ನಮ್ಮ ಬೆಂಬಲ ಇಲ್ಲದೇ ಇದ್ದಿದ್ದರೆ ರಾಹುಲ್‌ ಗಾಂಧಿ ವಿರೋಧ ಪಕ್ಷದ ನಾಯಕ ಆಗ್ತಾ ಇರ್ಲಿಲ್ಲ: ಕಾಂಗ್ರೆಸ್‌ಗೆ ತಿವಿದ ಸಮಾಜವಾದಿ ಸಂಸದೆ

Published : Nov 26, 2026, 04:17 PM IST
Rahul Gandhi and SP MP Iqra Hasan

ಸಾರಾಂಶ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿವಾದ ತಾರಕಕ್ಕೇರಿದೆ. 111 ಹಾಲಿ ಕ್ಷೇತ್ರಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಸ್ಪಿ ಸಂಸದೆ ಇಕ್ರಾ ಹಸನ್ ಸ್ಪಷ್ಟಪಡಿಸಿದ್ದಾರೆ.

ಲಕ್ನೋ (ನ.26): 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿವಾದ ತಾರಕಕ್ಕೇರಿದೆ. ಈ ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ಕೈರಾನಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಇಕ್ರಾ ಹಸನ್ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಕಠಿಣ ಸಂದೇಶ ರವಾನಿಸಿದ್ದು, ಪಕ್ಷದ 111 ಹಾಲಿ ಕ್ಷೇತ್ರಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೀಟು ಹಂಚಿಕೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಸದೆ ಇಕ್ರಾ ಹಸನ್, ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿರುವುದೇ ಬಹುಮಟ್ಟಿಗೆ ಸಮಾಜವಾದಿ ಪಕ್ಷದ ಬೆಂಬಲದಿಂದ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕತ್ವಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಸೂತ್ರದ ಕುರಿತು ಸಮಾಜವಾದಿ ಪಕ್ಷದ ನಿಲುವನ್ನು ಇಕ್ರಾ ಹಸನ್ ಸಂಪೂರ್ಣವಾಗಿ ಸ್ಪಷ್ಟಪಡಿಸಿದ್ದಾರೆ. ನಮ್ಮ 111 ಹಾಲಿ ಕ್ಷೇತ್ರಗಳ ಬಗ್ಗೆ ಯಾವುದೇ ವಿಚಾರ-ವಿಮರ್ಶೆ ನಡೆಯುವುದಿಲ್ಲ ಎಂಬುದನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಹಾಲಿ ಶಾಸಕರಿರುವ ಕ್ಷೇತ್ರಗಳ ಮೇಲೆ ನಮ್ಮದೇ ತಾರ್ಕಿಕ ಮತ್ತು ನ್ಯಾಯಯುತ ಹಕ್ಕು (Logical claim) ಇರುತ್ತದೆ ಹೊರತು ಅವರದ್ದಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

'ಇಮ್ರಾನ್ ನೋವನ್ನು ಅರ್ಥಮಾಡಿಕೊಳ್ಳಬಲ್ಲೆವು, ಆದರೆ ಮೈತ್ರಿ ವ್ಯಕ್ತಿಗಿಂತ ದೊಡ್ಡದು'

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಮೇಲಿನ ಹಕ್ಕು ಪ್ರತಿಪಾದನೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತೂ ಇಕ್ರಾ ಹಸನ್ ಪ್ರತಿಕ್ರಿಯಿಸಿದ್ದಾರೆ. ಇಮ್ರಾನ್ ಮಸೂದ್ ಅವರ ಅಸಮಾಧಾನದ ಕುರಿತು ಮಾತನಾಡಿದ ಅವರು, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಕೆಲವು ವಿಧಾನಸಭಾ ಕ್ಷೇತ್ರಗಳು ಕೈತಪ್ಪಿ ಹೋದಾಗ ನೋವಾಗುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾವು ಇಮ್ರಾನ್ ಮಸೂದ್ ಅವರ ನೋವನ್ನು ಅರ್ಥಮಾಡಿಕೊಳ್ಳುತ್ತೇವೆ; ಆದರೆ ಮೈತ್ರಿಕೂಟವು (Alliance) ಒಬ್ಬ ವ್ಯಕ್ತಿಗಿಂತ ದೊಡ್ಡದಾಗಿರುತ್ತದೆ ಎಂದು ತಿಳಿಸಿದ್ದಾರೆ.

ತಾವು ಎಲ್ಲಿ ಮೈತ್ರಿ ಮಾಡಿಕೊಳ್ಳಲು ಬಯಸುತ್ತೇವೆ ಎಂಬುದನ್ನು ಕಾಂಗ್ರೆಸ್‌ನವರೇ ಚೆನ್ನಾಗಿ ಹೇಳಬಲ್ಲರು. ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಯಾವುದಾದರೂ ದೊಡ್ಡ ಮಿತ್ರಪಕ್ಷವಿದ್ದರೆ ಅದು ಸಮಾಜವಾದಿ ಪಕ್ಷ ಮಾತ್ರ. ಇಂದು ಕಾಂಗ್ರೆಸ್ ಬಳಿ ವಿರೋಧ ಪಕ್ಷದ ನಾಯಕನ (LoP) ಸ್ಥಾನವಿದ್ದರೆ, ಅದರಲ್ಲೂ ಸಮಾಜವಾದಿ ಪಕ್ಷದ ಬಹುದೊಡ್ಡ ಕೊಡುಗೆ ಮತ್ತು ಸಹಕಾರವಿದೆ" ಎಂದು ಇಕ್ರಾ ಹಸನ್ ತಿವಿದಿದ್ದಾರೆ.

'ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡಲಿ'

ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇಕ್ರಾ ಹಸನ್, ಕಾಂಗ್ರೆಸ್ ಹೈಕಮಾಂಡ್‌ಗೆ ಪ್ರಮುಖ ಮನವಿ ಮಾಡಿದ್ದಾರೆ. ತಮ್ಮ ಪಕ್ಷದ ನಾಯಕರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದರ ಕುರಿತು ಕಾಂಗ್ರೆಸ್ ನಾಯಕತ್ವವು ಸರಿಯಾದ ಮೌಲ್ಯಮಾಪನ ಮಾಡಬೇಕು ಎಂಬುದೇ ನನ್ನ ಮನವಿ. ಒಂದು ವೇಳೆ ಅವು ಪಕ್ಷದ ಅಧಿಕೃತ (Formal) ಹೇಳಿಕೆಗಳಾಗಿದ್ದರೆ, ಅವರ ಕಡೆಯಿಂದ ನಮಗೆ ಸ್ಪಷ್ಟವಾಗಿ ತಿಳಿಸಬೇಕು; ಒಂದು ವೇಳೆ ಅವು ಅಧಿಕೃತವಲ್ಲದಿದ್ದರೆ, ಅಂತಹ ಹೇಳಿಕೆಗಳನ್ನು ತಕ್ಷಣವೇ ತಡೆಯಬೇಕು ಎಂದು ಯುವ ಸಂಸದೆ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

₹5000 ನಿರುದ್ಯೋಗ ಭತ್ಯೆ, ₹5 ಊಟ..! ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಸ್‌ಪಿ ಪ್ರಣಾಳಿಕೆ ಬಿಡುಗಡೆ
ಶತ್ರುಗಳ ಡ್ರೋನ್‌ ಕ್ಷಣಾರ್ಧದಲ್ಲೇ ಧ್ವಂಸ ಮಾಡುವ ಭಾರ್ಗವಾಸ್ತ್ರ: ಪೋಖ್ರಾನ್‌ನಲ್ಲಿ ಪರೀಕ್ಷೆ ಯಶಸ್ವಿ