ಇಂಗ್ಲೆಂಡ್‌ನ ಕೆಂಬ್ರಿಜ್ ವಿವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪ ಮಾಡಿದರು. ಅದರೊಂದಿಗೆ ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಹೇಳಿದರು.
ನವದೆಹಲಿ (ಮಾ.3): ವಿದೇಶಿ ನೆಲದಲ್ಲಿ ಅದರಲ್ಲೂ ನಮ್ಮನ್ನು ಅಂದಾಜು 200 ವರ್ಷಗಳ ಕಾಲ ಆಳಿದವರ ದೇಶದಲ್ಲಿ ನಿಂತು ರಾಹುಲ್ ಗಾಂಧಿ ದೇಶದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಲಂಡನ್‌ನ ಕೆಂಬ್ರಿಜ್ ವಿವಿಯಲ್ಲಿ ಎಂಬಿಎ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಸರ್ಕಾರದ ವಿರುದ್ಧವೇ ವಿವಾದಾತ್ಮಕವಾಗಿ ಮಾತನಾಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪ ಮಾಡಿದ್ದಲ್ಲದೆ, ಕೇಂದ್ರ ಸರ್ಕಾರ ತಮ್ಮ ಫೋನ್ ಕದ್ದಾಲಿಸುತ್ತಿದೆ ಎನ್ನುವ ಟೀಕೆಯನ್ನೂ ಮಾಡಿದ್ದಾರೆ. ಈಗಾಗಲೇ ಕೆಲವು ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದು, ಪೋನ್‌ನಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡುವಂತೆ ತಿಳಿಸಿದ್ದಾರೆ ಎಂದರು. ಭಾರತ ಸರ್ಕಾರದಲ್ಲಿ ಎಲ್ಲಾ ಸಂಸ್ಥೆಗಳು ಕೂಡ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದ ರಾಹುಲ್ ಗಾಂಧಿ, ಮಾಧ್ಯಮ ಹಾಗೂ ಕೋರ್ಟ್‌ಗಳನ್ನೂ ಕೂಡ ಸರ್ಕಾರ ನಿಯಂತ್ರಿಸುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅವರನ್ನು ಆಟವಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತ ಸರ್ಕಾರದ ವಿರುದ್ಧ ತಮ್ಮ ಹೇಳಿಕೆಯನ್ನು ನೀಡಿವೆ. 2022ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುವಾಗ ರಾಹುಲ್ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ಇದಾದ ನಂತರ ದೇಶದಲ್ಲಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.
ಕೆಂಬ್ರಿಜ್‌ನಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು: ಲರ್ನಿಂಗ್ ಟು ಲಿಸನ್ ಇನ್ ದ 21 ಸೆಂಚುರಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಾಧ್ಯಮಗಳು ಹಾಗೂ ನ್ಯಾಯಾಂಗ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿದೆ. ನನ್ನ ಫೋನ್‌ನಲ್ಲೂ ಪೆಗಾಸಸ್ ಸಾಫ್ಟ್‌ವೇರ್ ಹಾಕಲಾಗಿದೆ. ಆ ಮೂಲಕ ನನ್ನ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತಿದೆ. ಗುಪ್ತಚರ ವಿಭಾಗದ ಅಧಿಕಾರಿಗಳೇ ನನಗೆ ಈ ಮಾಹಿತಿ ನೀಡಿದ್ದು, ನನ್ನ ಫೋನ್‌ನ ಪ್ರತಿ ವಿಚಾರ ಕೂಡ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷದ ಹಲವು ನಾಯಕರುಗಳ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಲಾಗುತ್ತಿದೆ. ನನ್ನ ವಿರುದ್ಧವೂ ಸಾಕಷ್ಟು ಕ್ರಿಮಿನಲ್ ಕೇಸ್‌ಗಳನ್ನು ಹಾಕಲಾಗಿದೆ. ನಾವುಗಳು ಯಾವುದೇ ಅಪರಾಧ ಮಾಡದ ವಿಚಾರದಲ್ಲಿಯೂ ಸುಳ್ಳು ಕೇಸ್‌ಗಳನ್ನು ಹಾಕಲಾಗುತ್ತಿದೆ. ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.
ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸಂಬಂಧಿಸದ ಜಗತ್ತು ಸೃಷ್ಟಿಯಾಗುವುದನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ. ಜಗತ್ತಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉತ್ತೇಜಿಸಲು ಹೊಸ ಚಿಂತನೆಯ ಅಗತ್ಯತೆಯ ಕುರಿತು ಮಾತನಾಡಿದರು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಯಾರ ಮೇಲೂ ಹೇರಬಾರದು ಎಂದು ರಾಹುಲ್ ಹೇಳಿದರು. ಭಾರತ ಮತ್ತು ಅಮೆರಿಕದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಿರ್ಮಾಣ ಕ್ಷೇತ್ರದ ಕುಸಿತವನ್ನು ಅವರು ಉಲ್ಲೇಖಿಸಿದ್ದಾರೆ. ಈ ಬದಲಾವಣೆಯು ದೊಡ್ಡ ಪ್ರಮಾಣದ ಅಸಮಾನತೆ ಮತ್ತು ಅಸಮಾಧಾನವನ್ನು ಬಹಿರಂಗಪಡಿಸಿದೆ, ಇದಕ್ಕೆ ತಕ್ಷಣದ ಗಮನ ಮತ್ತು ಸಂವಾದದ ಅಗತ್ಯವಿದೆ.
‘ಸತ್ಯ’ ಬದಲು ‘ಸತ್ತಾ’ ಎಂದ ರಾಹುಲ್ ಗಾಂಧಿ: ಬಿಜೆಪಿ ಅಣಕ
ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ನೋಡಿದೆ: ಭಾರತ್ ಜೋಡೋ ಯಾತ್ರೆಯ ದಿನಗಳ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಕಾಶ್ಮೀರದ ಯಾತ್ರೆಯ ವೇಳೆ ನಾನು ಭಯೋತ್ಪಾದಕನನ್ನು ನೋಡಿದೆ. ಆತ ಕೂಡ ನನ್ನನ್ನು ನೋಡಿದ ಎಂದು ಹೇಳಿದರು. ಕಾಶ್ಮೀರದಲ್ಲಿ ಸಾಗುವ ವೇಳೆ ವ್ಯಕ್ತಿಯೊಬ್ಬ ನನ್ನ ಬಳಿಕ ಬಂದು, ನೀವು ನಿಜವಾಗಿಯೂ ನಮ್ಮ ಸಮಸ್ಯೆ ಕೇಳು ಬಂದಿದ್ದೀರಾ ಎಂದು ಕೇಳಿದ್ದ. ಅದಕ್ಕೆ ನಾನು ಹೌದು ಎಂದಿದ್ದೆ. ನಾವಿಬ್ಬರೂ ಕೆಲ ದೂರು ಒಟ್ಟಿಗೆ ಹೆಜ್ಜೆ ಹಾಕಿದೆವು. ನಿಮ್ಮನ್ನು ಅವರು ನೋಡುತ್ತಿದ್ದಾರೆ ಎಂದು ಆತ ಹೇಳಿದ. ನಾನು ಯಾರು ಎಂದು ಕೇಳಿದೆ. ಹಾದಿಯಲ್ಲಿದ್ದ ಕೆಲವು ಜನರನ್ನು ತೋರಿಸಿ ಅವರೆಲ್ಲಾ ಭಯೋತ್ಪಾದಕರು ಎಂದು ಆ ವ್ಯಕ್ತಿ ಹೇಳಿದ. ಸಾಮಾನ್ಯವಾಗಿ ಭಯೋತ್ಪಾದಕರು ನಮ್ಮಂಥ ವ್ಯಕ್ತಿಗಳನ್ನು ನೋಡಿದರೆ ಹತ್ಯೆ ಮಾಡುತ್ತಾರೆ. ನಾನು ಅಂಥ ವಾತಾವರಣದಲ್ಲಿದ್ದೆ. ನಾನು ಅವರ ಬಳಿ ನೋಡಿದೆ. ಅವರು ಕೂಡ ನನ್ನನ್ನು ನೋಡಿದರು. ನನಗೆ ಆತಂಕ ಶುರುವಾಗಿತ್ತು. ಆದರೆ, ಆ ಹಂತದಲ್ಲಿ ಯೋಚನೆ ಮಾಡಿದರೆ, ಭಯೋತ್ಪಾದಕನಾದರೂ ನನ್ನನ್ನು ಏಕೆ ಹತ್ಯೆ ಮಾಡಬೇಕು? ನಾನು ಅವನನ್ನೇ ಮತ್ತೊಮ್ಮೆ ದಿಟ್ಟಿಸಿ ನೋಡಿದೆ. ಆತ ಕೂಡ ನೋಡಿದ. ನಾನು ಹಾಗೆ ಮುಂದೆ ಸಾಗಿದೆ. ಅಲ್ಲಿ ಏನೂ ಆಗಲಿಲ್ಲ ಎಂದರು.
ಅರುಣಾಚಲದಿಂದ ಗುಜರಾತ್‌ಗೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ 2.0!
ಹಾಗಿದ್ದರೆ ಇದು ಏಕೆ ಸಾಧ್ಯವಾಯಿತು ಎಂದು ಸಭಿಕರಲ್ಲಿ ರಾಹುಲ್ ಪ್ರಶ್ನೆ ಮಾಡಿದರು. ನಾನು ಅಧಿಕಾರದಲ್ಲಿದ್ದ ಅಥವಾ ಬೇರೆ ಯಾವುದೋ ಕಾರಣದಿಂದ ಅಲ್ಲ. ನಾನು ಆತನ ಸಮಸ್ಯೆ ಕೇಳಲು ಬಂದಿದ್ದೆ. ಅದಕ್ಕಾಗಿಯೇ ಆತ ಸುಮ್ಮನಿದ್ದ ಎಂದಿದ್ದಾರೆ. ನಾನು ಹಿಂಸೆಯ ಮಾರ್ಗವಾಗಿ ಅವನಲ್ಲಿ ಹೋಗಿರಲಿಲ್ಲ ಎಂದು ಹೇಳಿದ್ದಾರೆ.