ಉತ್ತರಖಂಡ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆ!

By Suvarna NewsFirst Published Jul 3, 2021, 4:23 PM IST
Highlights
  • ತೀರಥ್ ಸಿಂಗ್ ರಾವತ್ ರಾಜೀನಾಮೆ ಕಾರಣ ತೆರವಾದ ಸಿಎಂ ಸ್ಥಾನಕ್ಕೆ ಆಯ್ಕೆ
  • ಉತ್ತರ ಖಂಡದ 11ನೇ ಮುಖ್ಯಮಂತ್ರಿಯಾದ ಪುಷ್ಕರ್ ಸಿಂಗ್ ಧಮಿ
  • ಬಿಜೆಪಿ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟ

ಡೆಹ್ರಡೂನ್(ಜು.03):  ಸಾಂವಿಧಾನಿಕ ಬಿಕ್ಕಟ್ಟು ಪರಿಹರಿಸಲು ತೀರಥ್ ಸಿಂಗ್ ರಾವತ್ ದಿಢೀರ್ ಉತ್ತರಖಂಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದು ರಾಜಕೀಯ ಬೆಳವಣಿಗೆಗೆ ಕಾರಣರಾಗಿದ್ದರು. ಈ ಬೆಳವಣಿಗೆ ಮರುದಿನವೇ ಉತ್ತರಖಂಡ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಪುಷ್ಕರ್ ಸಿಂಗ್ ಧಾಮಿಯನ್ನು ಇಂದು ಉತ್ತರಾಖಂಡ ಬಿಜೆಪಿ ಶಾಸಕಾಂಗ ಪಕ್ಷವು ರಾಜ್ಯದ ಹನ್ನೊಂದನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಪುಷ್ಕರ್ ಸಿಂಗ್ ಧಮಿ ಇಂದೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

ಸಿಎಂ ಆದ ಕೆಲವೇ ತಿಂಗಳಿಗೆ ರಾಜೀನಾಮೆ ಪತ್ರ ರವಾನಿಸಿದ ತೀರ್ಥ ಸಿಂಗ್ ರಾವತ್!.

ಉತ್ತರಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿರುವ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಪ್ರಕಟಗೊಂಡಿದೆ. ಈ ಸಭೆಯಲಲ್ಲಿ ಉತ್ತರಾಖಂಡ ಬಿಜೆಪಿಯ  57  ಶಾಸಕರು, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಬಿಜೆಪಿ ಹೈಕಮಾಂಡ್ ಪ್ರಮುಖರು ಪಾಲ್ಗೊಂಡಿದ್ದರು. ನಾಯಕರ ನಿರ್ಧಾರದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪ್ತ ಪುಷ್ಕರ್ ಸಿಂಗ್ ಧಮಿಗೆ ಸಿಎಂ ಸ್ಥಾನ ಒಲಿದು ಬಂದಿದೆ.

 

खटीमा, उधम सिंह नगर से माननीय विधायक,
श्री जी को उत्तराखंड के विधानमंडल का नेता निर्वाचित होने पर हार्दिक बधाई एवं शुभकामनाएं। pic.twitter.com/ycyOX1F8Bm

— BJP Uttarakhand (@BJP4UK)

ಸಭೆಯಲ್ಲಿ ಸಪ್ತಾಲ್ ಮಹರಾಜ್, ಧನ್ ಸಿಂಗ್ ರಾವತ್, ಮಾಜಿ ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ಹೆಸರೂ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಪುಷ್ಕರ್ ಸಿಂಗ್ ಧಮಿಗೆ ಸಿಎಂ ಪಟ್ಟಕ್ಕೇರುವ ಅವಕಾಶ ಸಿಕ್ಕಿದೆ. 45 ವರ್ಷದ ಪುಷ್ಕರ್ ಸಿಂಗ್ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.  ಧಮಿ, ಉತ್ತರಖಂಡ ಮಾಜಿ ಸಿಎಂ ಭಗತ್ ಸಿಂಗ್ ಕೊಶಿಯಾರಿಯ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 

ಆಡಳಿತದ ಬಗ್ಗೆ ದೂರು; ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ!..

ಮಾರ್ಚ್ 10 ರಂದು ಸಿಎಂ ತ್ರೀವೇಂದ್ರ ಸಿಂಗ್ ರಾವತ್ ಅವರನ್ನು ಕೆಳಗಿಳಿಸಿ, ತೀರಥ್ ಸಿಂಗ್ ರಾವತ್‌ಗೆ ಸಿಎಂ ಪಟ್ಟ ಕಟ್ಟಲಾಗಿತ್ತು. ಆದರೆ ಸೆಪ್ಟೆಂಬರ್ 10 ರೊಳಗೆ ರಾಜ್ಯ ವಿಧಾನಸಭೆಗೆ ಚುನಾಯಿತರಾಗುವ  ಸಾಧ್ಯತೆ ಕಡಿಮೆಯಾದ ಕಾರಣ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು. ಈ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ವಕ್ಕರಿಸಿದ ರೀತಿಯಲ್ಲಿ ನಡೆದುಕೊಂಡರು.

ನೂತನ ಸಿಎಂ ಪುಷ್ಕರ್ ಸಿಂಗ್ ಧಮಿ ಒಂದು ವರ್ಷ  ಪೂರೈಸುವುದರೊಳಗೆ ಉತ್ತರಖಂಡ ವಿಧನಾಸಭಾ ಚನಾವಣೆ ಬರಲಿದೆ. ಹೀಗಾಗಿ ಉತ್ತರಖಂಡ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಜೊತೆಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಹತ್ತರ ಜವಾಬ್ದಾರಿ ಧಮಿ ಮೇಲಿದೆ.

click me!