ಅಮರೀಂದರ್‌ ವಿರುದ್ಧ 4 ಸಚಿವರು, 23 ಶಾಸಕರ ಬಂಡಾಯ!

By Suvarna NewsFirst Published Aug 25, 2021, 12:09 PM IST
Highlights

* ಸಿಎಂ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದ ಬಂಡುಕೋರರು

* ಅಮರೀಂದರ್‌ ವಿರುದ್ಧ 4 ಸಚಿವರು, 23 ಶಾಸಕರ ಬಂಡಾಯ

* ನಾಯಕತ್ವ ಬದಲಾವಣೆಗೆ ಪಟ್ಟು

* ಪಂಜಾಬ್‌ ಕಾಂಗ್ರೆಸ್ಸಲ್ಲಿ ಹೊಸ ಬಿಕ್ಕಟ್ಟು

ಚಂಡೀಗಢ(ಆ.25): ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ವಿರುದ್ಧ ನಾಲ್ವರು ಸಚಿವರು ಹಾಗೂ ಹಲವು ಕಾಂಗ್ರೆಸ್‌ ಶಾಸಕರು ಬಹಿರಂಗವಾಗಿಯೇ ಬಂಡಾಯ ಸಾರಿದ್ದು, ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹಿಸಿದ್ದಾರೆ.

ಚುಣಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಅಮರೀಂದರ್‌ ಸಿಂಗ್‌ ವಿಫಲರಾಗಿದ್ದು, ಅವರ ಮೇಲೆ ನಾವು ನಂಬಿಕೆಯನ್ನು ಕಳೆದುಕೊಂಡಿರುವುದಾಗಿ ಬಂಡಾಯ ಮುಖಂಡರು ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಹೈಕಮಾಂಡ್‌ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

ಸಚಿವರಾದ ಸುಖಜಿಂದರ್‌ ರಂಧಾವಾ, ತೃಪ್‌್ತ ರಾಜಿಂದರ್‌ ಬಜ್ವಾ, ಸುಖಬಿಂದರ್‌ ಸರ್ಕಾರಿಯಾ, ಚರಣ್‌ಜಿತ್‌ ಚನ್ನಿ ಹಾಗೂ 23 ಮಂದಿ ಕಾಂಗ್ರೆಸ್‌ ಶಾಸಕರು ಬಜ್ವಾ ಅವರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ನಿಯೋಗ ಸಮೇತ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಆಗಿ ಅಹವಾಲು ಸಲ್ಲಿಸಲಿದ್ದಾರೆ ಎಂದು ಎನ್ನಲಾಗಿದೆ.

ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ, ನಾವು ಅಮರೀಂದರ್‌ ಸಿಂಗ್‌ ಅವರಲ್ಲಿ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಸಚಿವರಾದ ಸುಖಜಿಂದರ್‌ ರಾಂಧವ್‌ ಹಾಗೂ ಚರಣ್‌ಜಿತ್‌ ಚನ್ನಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಸಿಧು ಆಪ್ತರ ವಜಾಕ್ಕೆ ಆಗ್ರಹ:

ಇದೇ ವೇಳೆ ಕಾಶ್ಮೀರ ಹಾಗೂ ಪಾಕಿಸ್ತಾನದ ಕುರಿತಂತೆ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸಿಧು ಅವರ ಆಪ್ತರು ನೀಡಿರುವ ವಿವಾದಿತ ಹೇಳಿಕೆ ಪಕ್ಷದ ವರಿಷ್ಠರನ್ನು ಕೆರಳಿಸಿದೆ. ಅವರನ್ನು ವಜಾ ಮಾಡಬೇಕು ಎಂದು ಅಮರೀಂದರ್‌ ಸಿಂಗ್‌ ಅವರ ಬಣ ಆಗ್ರಹಿಸಿದೆ. ಈ ಸಂಬಂಧ ಸಿಧು ತಮ್ಮ ರಾಜಕೀಯ ಸಲಹೆಗಾರರಾದ ಮಾಲ್ವಿಂದರ್‌ ಸಿಂಗ್‌ ಮಾಲಿ ಹಾಗೂ ಪ್ಯಾರೆಲಾಲ್‌ ಗರ್ಗ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಪಕ್ಷದ ಹೈಕಮಾಂಡ್‌ ಕೂಡ ಸಿಧು ಆಪ್ತರ ಬಗ್ಗೆ ಕೆರಳಿದೆ ಎನ್ನಲಾಗಿದೆ.

click me!