Congress Yatra ಕೇಂದ್ರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಅಭಿಯಾನ

By Kannadaprabha NewsFirst Published May 16, 2022, 4:04 AM IST
Highlights

- ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಆಯೋಜನೆ
- 2024ರ ಚುನಾವಣೆಗೆ ಮುನ್ನ ಯಾತ್ರೆ ಮುಕ್ತಾಯ
- ಮುಂಬರುವ ಚುನಾವಣೆ ಗೆಲುವಿಗೆ ಕಾಂಗ್ರೆಸ್ ರಣತಂತ್ರ

ನವದೆಹಲಿ(ಮೇ.16): ದೇಶದ ಬಹುತೇಕ ಕಡೆ ನೆಲಕಚ್ಚಿರುವ ಪಕ್ಷದ ಸಂಘಟನೆಗೆ ಚುರುಕು ನೀಡಲು ಹಾಗೂ ಬಿಜೆಪಿ ವಿರುದ್ಧ ಪ್ರಬಲ ರಾಜಕೀಯ ಹೋರಾಟ ರೂಪಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ನಡೆಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ. ಅ.2ರಂದು ಆರಂಭವಾಗಲಿರುವ ಯಾತ್ರೆಯ ನೇತೃತ್ವವನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಹಿಸುವ ಸಾಧ್ಯತೆ ಇದೆ.

ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು, ಬೆಲೆಯೇರಿಕೆ ಸಮಸ್ಯೆ, ಕೋಮು ಸಂಘರ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ‘ವೈಫಲ್ಯಗಳನ್ನು’ ಜನರಿಗೆ ತಿಳಿಸಲು ಈ ಯಾತ್ರೆ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಕಟಿಸಿದ್ದಾರೆ.

Latest Videos

ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಪಕ್ಷದ ಚಿಂತನ ಶಿಬಿರದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸೋನಿಯಾ ಗಾಂಧಿ ‘ಗಾಂಧೀ ಜಯಂತಿಯಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಾರತ್‌ ಜೋಡೋ (ಭಾರತವನ್ನು ಒಗ್ಗೂಡಿಸಿ) ಯಾತ್ರೆಯನ್ನು ಪಕ್ಷ ಹಮ್ಮಿಕೊಳ್ಳಲಿದೆ. ನಾವೆಲ್ಲರೂ ಇದರಲ್ಲಿ ಭಾಗಿಯಾಗಲಿದ್ದೇವೆ. ಈ ಯಾತ್ರೆಯು ಕುಂದುತ್ತಿರುವ ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟುಬಲಪಡಿಸುವ, ದಾಳಿಗೆ ಒಳಗಾಗಿರುವ ನಮ್ಮ ಸಂವಿಧಾನದ ಮೂಲ ಮೌಲ್ಯಗಳನ್ನು ಕಾಪಾಡುವ ಮತ್ತು ಕೋಟ್ಯಂತರ ಜನರ ನಿತ್ಯದ ಕಳವಳಗಳ ಕುರಿತು ಬೆಳಕು ಚೆಲ್ಲುವ ಯತ್ನ ಮಾಡಲಿದೆ’ ಎಂದು ತಿಳಿಸಿದರು.

ಚುನಾವಣೆಗೆ ಮುನ್ನುಡಿ:
ಅ.2ರಂದು ಆರಂಭವಾಗಲಿರುವ ಯಾತ್ರೆ, ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಮುಗಿಯುವಂತೆ ಯೋಜಿಸಲಾಗುತ್ತದೆ. ಇದು ‘ಸಾಮರಸ್ಯ’ದ ಯಾತ್ರೆಯಾಗಿರುತ್ತದೆ. ರಾಷ್ಟ್ರಮಟ್ಟದಲ್ಲಿ ರಾಹುಲ್‌ ಹಾಗೂ ರಾಷ್ಟ್ರೀಯ ನಾಯಕರು ಯಾತ್ರೆ ನಡೆಸುವಾಗ ಎಲ್ಲಾ ರಾಜ್ಯಗಳಲ್ಲೂ ರಾಜ್ಯ ನಾಯಕರು ಯಾತ್ರೆಗಳನ್ನು ನಡೆಸಲಿದ್ದಾರೆ. ಹಣದುಬ್ಬರ, ನಿರುದ್ಯೋಗ, ಬೆಲೆಯೇರಿಕೆ, ಕೋಮು ಸಂಘರ್ಷ ಮುಂತಾದ ವಿಚಾರಗಳನ್ನು ತಳಮಟ್ಟದಲ್ಲಿ ಪ್ರಚುರಪಡಿಸಿ ಜನರಿಗೆ ತಲುಪಿಸುವುದು ಯಾತ್ರೆಯ ಉದ್ದೇಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವುದಕ್ಕೂ ಮೊದಲೇ ಯಾತ್ರೆ ಆರಂಭವಾಗುವ ಸಾಧ್ಯತೆಯಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದ ಸೋನಿಯಾ ಗಾಂಧಿ!

ಜನ ಜಾಗೃತಿ ಅಭಿಯಾನ 2.0 ಆರಂಭಕ್ಕೆ ಕಾಂಗ್ರೆಸ್‌ ಯೋಜನೆ
ಹೆಚ್ಚಾಗುತ್ತಿರುವ ಹಣದುಬ್ಬರ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ 2ನೇ ಹಂತರ ಅಭಿಯಾನ ಕುರಿತಂತೆ ಪಕ್ಷದ ಕ್ರಿಯಾ ಯೋಜನೆಯ ಕುರಿತಾಗಿ ಶನಿವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಚರ್ಚೆ ನಡೆಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರದ 2ನೇ ದಿನ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ, ನಿರೋದ್ಯೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2ನೇ ಹಂತದ ಸಾಮೂಹಿಕ ಸಂಪರ್ಕ ಕಾರ್ಯಕ್ರಮದ ಅವಶ್ಯಕತೆಗಳ ಕುರಿತು ವಿವರಿಸಿದರು. ಈ ಚಿಂತನಾ ಶಿಬಿರದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್‌ನ ನಾಯಕರು ಭಾಗವಹಿಸಿದ್ದರು.

ಜನ ಜಾಗರಣ ಅಭಿಯಾನ 2ನೇ ಹಂತದ ಕ್ರಿಯಾಯೋಜನೆ ತಯಾರಿಸುವ ಸಲುವಾಗಿ ಸಭೆ ಕರೆಯಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಆರ್ಥಿಕ ಕುಸಿತ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನ.14ರಿಂದ 29ರವರೆಗೆ ಕಾಂಗ್ರೆಸ್‌ ಪಕ್ಷ ಮೊದಲ ಹಂತದ ಜನ ಜಾಗರಣ ಅಭಿಯಾನವನ್ನು ಹಮ್ಮಿಕೊಂಡಿತ್ತು.

click me!