
ನವದೆಹಲಿ(ಮಾ.07): ಅಬಕಾರಿ ನೀತಿ ಹಗರಣ ದೆಹಲಿ ಆಮ್ ಆದ್ಮಿ ಸರ್ಕಾರದ ಕೊರಳಿಗೆ ಸುತ್ತಿಕೊಂಡಿದೆ. ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ತಿಹಾರ್ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಕದ ತಟ್ಟಿದರೂ ಸಿಸೋಡಿಯಾಗೆ ಜಾಮೀನು ಸಿಗಲಿಲ್ಲ. ಮಾರ್ಚ್ 20ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೀಗ ಇನ್ನೂ 14 ದಿನ ತಿಹಾರ್ ಜೈಲಿನಲ್ಲೇ ಕಳೆಯಬೇಕಾಗಿದೆ. ಯಾರ ತಂಟೆಯೂ ಇಲ್ಲದೆ ಜೈಲಿನಲ್ಲಿ ಕಳೆಯೋಣ ಅಂತಾ ಗಟ್ಟಿ ಮನಸ್ಸು ಮಾಡಿದ ಮನೀಶ್ ಸಿಸೋಡಿಯಾಗೆ ಅಲ್ಲೂ ನೆಮ್ಮದಿ ಇಲ್ಲದಾಗಿದೆ. ಇಂದು ಇಡಿ ಅಧಿಕಾರಿಗಲು ಜೈಲಿನಲ್ಲೇ ಸತತ 5 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಷ್ಟಕ್ಕೆ ಇಡಿ ಅಧಿಕಾರಿಗಳ ವಿಚಾರಣೆ ಮುಗಿದಿಲ್ಲ. ಇತ್ತ ಸಿಸೋಡಿಯಾ ನಾಳೆಯಿಂದ ಮಾರ್ಚ್ 20 ವರೆಗೆ ಯಾರ ಕಿರಿಕಿರಿಯೂ ಇಲ್ಲದೆ ಇರೋಣ ಅನ್ನೋ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಕಾರಣ ಇಡಿ ಅಧಿಕಾರಿಗಳ ವಿಚಾರಣೆ ಕೆಲ ದಿನಗಳ ಕಾಲ ಮುಂದುವರಿಯಲಿದೆ.
ಕೇಜ್ರಿವಾಲ್ ಸರ್ಕಾರದ 2 ವಿಕೆಟ್ ಪತನ, ಜೈಲು ಪಾಲಾಗಿರುವ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ!
ಫೆಬ್ರವರಿ 26ರಂದು ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದರು. ಇದೀಗ ಇಡಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಅತ್ತ ಇಡಿ, ಇತ್ತ ಸಿಬಿಐ ಅಧಿಕಾರಿಗಳಿಂದ ಸಿಸೋಡಿಯಾ ಇದೀಗ ಜೈಲಿನಲ್ಲಿ ಅವಿತುಕೊಳ್ಳಲು ಆಗದೆ, ಇತ್ತ ವಿಚಾರಣೆ ಎದುರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾರ್ಚ್ 6 ರಂದು ಸಿಸೋಡಿಯಾ ಸಿಬಿಐ ಕಸ್ಟಡಿ ಅವಧಿ ಅಂತ್ಯಗೊಂಡಿತ್ತು. ಹೀಗಾಗಿ ದಿಲ್ಲಿ ವಿಶೇಷ ಸಿಬಿಐ ಕೋರ್ಚ್‌ಗೆ ಹಾಜರುಪಡಿಸಲಾಯಿತು. ಸಿಸೋಡಿಯಾರನ್ನು ಸದ್ಯಕ್ಕೆ ಮತ್ತೆ ವಶಕ್ಕೆ ಪಡೆಯುವುದಿಲ್ಲ ಎಂದು ಸಿಬಿಐ ವಕೀಲರು ಹೇಳಿದರು. ಆಗ ಕೋರ್ಟು ಅವರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿತು ಹಾಗೂ ಭಗವದ್ಗೀತೆ, ಚಾಳೀಸು ಔಷಧಿ ಇರಿಸಿಕೊಳ್ಳಲು ಅನುಮತಿಸಿತು ಹಾಗೂ ವಿಪಶ್ಶನ ಧ್ಯಾನ ಮಾಡಲು ಅಸ್ತು ಎಂದಿತು. ಬಳಿಕ ಅವರನ್ನು ತಿಹಾರ ಜೈಲಿಗೆ ಕರೆತರಲಾಯಿತು. ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ ನಡೆಯಲಿದೆ.
ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ!
ಸತ್ಯೇಂದ್ರ ಜೈನ್ ಹಗೂ ಮನೀಶ ಸಿಸೋಡಿಯಾ ಅವರನ್ನು ಬಂಧಿಸಿದ ಹಿಂದೆ ಬಿಜೆಪಿ ಷಡ್ಯಂತ್ರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಲ್ಲಿ ಉತ್ತಮ ಕೆಲಸಗಳನ್ನು ನಿಲ್ಲಿಸುವ ಉದ್ದೇಶ ಹೊಂದಿದ್ದಾರೆ. ಅದರ ಫಲವೇ ಈ ಇಬ್ಬರ ಬಂಧನ ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ