ವಿವಿಯ ಉಪಕುಲಪತಿಯನ್ನು ಕೊಳಕಾದ ಹಾಸಿಗೆ ಮೇಲೆ ಮಲಗಲು ಒತ್ತಾಯಿಸಿದ ಪಂಜಾಬ್‌ ಆರೋಗ್ಯ ಸಚಿವ..!

By BK AshwinFirst Published Jul 30, 2022, 1:50 PM IST
Highlights

ಪಂಜಾಬ್‌ ಆರೋಗ್ಯ ಸಚಿವರು ಖ್ಯಾತ ವೈದ್ಯ ಹಾಗೂ ಆರೋಗ್ಯ ವಿವಿಯೊಂದರ ಉಪ ಕುಲಪತಿಯನ್ನು ಕೊಳಕಾದ ಹಾಸಿಗೆ ಮೇಲೆ ಮಲಗುವಂತೆ ಒತ್ತಾಯಿಸಿರುವ ವಿಡಿಯೋವೊಂದು ವೈರಲ್‌ ಆಗಿದೆ. 

ವೈದ್ಯ ಹಾಗೂ ಬಾಬಾ ಫರೀದ್‌ ಆರೋಗ್ಯ ವಿಜ್ಘಾನ ವಿಶ್ವವಿದ್ಯಾಲಯದ (Baba Farid University of Health Sciences) (ಬಿಎಫ್‌ಯುಎಚ್‌ಎಸ್‌)ನ ಉಪ ಕುಲಪತಿಯನ್ನು ಆಸ್ಪತ್ರೆಯ ಕೊಳಕಾದ ಹಾಸಿಗೆಯ ಮೇಲೆ ಮಲಗುವಂತೆ ಪಂಜಾಬ್‌ ಆರೋಗ್ಯ ಸಚಿವ ಚೇತನ್‌ ಸಿಂಗ್‌ ಜೌರಾಮಾಜ್ರಾ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋವೊಂದು ವೈರಲ್‌ (viral video) ಆಗಿದ್ದು, ಈ ಹಿನ್ನೆಲೆ ಪಂಜಾಬ್‌ ಆರೋಗ್ಯ ಸಚಿವರ ವಿರುದ್ಧ ತೀವ್ರ ಆಕ್ರೋಶ ಕೇಳಿಬರುತ್ತಿದೆ.

ಅಲ್ಲದೆ, ಈ ಘಟನೆಯಿಂದ ಅವಮಾನಕ್ಕೊಳಗಾದ ಡಾ. ರಾಜ್‌ ಬಹದ್ದೂರ್‌ ಉಪ ಕುಲಪತಿ ಹುದ್ದೆಗೆ ರಾಜೀನಾಮೆ (Resign) ನೀಡಿದ್ದಾರೆ ಎಂದು ತಿಳಿದುಬಂದಿದ್ದು, ತನ್ನನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಅವರು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಂಜಾಬ್‌ ಆರೋಗ್ಯ ಸಚಿವರು ಫರೀದ್‌ಕೋಟ್‌ನ ಗುರು ಗೋವಿಂದ್‌ ಸಿಂಗ್‌ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಮದು ತಿಳಿದುಬಂದಿದೆ. ಈ ಆಸ್ಪತ್ರೆ ಬಾಬಾ ಫರೀದ್‌ ಆರೋಗ್ಯ ವಿಜ್ಘಾನ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುತ್ತದೆ.  

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಅನಾರೋಗ್ಯ: ದೆಹಲಿಯ ಆಸ್ಪತ್ರೆಗೆ ದಾಖಲು

ಖ್ಯಾತ ಸರ್ಜನ್‌ ಕೂಡ ಆಗಿರುವ ರಾಜ್‌ ಬಹದ್ದೂರ್‌ ಅವರ ಭುಜದ (shoulder) ಮೇಲೆ ಕೈ ಇಟ್ಟ ಪಂಜಾಬ್‌ ಆರೋಗ್ಯ ಸಚಿವರು, ಆಸ್ಪತ್ರೆಯೊಳಗಿನ ಚರ್ಮ ವಿಭಾಗದ (skin department) ಹಾಸಿಗೆಯೊಂದು ಹಾಳಾಗಿರುವುದು ಹಾಗೂ ಕೊಳಕಾದ ಸ್ಥಿತಿಯಲ್ಲಿರುವ ಕುರಿತು ತೋರಿಸಿದ್ದಾರೆ. ಈ ಸಂಬಂಧದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್‌ ಆಗಿದೆ. ಅಲ್ಲದೆ, ಅದೇ ಹಾಸಿಗೆಯ (mattress) ಮೇಲೆ ಮಲಗುವಂತೆ ಸಚಿವರು ವೈದ್ಯ ಹಾಗೂ ಉಪ ಕುಲಪತಿಯನ್ನು ಒತ್ತಾಯಿಸಿರುವುದು ಸಹ ವಿಡಿಯೋದಲ್ಲಿ ಕಂಡು ಬಂದಿದೆ. ಈ ಸೌಲಭ್ಯಗಳಿಗೆ ತಾನು ಹೊಣೆಯಲ್ಲ ಎಂದು ಬಹದ್ದೂರ್‌ ಸಚಿವರಿಗೆ ಹೇಳುತ್ತಿರುವುದನ್ನು ಸಹ ವಿಡಿಯೋದಲ್ಲಿ ಕೇಳಬಹುದು. ಆದರೂ, ಎಲ್ಲ ನಿಮ್ಮ ಕೈಗಳಲ್ಲೇ ಇದೆ ಎಂದು ಎಎಪಿ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.

ಈ ಘಟನೆ ಬಳಿಕ ಇಂತಹ ವಾತಾವರಣದಲ್ಲಿ ತಾನು ಕೆಲಸ ಮಾಡುವುದು ಸೂಕ್ತವಲ್ಲ ಹಾಗೂ ತನ್ನನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಡಾ. ರಾಜ್‌ ಬಹದ್ದೂರ್‌ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.     

71 ವರ್ಷದ ಬಹದ್ದೂರ್‌ ಹಲವು ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳು ಸೇರಿ ಒಟ್ಟಾರೆ 4 ದಶಕಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ತನಗೆ ಈ ಘಟನೆಯಿಂದ ಹಾಗೂ ಪಂಜಾಬ್‌ ಸಚಿವರ ವರ್ತನೆಯಿಂದ ಅವಮಾನವಾಯಿತು ಎಂದು ಬಹದ್ದೂರ್‌ ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ರಾಜೀನಾಮೆ ಬಗ್ಗೆ ಮಾಹಿತಿ ನೀಡಿದ ಬಹದ್ದೂರ್‌, ನಾನು ಈ ಸಂಬಂಧ ಮುಖ್ಯಮಂತ್ರಿಯ ಜತೆಗೆ ಮಾತನಾಡಿ ನನ್ನ ನೋವು ತೋಡಿಕೊಂಡಿದ್ದೇನೆ ಹಾಗೂ ನನಗೆ ಅವಮಾನವಾಗಿದೆ ಎಂದು ಹೇಳಿದ್ದೇನೆ ಎಂದೂ ತಿಳಿಸಿದ್ದಾರೆ. 

ಇನ್ನು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಭಗವಂತ್‌ ಮಾನ್‌, ಆರೋಗ್ಯ ಸಚಿವ ಜೌರಾಮಮಾಜ್ರಾ ಅವರೊಂದಿಗೆ ಮಾತನಾಡಿದ್ದಾರೆ. ಹಾಗೂ, ಮುಂದಿನ ವಾರ ತನ್ನನ್ನು ಭೇಟಿಯಾಗುವಂತೆ ಭಗವಂತ ಮಾನ್‌ ಬಹದ್ದೂರ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇಂದಿನಿಂದ ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ

ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಹಾಗೂ ಜಾಯಿಂಟ್‌ ರೀಪ್ಲೇಸ್‌ಮೆಂಟ್‌ ಮಾಡುವ ತಜ್ಞರಾಗಿರುವ ಬಹದ್ದೂರ್‌, ಚಂಡೀಗಢದ ಸರ್ಕಾರಿ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ಮಾಜಿ ನಿರ್ದೇಶಕ ಹಾಗೂ ಪ್ರಿನ್ಸಿಪಾಲ್‌ ಆಗಿದ್ದರು. ಅಲ್ಲದೆ, ಚಂಡೀಗಢದ PGIMERನ ಆರ್ಥೋಪೆಡಿಕ್‌ ವಿಭಾಗದ ಮುಖ್ಯಸ್ಥರೂ ಸಹ ಆಗಿದ್ದಾರೆ. 
  
ಇನ್ನೊಂದೆಡೆ, ಭಾರತೀಯ ಮೆಡಿಕಲ್‌ ಅಸೋಸಿಯೇಷನ್‌ ಸೇರಿ ವಿವಿಧ ಸಂಸ್ಥೆಗಳು ಸಹ ಪಂಜಾಬ್‌ ಆರೋಗ್ಯ ಸಚಿವರ ವರ್ತನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

click me!