
ಪಟನಾ (ಜ.22): ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನ್ನ 250 ರು. ಮೌಲ್ಯದ 5 ಲೀ. ಹಾಲು ನಷ್ಟವಾಗಲು ಕಾರಣರಾಗಿದ್ದಾರೆ’ ಎಂದು ಆರೋಪಿಸಿ ಬಿಹಾರದ ನಿವಾಸಿಯೊಬ್ಬರು ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಘಟನೆ ನಡೆದಿದೆ. ಸಮಷ್ಟಿಪುರ ಜಿಲ್ಲೆಯಲ್ಲಿ ಈ ವಿಚಿತ್ರ ಬೆಳವಣಿಗೆ ನಡೆದಿದ್ದು, ಕಳೆದ ವಾರ ರಾಹುಲ್ ಗಾಂಧಿಯವರು ನೀಡಿದ ‘ಭಾರತದ ವಿರುದ್ಧ ಇಂದು ಕಾಂಗ್ರೆಸ್ ಹೋರಾಡುತ್ತಿದೆ’ ಎಂಬ ಹೇಳಿಕೆಯನ್ನು ಕೇಳಿ ಆಘಾತವಾಯಿತು. ಆಗ ನನ್ನ ಕೈಲಿದ್ದ 5 ಲೀ. ಹಾಲಿನ ಪಾತ್ರೆ ಕೆಳಗೆ ಬಿತ್ತು. ಪ್ರತಿ ಲೀ.ಗೆ 50 ರು. ಬೆಲೆಯಿದ್ದು, ನನಗೆ 250 ರು. ನಷ್ಟವಾಗಿದೆ. ರಾಹುಲ್ ಗಾಂಧಿ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ’ ಎಂದು ದೂರುದಾರ ಮುಖೇಶ್ ಚೌಧರಿ ಆರೋಪಿಸಿದ್ದಾರೆ.
ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 152 ಸೇರಿದಂತೆ ಭಾರತೀಯ ನಾಗರಿಕ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ರಾಹುಲ್ ಗಾಂಧಿಯವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಕಳೆದ ವಾರ ಮಾತನಾಡಿದ್ದ ರಾಹುಲ್, ‘ಇಂದು ದೇಶದ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಆಕ್ರಮಿಸಿದೆ. ಹೀಗಾಗಿ ಇಂದು ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಾವು ಹೋರಾಡುತ್ತಿದ್ದು, ಇದು ಭಾರತದ ವಿರುದ್ಧವೇ ಹೋರಾಡಿದಂತಿದೆ’ ಎಂದಿದ್ದರು.
ಕಿಶನ್‌ಗಂಗಾ ವಿದ್ಯುತ್ ಸ್ಕೀಂಗೆ ಪಾಕ್ ಎತ್ತಿದ್ದ ಆಕ್ಷೇಪಕ್ಕೆ ತಟಸ್ಥ ತಜ್ಞರ ತಿರಸ್ಕಾರ: ಭಾರತವು ಪಾಕಿಸ್ತಾನ ಗಡಿಯಲ್ಲಿ ಕೈಗೊಂಡಿರುವ ಕಿಶನ್‌ಗಂಗಾ ಹಗಾಗೂ ರಾತ್ಲೆ ಜಲವಿದ್ಯುತ್ ಯೋಜನೆಗಳನ್ನು ವಿಶ್ವಬ್ಯಾಂಕ್ ರಚಿಸಿದ್ದ ತಟಸ್ಥ ತಜ್ಞರ ಸಮಿತಿ ಎತ್ತಿಹಿಡಿದಿದೆ. ಈ ಮೂಲಕ ಪಾಕಿಸ್ತಾನದ ಆಕ್ಷೇಪಗಳನ್ನು ತಿರಸ್ಕರಿಸಿದೆ.ಸಿಂಧೂ ನದಿ ಹಂಚಿಕೆ ಒಪ್ಪಂದದ ಪ್ರಕಾರ ಭಾರತವು ಈ ಜಲವಿದ್ಯುತ್ ಯೋಜನೆಗಳನ್ನು ಕೈಗೊಂಡಿತ್ತು. ಆದರೆ ಯೋಜನೆಯ ವಿನ್ಯಾಸಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿ, ಇದರಿಂದ ತನ್ನ ಭಾಗದಲ್ಲಿನ ಈ ನದಿಗಳ ನೀರಿನ ಹರಿವು ಕಮ್ಮಿ ಆಗಲಿದೆ ಎಂದಿತ್ತು. ಹೀಗಾಗಿ, ಯೋಜನೆಗೆ ಹಣ ನೀಡಿರುವ ವಿಶ್ವಬ್ಯಾಂಕ್, ತಟಸ್ಥ ತಜ್ಞರ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಕೋರಿತ್ತು. ಈಗ ತಟಸ್ಥ ತಜ್ಞರ ಸಮಿತಿ ಭಾರತದ ಯೋಜನೆ ಸರಿ ಎಂದಿದೆ. ಭಾರತವು ತಜ್ಞರ ಸಮಿತಿಯ ನಿರ್ಣಯವನ್ನು ಸ್ವಾಗತಿಸಿದೆ.
ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ದೋಷವಿದೆ: ರಾಹುಲ್ ಆರೋಪ
ರಾಯ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಹೈಕೋರ್ಟ್ ಅನುಮತಿ: ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ವೈದ್ಯೆ ಮೇಲೆ ರೇಪ್ ಮತ್ತು ಕೊಲೆ ಪ್ರಕರಣದ ಅಪರಾಧಿ ಸಂಜಯ್ ರಾಯ್‌ಗೆ ಗಲ್ಲು ಶಿಕ್ಷೆ ವಿಧಿಸದೇ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪಿನ ವಿರುದ್ಧ ಬಂಗಾಳ ಸರ್ಕಾರ ಮೇಲ್ಮನವಿ ಸಲ್ಲಿಕೆಗೆ ಮುಂದಾಗಿದ್ದು, ಇದಕ್ಕೆ ಕೋಲ್ಕತಾ ಹೈಕೋರ್ಟ್ ಅನುಮತಿ ನೀಡಿದೆ.ದೋಷಿ ರಾಯ್‌ಗೆ ಮರಣದಂಡನೆ ನೀಡುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಮಂಗಳವಾರ ಮಮತಾ ಬ್ಯಾನರ್ಜಿ ಸರ್ಕಾರ ಹೈಕೋರ್ಟ್‌ಗೆ ಅನುಮತಿ ಕೇಳಿತ್ತು. ಸರ್ಕಾರದ ಮನವಿಗೆ ಕೋರ್ಟ್ ಸಮ್ಮತಿ ಸೂಚಿಸಿದೆ.ರಾಯ್‌ಗೆ ಗಲ್ಲು ಶಿಕ್ಷೆ ತೀರ್ಪು ಬಾರದೇ ಜೀವಾವಧಿ ಶಿಕ್ಷೆ ಬಂದಿದ್ದಕ್ಕೆ ಮಮತಾ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಸಿಬಿಐ ತನಿಖಾ ವೈಖರಿಯನ್ನು ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ