ಹಿಂದೂ ಮಹಾಸಾಗರದಲ್ಲಿ 120 ಯುದ್ಧನೌಕೆಗಳ ಠಿಕಾಣಿ| ಹಿಡಿತಕ್ಕಾಗಿ ವಿವಿಧ ದೇಶಗಳ ಪೈಪೋಟಿ| ಸಶಸ್ತ್ರ ಪಡೆಗಳ ಮುಖ್ಯಸ್ಥ ಜ| ರಾವತ್ ಹೇಳಿಕೆ| ಭಾರತಕ್ಕೆ ತೀರಾ ಮಹತ್ವವಾದ ಪ್ರದೇಶ ಇದು
ನವದೆಹಲಿ(ಡಿ.12): ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಪೈಪೋಟಿ ಹೆಚ್ಚಿದೆ. ಈಗ ವಿವಿಧ ದೇಶಗಳ 120 ಯುದ್ಧನೌಕೆಗಳು ಅಲ್ಲಿ ಬೀಡುಬಿಟ್ಟಿವೆ ಎಂದು ಭಾರತದ ಸಶಸ್ತ್ರಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಹೇಳಿದ್ದಾರೆ.
ಜಾಗತಿಕ ಭದ್ರತಾ ಶೃಂಗದಲ್ಲಿ ಶುಕ್ರವಾರ ಆಶಯ ಭಾಷಣ ಮಾಡಿದ ಅವರು, ‘ಹಿಂದೂ ಮಹಾಸಾಗರದ ವ್ಯೂಹಾತ್ಮಕ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆದಿದೆ. ಇದು ಮುಂಬರುವ ದಿನಗಳಲ್ಲಿ ಇನ್ನೂ ತೀವ್ರಗೊಳ್ಳಲಿದೆ. ಈಗ 120 ಯುದ್ಧನೌಕೆಗಳು ವಿವಿಧ ಉದ್ದೇಶಗಳಿಗೆಂದು ಇಲ್ಲಿ ಬೀಡು ಬಿಟ್ಟಿವೆ. ಆದಾಗ್ಯೂ ಈ ಪ್ರದೇಶವು ಈವರೆಗೂ ಶಾಂತವಾಗಿದೆ’ ಎಂದು ಹೇಳಿದರು.
ಹಿಂದೂ ಮಹಾಸಾಗರವು ಭಾರತದ ‘ಬ್ಯಾಕ್‌ಯಾರ್ಡ್’ (ಹಿತ್ತಿಲು) ಎಂದು ಪರಿಗಣಿತವಾಗಿದೆ. ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ. ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಅವಿರತ ಯತ್ನ ನಡೆಸಿದೆ ಎಂಬುದು ಇಲ್ಲಿ ಗಮನಾರ್ಹ.
ಇನ್ನು ತಮ್ಮ ಭಾಷಣದಲ್ಲಿ ಚೀನಾ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಜ| ರಾವತ್, ‘ಭಾರತವು ತನ್ನ ‘ಕಠಿಣ ನೆರೆದೇಶ’ ಹಾಗೂ ‘ಗಡಿ ಸಂಘರ್ಷ’ ಹೊಂದಿದ್ದರೂ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ಇದಕ್ಕಾಗಿ ಶಾಂತ ಹಾಗೂ ಸ್ಥಿರ ಭದ್ರತಾ ವಾತಾವರಣ ಬೇಕು. ನಮ್ಮ ವ್ಯೂಹಾತ್ಮಕ ಸ್ವಾಯತ್ತೆಯನ್ನು ಹಾಗೂ ಬಲವಾದ ಪ್ರಾದೇಶಿಕ ಸಹಕಾರವನ್ನು ಹೊಂದಬೇಕು’ ಎಂದರು.