ದಾರೆ ಹಾಗೂ ಭಾರತದ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಮೊರೆ ಇಡುತ್ತಿದ್ದಾರೆ’. ಈ ಬಗ್ಗೆ ‘ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕಿ ಸೋನಿಯಾ ಗಾಂಧಿ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಭಾರತದ ಪ್ರಜಾಪ್ರಭುತ್ವ, ರಾಜಕೀಯ, ಸಂಸತ್ತು, ರಾಜಕೀಯ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನಾಚಿಕೆಪಡಿಸಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ತೀವ್ರ ಸಂಕಟದಿಂದ ಹೇಳಲು ಬಯಸುತ್ತದೆ. ಕಾಂಗ್ರೆಸ್‌ ನಾಯಕನ ಹೇಳಿಕೆ ಬರೀ ಹಸಿ ಸುಳ್ಳು’ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಉಸಿರುಗಟ್ಟಿಸುವ ಸ್ಥಿತಿ; ಬಿಜೆಪಿಯದ್ದು ಹೇಡಿತನದ ಸಿದ್ಧಾಂತ: ರಾಹುಲ್‌ ಗಾಂಧಿ ಆರೋಪ

‘ಪ್ರಜಾಪ್ರಭುತ್ವವನ್ನು ಉಳಿಸಲು ಯುರೋಪ್‌ ಮತ್ತು ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ರಾಹುಲ್ ಗಾಂಧಿ ಬಯಸುತ್ತಾರೆ. ಇಂಥ ಹೇಳಿಕೆಯನ್ನು ಖರ್ಗೆ ಹಾಗೂ ಸೋನಿಯಾ ಗಾಂಧಿ ಬೆಂಬಲಿಸುತ್ತಾರಾ? ಯಾರ ಸರ್ಕಾರವಾಗಿದ್ದರೂ, ನಮ್ಮ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ಹಸ್ತಕ್ಷೇಪವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಯಾವುದೇ ವಿದೇಶಿ ರಾಷ್ಟ್ರವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಬಾರದು’ ಎಂದರು.

ಕಾಂಗ್ರೆಸ್‌ ತಿರುಗೇಟು:
ಈ ನಡುವೆ, ಪ್ರಸಾದ್‌ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕರಾದ ಜೈರಾಂ ರಮೇಶ್‌ ಹಾಗೂ ಪವನ್‌ ಖೇರಾ, ‘ಪ್ರಸಾದ್‌ ಸಚಿವ ಸ್ಥಾನ ಕಳೆದುಕೊಂಡು ನಿರುದ್ಯೋಗಿ ಆಗಿದ್ದಾರೆ. ಹೀಗಾಗಿ ಮತ್ತೆ ಕಳೆದು ಹೋದ ಸ್ಥಾನ ಪಡೆಯಲು ತಮ್ಮ ನಾಯಕನ ಮೆಚ್ಚಿಸುವ ಮಾತು ಆಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ