ಹೌದು ಟ್ರಂಪ್‌ ಹೇಳಿದ್ದು ನಿಜ, ಭಾರತದ ಆರ್ಥಿಕತೆ ಸತ್ತಿದೆ ಎಂದ ರಾಹುಲ್‌ ಗಾಂಧಿ!

Published : Jul 31, 2025, 05:24 PM IST
Rahul Gandhi

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು 'ಸತ್ತ ಆರ್ಥಿಕತೆ' ಎಂದು ಕರೆದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರದ ನೀತಿಗಳಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟಿದೆ  ಎಂದಿದ್ದಾರೆ.

ನವದೆಹಲಿ (ಜು.31): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆಯನ್ನು ಸತ್ತ ಆರ್ಥಿಕತೆ ಎಂದು ಕರೆದಿದ್ದಾರೆ. ಇದನ್ನು ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಕೂಡ ಅನುಮೋದಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸರಿಯಾದ ವಿಚಾರವನ್ನು ಹೇಳಿದ್ದಕ್ಕೆ ತಮಗೆ ಸಂತಸವಾಗಿದೆ ಎಂದಿದ್ದಾರೆ. ಅದಾನಿಗೆ ಸಹಾಯ ಮಾಡಲು ಬಿಜೆಪಿ ಭಾರತದ ಆರ್ಥಿಕತೆಯನ್ನು ಹಾಳುಮಾಡಿದೆ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ ಎಂದು ರಾಹುಲ್ ಗುರುವಾರ ಹೇಳಿದರು. ಟ್ರಂಪ್ ಹೇಳಿದ್ದು ಸರಿ. ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆ ಸತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ರಷ್ಯಾ ಮತ್ತು ಭಾರತ ತಮ್ಮ ಸತ್ತ ಆರ್ಥಿಕತೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದು ನನಗೆ ಮುಖ್ಯವಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ ನಂತರ ರಾಹುಲ್ ಅವರ ಈ ಹೇಳಿಕೆ ಬಂದಿದೆ. ಬುಧವಾರ, ಅಮೆರಿಕ ಭಾರತದ ಮೇಲೆ 25% ಸುಂಕವನ್ನು ಘೋಷಿಸಿತು. ಅಂದಿನಿಂದ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ಹೇಳಿರುವ ಮಾತುಗಳು ಮುನ್ನಲೆಗೆ ಬಂದಿವೆ.

ಮೋದಿ ದೇಶದ ಆರ್ಥಿಕತೆಯನ್ನು ಸಾಯಿಸಿದ್ದಾರೆ

ರಾಹುಲ್ ಗಾಂಧಿ ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಭಾರತದ ಆರ್ಥಿಕತೆ ಸತ್ತಿದೆ. ಮೋದಿ ಅದನ್ನು ಕೊಂದರು ಎಂದು ಬರೆದಿದ್ದಾರೆ.

1. ಮೋದಿ-ಅದಾನಿ ಪಾಲುದಾರಿಕೆ

2. ದೋಷಗಳೊಂದಿಗೆ ನೋಟು ರದ್ದತಿ ಮತ್ತು GST

3. 'ಅಸೆಂಬಲ್‌ ಇನ್‌ ಇಂಡಿಯಾ' ವಿಫಲ (ರಾಹುಲ್ ಮೇಕ್ ಇನ್ ಇಂಡಿಯಾವನ್ನು ಅಸೆಂಬಲ್‌ ಇನ್‌ ಇಂಡಿಯಾ ಎಂದು ಕರೆಯುತ್ತಾರೆ)

4. MSMEಗಳು ಅಂದರೆ ಸಣ್ಣ-ಮಧ್ಯಮ ಕೈಗಾರಿಕೆಗಳು ಮುಳುಗಿವೆ

5. ರೈತರನ್ನು ದಮನಿಸಲಾಗಿದೆ.

ಉದ್ಯೋಗಗಳು ಇಲ್ಲದ ಕಾರಣ ಮೋದಿ ಭಾರತದ ಯುವಕರ ಭವಿಷ್ಯವನ್ನು ನಾಶಪಡಿಸಿದ್ದಾರೆ.

ಟ್ರಂಪ್‌ ಟ್ಯಾರಿಫ್‌ ಬಗ್ಗೆ ನಾಯಕರು ಏನೆಂದರು?

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ: ಸುಂಕದ ಬಗ್ಗೆ ಅಮೆರಿಕ ಅಧ್ಯಕ್ಷರು ಹೇಳಿದ್ದನ್ನು ಎಲ್ಲರೂ ನೋಡಿದ್ದೇವೆ. ಪ್ರಧಾನಿ ಮೋದಿ ಎಲ್ಲೆಡೆ ಹೋಗುತ್ತಾರೆ, ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಹಾಗಿದ್ದರೂ ಇದರ ಪ್ರತಿಯಾಗಿ ನಮಗೆ ಈ ಟ್ಯಾರಿಫ್‌ ಸಿಕ್ಕಿದೆ ಎಂದಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್: ಇದು ನಮಗೆ ತುಂಬಾ ಗಂಭೀರವಾದ ವಿಷಯ. 25% ಸುಂಕದ ಜೊತೆಗೆ, ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸುವುದಕ್ಕೆ ದಂಡವನ್ನು ಹಾಕುತ್ತಾರೆ. ಅದು 35-45% ವರೆಗೆ ಹೋಗಬಹುದು. ಕೆಲವು ವರದಿಗಳು 100% ದಂಡದ ಬಗ್ಗೆಯೂ ಮಾತನಾಡುತ್ತಿವೆ, ಇದು ಭಾರತ-ಯುಎಸ್ ವ್ಯಾಪಾರವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ.

ಕಾಂಗ್ರೆಸ್‌ನ ರಾಜೀವ್ ಶುಕ್ಲಾ: ಟ್ರಂಪ್ ದೇಶಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರು ಭಾರತವನ್ನು ರಷ್ಯಾದೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಕೇಳುತ್ತಿದ್ದಾರೆ. ಇದು ತುಂಬಾ ತಪ್ಪು. ಅಮೆರಿಕ ಭಾರತವನ್ನು ಬೆಂಬಲಿಸುತ್ತಿಲ್ಲ. ನಾವು ಟ್ರಂಪ್ ಜೊತೆ ಸ್ನೇಹ ಹೇಳಿಕೊಳ್ಳುತ್ತಿದ್ದೆವು. ಟ್ರಂಪ್‌ ಮೋದಿ ನನ್ನ ಸ್ನೇಹಿತ ಎಂದು ಹೇಳುತ್ತಾರೆ, ಆದರೆ 25% ಸುಂಕ ವಿಧಿಸುವ ಮೂಲಕ ಅವರು ಭಾರತಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

ರಾಜ್ಯಸಭಾ ಸಂಸದ ಜೈರಾಮ್‌ ರಮೇಶ್‌: ಹೌಡಿ ಮೋದಿ ಅಥವಾ ನಮಸ್ತೆ ಟ್ರಂಪ್‌ ಯಾವುದೇ ಸಹಾಯ ಮಾಡಿಲ್ಲ. ಅವರ ಸ್ನೇಹದ ನಡುವೆಯೂ ಇದು ನಮಗೆ ಸಿಕ್ಕಿದೆ. ಇದು ದೇಶಕ್ಕೆ ಹಾಗೂ ನಮ್ಮ ಆರ್ಥಿಕತೆಗೆ ದೊಡ್ಡ ಹಿನ್ನಡೆ. ಪ್ರಧಾನಿ ಯಾವುದಕ್ಕೂ ಹೆದರಬಾರದು.ಅಮೆರಿಕದ ಬ್ಲಾಕ್‌ಮೇಲಿಂಗ್ ನಮಗೆ ಸಂಕಷ್ಟದ ಸಮಯ. ನಮಗೆ ಎರಡು ದೊಡ್ಡ ಸವಾಲುಗಳಿವೆ ಎಂದು ನಾವು ಭಾವಿಸುತ್ತಿದ್ದೆವು. ಪಾಕಿಸ್ತಾನ ಮತ್ತು ಚೀನಾ, ಆದರೆ ಅಮೆರಿಕ ಮೂರನೇ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ.

ಜೆಡಿಯು ಸಂಸದ ಸಂಜಯ್‌ ಕುಮಾರ್ ಝಾ: ಇದರಲ್ಲಿ ಹೊಸದೇನಿಲ್ಲ. ವಿವಿಧ ದೇಶಗಳಿಗೆ ವಿಭಿನ್ನ ದರಗಳಲ್ಲಿ ಸುಂಕ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರವು ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಕೃಷಿ ಮತ್ತು ಎಂಎಸ್‌ಎಂಇ ವಲಯದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಮಾತುಕತೆಗಳು ನಡೆಯುತ್ತಿವೆ ಎಂದು ಸರ್ಕಾರ ಹೇಳಿದೆ. ಸರ್ಕಾರ ಮತ್ತು ಪ್ರಧಾನಿ ಮೋದಿ ಪರಿಹಾರವನ್ನು ಕಂಡುಕೊಳ್ಳಲು ಸಮರ್ಥರಾಗಿದ್ದಾರೆ.

ಭಾರತದ ಮೇಲೆ ಶೇ. 25ರಷ್ಟು ಸುಂಕ: ಜುಲೈ 30 ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 1 ರಿಂದ ಭಾರತದ ಮೇಲೆ 25% ಸುಂಕವನ್ನು ವಿಧಿಸುವುದಾಗಿ ಘೋಷಿಸಿದರು. ಭಾರತ ರಷ್ಯಾದಿಂದ ಶಸ್ತ್ರಾಸ್ತ್ರಗಳು ಮತ್ತು ತೈಲವನ್ನು ಖರೀದಿಸುತ್ತಿದೆ, ಆದ್ದರಿಂದ ಅದರ ಮೇಲೆ ದಂಡವನ್ನು ಸಹ ವಿಧಿಸಲಾಗುವುದು ಎಂದು ಪೋಸ್ಟ್‌ ಮಾಡಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ, ಅಮೆರಿಕದೊಂದಿಗೆ ಭಾರತದ ವ್ಯಾಪಾರ ಕೊರತೆ ತುಂಬಾ ಹೆಚ್ಚಾಗಿದೆ, ಆದ್ದರಿಂದ ಅವರು ಭಾರತೀಯ ಸರಕುಗಳ ಮೇಲೆ ಸುಂಕವನ್ನು ವಿಧಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ನಿರ್ಧಾರಗಳ ಬಗ್ಗೆ, ಭಾರತ ಸರ್ಕಾರವು ಈ ನಿರ್ಧಾರದ ಪರಿಣಾಮವನ್ನು ಅರ್ಥಮಾಡಿಕೊಂಡಿದೆ ಮತ್ತು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ