
ನವದೆಹಲಿ (ಆ.7): ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಸ್ತುತ ಬಿಜೆಪಿಯಲ್ಲಿ ತಮಗೆ ಅತ್ಯಂತ ಇಷ್ಟವಾಗುವ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಯುವಕರೊಂದಿಗಿನ ಆಸ್ಕ್ ಮೀ ಎನಿಥಿಂಗ್ ಸಂವಾದದ ವೇಳೆ ಕೇಳಲಾದ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ನೆಚ್ಚಿನ ಬಿಜೆಪಿ ನಾಯಕ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ 'ಆಸ್ಕ್ ಮಿ ಎನಿಥಿಂಗ್' (Ask Me Anything) ಸಂವಾದದಲ್ಲಿ ನೆಟ್ಟಿಗರೊಬ್ಬರು "ನಿಮಗೆ ಪ್ರಸ್ತುತ ಬಿಜೆಪಿಯ ಯಾವ ನಾಯಕ ಹೆಚ್ಚು ಇಷ್ಟ?" ಎಂದು ಪ್ರಶ್ನಿಸಿದ್ದರು.
ಇದಕ್ಕೆ ಮಂದಹಾಸದೊಂದಿಗೆ ಉತ್ತರಿಸಿದ ರಾಹುಲ್ ಗಾಂಧಿ, "ಕ್ಯಾಪ್ಟನ್ ಅಮರಿಂದರ್ ಸಿಂಗ್ ನನ್ನ ನೆಚ್ಚಿನ ನಾಯಕ. ನಾನು ಅವರೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರು ಅತ್ಯಂತ ಶಾಂತ ಹಾಗೂ ಸಮಾಧಾನಚಿತ್ತದ ವ್ಯಕ್ತಿತ್ವದವರು. ಜೊತೆಗೆ ಸೇನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಜ್ಞಾನ ಮತ್ತು ಅನುಭವ ಅಪಾರವಾದದ್ದು. ಹೀಗಾಗಿ ನಾನು ಅವರನ್ನು ಇಷ್ಟಪಡುತ್ತೇನೆ," ಎಂದಿದ್ದಾರೆ. ಅಲ್ಲದೆ, ವೀಡಿಯೊದ ಕೊನೆಯಲ್ಲಿ "ಹಲೋ ಅಂಕಲ್ ಅಮರಿಂದರ್..." ಎಂದು ನಗುತ್ತಾ ಶುಭಾಶಯ ತಿಳಿಸಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2021 ರಲ್ಲಿ ಕಾಂಗ್ರೆಸ್ ತೊರೆದ ಅವರು, 'ಪಂಜಾಬ್ ಲೋಕ್ ಕಾಂಗ್ರೆಸ್' ಎಂಬ ನೂತನ ಪಕ್ಷ ಸ್ಥಾಪಿಸಿದ್ದರು. ತದನಂತರ ಸೆಪ್ಟೆಂಬರ್ 19, 2022 ರಂದು ತಮ್ಮ ಪಕ್ಷವನ್ನು ಭಾರತೀಯ ಜನತಾ ಪಾರ್ಟಿಯಲ್ಲಿ (BJP) ವಿಲೀನಗೊಳಿಸಿ, ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಹುಲ್ ಗಾಂಧಿ ಅವರು ಅಮರಿಂದರ್ ಸಿಂಗ್ ಅವರನ್ನು ನೆನಪಿಸಿಕೊಂಡು ಈ ಮಾತುಗಳನ್ನಾಡಿರುವುದು ಪ್ರಮುಖ ರಾಜಕೀಯ ದಿಕ್ಸೂಚಿಯಾಗಿ ಹೊರಹೊಮ್ಮಿದೆ.
ಇನ್‌ಸ್ಟಾಗ್ರಾಮ್ ಸಂವಾದದ ವೇಳೆ ಯುವಜನರು ಹಾಗೂ 'ಜೆನ್-ಝೀ' (Gen-Z) ಪೀಳಿಗೆಯ ವಿದ್ಯಾರ್ಥಿಗಳು ಕೇಳಿದ ಹಲವು ಸ್ವಾರಸ್ಯಕರ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಿದ್ದಾರೆ. ಮೂಕಪ್ರಾಣಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, "ಸಾಕುಪ್ರಾಣಿಗಳಿಗೂ ಗೌರವದಿಂದ ಜೀವಿಸುವ ಹಕ್ಕಿದೆ," ಎಂದು ಹೇಳುತ್ತಾ ಸೋನಿಯಾ ಗಾಂಧಿ ಅವರ ಸಾಕುನಾಯಿಯನ್ನು ವೀಡಿಯೊದಲ್ಲಿ ತೋರಿಸಿದರು.
ಯೂಸರ್ ಒಬ್ಬರು "ನೀವು ಬ್ಯಾಟ್‌ಮ್ಯಾನ್ (Batman) ಹೌದೇ?" ಎಂದು ಕೇಳಿದಾಗ, "ನಾನು ಮತ್ತು ಬ್ಯಾಟ್‌ಮ್ಯಾನ್ ಇದುವರೆಗೆ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಬಿಡಿ!" ಎಂದು ಹಾಸ್ಯದ ಚಟಾಕಿ ಹಾರಿಸಿದರು.
ಮತ್ತೊಂದೆಡೆ, ಪ್ರಚಲಿತ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕಠಿಣ ನಿಲುವು ತಳೆದಿವೆ. ಸಿಜೆಪಿ ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್ ಹಾಗೂ ಸಾರ್ವಜನಿಕ ಪರೀಕ್ಷಾ ಸುಧಾರಣಾ ಮಸೂದೆಯ ಚರ್ಚೆಯ ವೇಳೆ ಅವರು ಸರ್ಕಾರದ ವಿರುದ್ಧ ಹರಿದಾಯ್ದಿದ್ದಾರೆ. 'ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಲು ಆದೇಶಿಸಿದವರು ಯಾರು ಎಂಬ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಉತ್ತರಿಸಬೇಕು. ಪ್ರಧಾನಿ ಹಾಗೂ ಗೃಹ ಸಚಿವರಿಗೆ ಸಂಸತ್ತಿಗೆ ಬರಲು ಧೈರ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಈ ತೀವ್ರ ಪ್ರತಿಭಟನೆಯ ನಡುವೆ, ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸದನದ ಕಲಾಪ ಸರಾಗವಾಗಿ ನಡೆಯಲು ಮಾತುಕತೆ ನಡೆಸಿದ್ದಾರೆ.
"Hello, Uncle Amarinder!"
LoP Shri @RahulGandhi gives a warm shoutout to his favourite politician from the BJP. pic.twitter.com/kwgQPDZ5SV— Congress (@INCIndia) August 6, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ