ಅಧ್ಯಕ್ಷನಾಗಬೇಕೋ ಬೇಡವೋ ಮನದಲ್ಲೇ ನಿರ್ಧರಿಸಿರುವೆ: ಮೌನ ಮುರಿದ ರಾಹುಲ್ ಗಾಂಧಿ

By Kannadaprabha NewsFirst Published Sep 10, 2022, 10:32 AM IST
Highlights

ಅಧ್ಯಕ್ಷನಾಗಬೇಕೋ? ಬೇಡವೋ ಮನದಲ್ಲೇ ನಿರ್ಧರಿಸಿದ್ದೇನೆ. ಮೊದಲ ಬಾರಿ ಮೌನ ಮುರಿದ ರಾಹುಲ್‌. ಚುನಾವಣಾ ದಿನಾಂಕ ಬಂದಾಗ ನಿರ್ಧಾರ ಪ್ರಕಟಿಸುವೆ. ಸ್ಪರ್ಧಿಸದೇ ಇದ್ದರೆ ಅಂದೇ ಕಾರಣ ತಿಳಿಸುವೆ ಎಂದ ರಾಹುಲ್ ಗಾಂಧಿ 

ಕನ್ಯಾಕುಮಾರಿ (ಸೆ.10): ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ವಿಚಾರದ ಬಗ್ಗೆ ಇದೇ ಮೊದಲ ಬಾರಿ ರಾಹುಲ್‌ ಗಾಂಧಿ ಮೌನ ಮುರಿದಿದ್ದಾರೆ. ‘ನಾನು ಅಧ್ಯಕ್ಷನಾಗಬೇಕೋ ಬೇಡವೋ ಎಂಬ ಬಗ್ಗೆ ಮನಸ್ಸಿನಲ್ಲೇ ನಿರ್ಧಾರ ಮಾಡಿಕೊಂಡಿದ್ದೇನೆ. ಒಂದು ವೇಳೆ ಸ್ಪರ್ಧಿಸದೇ ಹೋದರೆ ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವೆ’ ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್‌ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಕುತೂಹಲ ಮುಂದುವರಿದಿದೆ. ಭಾರತ್‌ ಜೋಡೋ ಯಾತ್ರೆಯನ್ನು ಕೈಗೊಂಡಿರುವ ರಾಹುಲ್‌ ಶುಕ್ರವಾರ 3ನೇ ದಿನ ಸುದ್ದಿಗಾರರ ಜತೆ ಮಾತನಾಡಿದರು. ಆಗ ಪಕ್ಷದ ಅಧ್ಯಕ್ಷೀಯ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆ ಬಗ್ಗೆ ಉತ್ತರಿಸಿದ ಅವರು, ‘ನಾನು ಈಗಾಗಲೇ ನಿರ್ಧಾರ ಕೈಗೊಂಡಾಗಿದೆ. ನಾನು ಈ ವಿಚಾರದಲ್ಲಿ ಸ್ಪಷ್ಟವಾಗಿದ್ದೇನೆ. ಯಾವಾಗ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಬರುತ್ತದೋ ಆಗ ನನ್ನ ನಿರ್ಧಾರ ತಿಳಿಸಲಿದ್ದೇನೆ. ಆಗ ನಿಮಗೆ ನಾನು ಅಧ್ಯಕ್ಷನಾಗುತ್ತೇನೋ ಇಲ್ಲವೋ ತಿಳಿಯಲಿದೆ. ಆ ದಿನಕ್ಕಾಗಿ ಕಾಯಿರಿ’ ಎಂದು ಹೇಳಿದರು. ‘ನಾನು ಸ್ಪರ್ಧಿಸದೇ ಹೋದರೆ ಏಕೆ ಸ್ಪರ್ಧಿಸಿಲ್ಲ ಎಂದು ನೀವು ಕೇಳಬಹುದು. ಆಗ ನಾನು ಏಕೆ ಸ್ಪರ್ಧಿಸಿಲ್ಲ ಎಂದು ಉತ್ತರಿಸುವೆ’ ಎಂದು ನುಡಿದರು.

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಅ.17ರಂದು ನಡೆಯಲಿದೆ ಹಾಗೂ ಫಲಿತಾಂಶ ಅ.19ರಂದು ಪ್ರಕಟವಾಗಲಿದೆ. 2019ರಲ್ಲಿ ರಾಹುಲ್‌, ಅಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದ್ದರಿಂದ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ತಾಯಿ ಸೋನಿಯಾ ಮಧ್ಯಂತರ ಅಧ್ಯಕ್ಷೆಯಾಗಿದ್ದರು. ಈಗ ಮತ್ತೆ ರಾಹುಲ್‌ ಸ್ಪರ್ಧಿಸಬೇಕು ಎಂಬ ಕೂಗು ಎದ್ದಿದೆ. ಅದರೆ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಇದು ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ.

ಈ ನಡುವೆ  ಅ.17ರಂದು ನಿಗದಿಯಾಗಿರುವ ಪಕ್ಷದ ನೂತನ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಪಕ್ಷದ 5 ಹಿರಿಯ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಈ ಕುರಿತು ಅವರು ಪಕ್ಷದ ಚುನಾವಣಾ ಪ್ರಕ್ರಿಯೆಗಳ ಮುಖ್ಯಸ್ಥ ಮಧುಸೂಧನ್‌ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ.

ಮಾಜಿ ಕೇಂದ್ರ ಸಚಿವ ಮನೀಶ್‌ ತಿವಾರಿ, ಶಶಿ ತರೂರ್‌, ಸಂಸದರಾದ ಕಾರ್ತಿ ಚಿದಂಬರಂ, ಪ್ರದ್ಯುತ್‌ ಬೋರ್ಡೋಲೋಯ್‌ ಮತ್ತು ಅಬ್ದುಲ್‌ ಖಾಲಿಕ್‌ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದವರಾಗಿದ್ದಾರೆ.

Bharat Jodo Yatra: ರಾಹುಲ್‌ ಜತೆ 60 ಕಂಟೇನರ್‌ಗಳ ಯಾತ್ರೆ, ತಂಗಲು ಮಂಚ, ಸ್ನಾನಗೃಹ, ಎಸಿ ವ್ಯವಸ್ಥೆ..!

ಭಾರತ್‌ ಜೋಡೋ ಬಗ್ಗೆ: ಈ ನಡುವೆ ತಮ್ಮ ಭಾರತ್‌ ಜೋಡೋ ಪಾದಯಾತ್ರೆ ಬಗ್ಗೆ ಮಾತನಾಡಿದ ರಾಹುಲ್‌, ‘ದೇಶದಲ್ಲಿ ಆರೆಸ್ಸೆಸ್‌-ಬಿಜೆಪಿ ಮಾಡಿರುವ ಅನಾಹುತವನ್ನು ತಡೆಯಲು ಯಾತ್ರೆ ಕೈಗೊಂಡಿದ್ದೇವೆ. ನಮ್ಮ ಯಾತ್ರೆ ಖಂಡಿತವಾಗಿಯೂ ವಿಪಕ್ಷಗಳನ್ನು ಒಗ್ಗೂಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಚುನಾವಣೆಗೆ ಪಾರದರ್ಶಕವಿಲ್ಲ ಎಂದು ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ!

ಕನ್ಯಾಕುಮಾರಿಯಿಂದ ‘ಭಾರತ್‌ ಜೋಡೋ’ ಪಾದಯಾತ್ರೆ ಶುರು: ಸೆಪ್ಟೆಂಬರ್ 7ರಂದು ‘ಭಾರತ್‌ ಜೋಡೋ’ ಪಾದಯಾತ್ರೆಯನ್ನು ಔಪಚಾರಿಕ ನೀಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಇತರ ಮುಖಂಡರು ಸೆಪ್ಟೆಂಬರ್ 8ರಂದು ಅಧಿಕೃತವಾಗಿ ಕಾಲ್ನಡಿಗೆ ಆರಂಭಿಸಿದರು. ಕನ್ಯಾಕುಮಾರಿಯ ಅಗಸ್ತೀಶ್ವರಂನಿಂದ ರಾಹುಲ್‌ ಹಾಗೂ ಅವರ ಜತೆ ಇಡೀ ಭಾರತದಾತ್ಯಂತ ಕಾಲ್ನಡಿಗೆಯಲ್ಲಿ ಸಾಗುವ 118 ಇತರ ಭಾರತೀಯರು ಹೆಜ್ಜೆ ಹಾಕಿದರು. ಈ ವೇಳೆ ಅವರು ಈ ಸ್ಥಳದಲ್ಲಿ ರಾಷ್ಟ್ರಧ್ವಜಾರೋಹಣವನ್ನೂ ಮಾಡಿದರು. 3,570 ಕಿ.ಮೀ.ನಷ್ಟುದೂರ ಸಾಗಿ ಕಾಶ್ಮೀರದಲ್ಲಿ 5 ತಿಂಗಳ ಬಳಿಕ ಯಾತ್ರೆ ಸಮಾಪ್ತಿಯಾಗಲಿದೆ. ದಿನಕ್ಕೆ 2 ಹಂತದಲ್ಲಿ (ಬೆಳಗ್ಗೆ 7ರಿಂದ 10.30 ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 6.30) ಪಾದಯಾತ್ರೆ ನಡೆಯಲಿದ್ದು, ದಿನಕ್ಕೆ 22-23 ಕಿ.ಮೀ. ಸಾಗುವ ಉದ್ದೇಶವಿದೆ.

click me!