ಅಗರ್ತಲಾ: ಆಡಳಿತ ವಿರೋಧಿ ಅಲೆ ಎದುರಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸಾಹಾ (Manik Saha) ಯಶಸ್ವಿಯಾಗಿದ್ದಾರೆ. 2016ರಲ್ಲಿ ಬಿಜೆಪಿ ಸೇರಿದ್ದ ಅವರು, ಅದಕ್ಕೂ ಮುನ್ನ ಕೆಲ ಕಾಲ ಕಾಂಗ್ರೆಸ್‌ನಲ್ಲಿದ್ದರು. ಅದಕ್ಕೂ ಮುನ್ನ ತ್ರಿಪುರ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಸಾಹಾ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಓದಿದ್ದಾರೆ. ಕಳೆದ ವರ್ಷವಷ್ಟೇ ಬಿಪ್ಲಪ್ ದೇಬ್ ಅವರನ್ನು ಬದಲಿಸಿ ಸಾಹಾ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ನೇಮಿಸಿತ್ತು. ಈಗ ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.
ಸತತ 5ನೇ ಬಾರಿ ರಿಯೋ ಸಿಎಂ
ಕೊಹಿಮಾ: ರಾಜ್ಯದ ಪ್ರಮುಖ ರಾಜಕೀಯ ನಾಯಕ ನೆಫಿಯೂ ರಿಯೋ (Neiphiu Rio) ಸತತ 5ನೇ ಬಾರಿಗೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಅಧಿಕಾರವೇರಲಿದ್ದಾರೆ. ಬಿಜೆಪಿ ಮೈತ್ರಿಯೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಾಜಕೀಯ ಪ್ರವೇಶಿಸಿದ ರಿಯೋ 5 ದಶಕಗಳಿಗೂ ಹೆಚ್ಚು ರಾಜಕೀಯ ಜೀವನ ನಡೆಸಿದ್ದಾರೆ. ಕೊಹಿಮಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ (UDF)ಯುವಸೇನೆಯ ಅಧ್ಯಕ್ಷರಾಗಿ ಆರಂಭವಾದ ರಾಜಕೀಯ ಜೀವನ ಮುಖ್ಯಮಂತ್ರಿ ಸ್ಥಾನಕ್ಕೆ ಬಂದು ತಲುಪಿದೆ.
ರಿಯೋ ತಾವು ಸ್ಪರ್ಧಿಸಿದ 8 ವಿಧಾನಸಭೆ ಚುನಾವಣೆಗಳಲ್ಲಿ 7 ಬಾರಿ ಜಯಗಳಿಸಿದ್ದಾರೆ. 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ರಿಯೋ 2002ರಲ್ಲಿ ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. 2003ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. 2008ರಲ್ಲಿ ರಾಷ್ಟ್ರಪತಿ ಆಳ್ವಿಕೆಯಿಂದ ಸ್ಥಾನ ಕಳೆದುಕೊಂಡರೂ 2008ರಲ್ಲಿ ಮತ್ತೆ ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿಯಾದರು. ಈ ನಡುವೆ ಲೋಕಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಂಗ್ಮಾಗೆ ಮತ್ತೆ ಗಾದಿ
ಶಿಲ್ಲಾಂಗ್: ತಮ್ಮ ತಂದೆ ಪಿ.ಎ.ಸಂಗ್ಮಾ ಸ್ಥಾಪಿಸಿದ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP)ಯನ್ನು ಮುನ್ನಡೆಸುತ್ತಿರುವ ಕಾನ್ರಾಡ್ ಸಂಗ್ಮಾ 2004ರಲ್ಲಿ ತಮ್ಮ ಮೊದಲ ಯತ್ನದಲ್ಲಿ ಸೋಲುಂಡಿದ್ದರು. ಆದರೆ 2018 ಬಿಜೆಪಿ ಮತ್ತು ಇತರೆ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಿದ್ದ ಸಂಗ್ಮಾ ಇದೀಗ 2ನೇ ಬಾರಿಗೆ ಸಿಎಂ ಹುದ್ದೆ ಏರಲು ಸಜ್ಜಾಗಿದ್ದಾರೆ. ತಂದೆಯ ಗರಡಿಯಲ್ಲಿ ರಾಜಕೀಯದ ಪಟ್ಟು ಕಲಿತಿರುವ ಕಾನ್ರಾಡ್, 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಹಣಕಾಸು ವಿಷಯದಲ್ಲಿ ಎಂಬಿಎ(MBA) ಮುಗಿಸಿರುವ ಸಂಗ್ಮಾ 2009ರವರೆಗೆ ರಾಜ್ಯದ ವಿತ್ತ ಸಚಿವರಾಗಿ (Finance Minister) ಕಾರ್ಯನಿರ್ವಹಿಸಿದ್ದರು. 2009ರಿಂದ 2013ರವರೆಗೆ ವಿಪಕ್ಷ ನಾಯಕನಾಗಿದ್ದ ಸಂಗ್ಮಾ 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದರು. ತಂದೆಯ ಸಾವಿನ ಬಳಿಕ 2016ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಸಂಗ್ಮಾ, 2018ರಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿದರು. 2018ರ ಚುನಾವಣೆಯ ಬಳಿಕ ಬಿಜೆಪಿ ಮೈತ್ರಿಯೊಂದಿಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ