ಅಕ್ರಮ ಹಣ ವರ್ಗಾವಣೆ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ!

By Suvarna NewsFirst Published Feb 4, 2022, 11:00 AM IST
Highlights

*ಪಂಜಾಬ್ ಸಿಎಂ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ
*ಅಕ್ರಮ ಹಣ ವರ್ಗಾವಣೆ ಪ್ರಕರಣ:  ದಾಳಿ ಮಾಡಿದ್ದ ಇಡಿ
*ಹನಿ ಮತ್ತು ಇತರರ ವಸತಿ ಆವರಣದಲ್ಲಿ ಇಡಿ ದಾಳಿ

 

ಚಂಡೀಗಢ (ಫೆ. 04): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಂಜೆ ಬಂಧಿಸಿದೆ. ಜಲಂಧರ್‌ನಲ್ಲಿರುವ ಇಡಿ ಕಚೇರಿಯಲ್ಲಿ ಭೂಪಿಂದರ್ ಸಿಂಗ್ ಹನಿ ವಿಚಾರಣೆಗೆ ಒಳಪಡಿಸಲಾಗಿತ್ತು.ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅನ್ವಯ ಬಂಧನಾವಾಗಿದೆ. ನಂತರ ಅವರನ್ನು ಮೊಹಾಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪಿಂದರ್ ಸಿಂಗ್ ಹನಿ ಮತ್ತು ಇತರರ ವಸತಿ ಆವರಣದಲ್ಲಿ 10 ಕೋಟಿಗೂ ಹೆಚ್ಚು ಹಣ, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಂಡ 20 ದಿನಗಳ ನಂತರ ಇಡಿ ಈ ಕ್ರಮ ಕೈಗೊಂಡಿದೆ.

ಮೊಹಾಲಿ, ಲುಧಿಯಾನ, ರೂಪನಗರ, ಫತೇಘರ್ ಸಾಹಿಬ್ ಮತ್ತು ಪಠಾಣ್‌ಕೋಟ್‌ನಲ್ಲಿ ಹನ್ನೆರಡು ಸ್ಥಳಗಳಲ್ಲಿ ಆರೋಪಿಗಳು ಮತ್ತು ಅವರ ಸಹಚರರ ವ್ಯಾಪಾರ ಮತ್ತು ವಸತಿ ಆವರಣದಲ್ಲಿ ನಡೆಸಿದ ಎರಡು ದಿನಗಳ ದಾಳಿಯನ್ನು ಮುಕ್ತಾಯಗೊಳಿಸಿದ ನಂತರ ಇಡಿ ವಸೂಲಾತಿಗಳನ್ನು ಘೋಷಿಸಿದೆ.

ಇದನ್ನೂ ಓದಿ: Punjab Elections: ಚುನಾವಣೆಗೂ ಮುನ್ನ ಚನ್ನಿ ಸರ್ಕಾರಕ್ಕೆ ಬಿಗ್ ಶಾಕ್, ಚಾಟಿ ಬೀಸಿದ ಹೈಕೋರ್ಟ್‌!

ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಚನ್ನಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದಲ್ಲಿ, ಇದು ನನ್ನನ್ನು, ನನ್ನ ಮಂತ್ರಿಗಳನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಯತ್ನವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಇಡಿ ಕ್ರಮವು ಪ್ರಧಾನಿ ಭದ್ರತಾ ಉಲ್ಲಂಘನೆಯ ಘಟನೆಗೆ ಪ್ರತೀಕಾರವಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ.

ಫೆಡರಲ್ ಏಜೆನ್ಸಿ ಜನವರಿ 18 ಮತ್ತು 19 ರಂದು ಪಿಂಜೋರ್ ರಾಯಲ್ಟಿ ಕಂಪನಿಯ ಮಾಲೀಕ ಕುದ್ರತ್‌ದೀಪ್ ಸಿಂಗ್ ಮತ್ತು ಅವರ ಪಾಲುದಾರರು ಮತ್ತು ಷೇರುದಾರರಾದ ಕನ್ವರ್ಮಹಿಪ್ ಸಿಂಗ್, ಮನ್‌ಪ್ರೀತ್ ಸಿಂಗ್, ಸುನೀಲ್ ಕುಮಾರ್ ಜೋಶಿ, ಜಗವೀರ್ ಇಂದರ್ ಸಿಂಗ್ ಸೇರಿದಂತೆ ಆರೋಪಿಗಳು ಮತ್ತು ಅವರ ಸಹಚರರ ಆವರಣಗಳ ಮೇಲೆ ದಾಳಿ ನಡೆಸಿತ್ತು.

ಪ್ರೊವೈಡರ್ಸ್ ಓವರ್‌ಸೀಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ರಣದೀಪ್ ಸಿಂಗ್ ಮತ್ತು ಭೂಪಿಂದರ್ ಸಿಂಗ್ ಮತ್ತು ಸಂದೀಪ್ ಕುಮಾರ್ ಸೇರಿದಂತೆ ಅದರ ಇತರ ನಿರ್ದೇಶಕರು ಮತ್ತು ಷೇರುದಾರರ ಆವರಣದಲ್ಲಿಯೂ ದಾಳಿ ನಡೆಸಲಾಯಿತು. ದಾಳಿಯಲ್ಲಿ ಮೊಹಾಲಿಯ ಸೆಕ್ಟರ್-70 ನಲ್ಲಿರುವ  ಭೂಪಿಂದರ್ ಸಿಂಗ್ ಹನಿ ಹೋಮ್‌ಲ್ಯಾಂಡ್ ಹೈಟ್ಸ್ ಸೊಸೈಟಿ ನಿವಾಸ ಕೂಡ ಸೇರಿತ್ತು.

ಇದನ್ನೂ ಓದಿ: 5 State Election: ಹಣಕ್ಕಾಗಿ ತಾಯಿಯನ್ನೇ ತೊರೆದ'ಕ್ರೂರಿ ಸಿಧು';ಪಂಜಾಬ್ ಪಾಲಿಟಿಕ್ಸ್‌ನಲ್ಲಿ ಸಂಚಲನ 

ಆಗಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಹೆಲಿಕಾಪ್ಟರ್‌ನಿಂದ ರಾಹೋನ್ ಮತ್ತು ಫಿಲ್ಲೌರ್ ನಡುವೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದನ್ನು ಗಮನಿಸಿದ ನಂತರ ಮಾರ್ಚ್ 7, 2018 ರಂದು, ಗಣಿ ಮತ್ತು ಖನಿಜಗಳ ಕಾಯಿದೆ 1957 ರ ಸೆಕ್ಷನ್ 21 (1), 4 (1) ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 379, 420, 465, 467, 468 ಮತ್ತು 471 ರ ಅಡಿಯಲ್ಲಿ ಶಹೀದ್ ಭಗತ್ ಸಿಂಗ್ ನಗರದ ರಹೋನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆಗ ಈ ಕಾರ್ಯಾಚರಣೆಗಳು ನಡೆಯುತ್ತಿರುವ ಆರು ಸ್ಥಳಗಳಲ್ಲಿ ಪೊಲೀಸರು ಹಲವು ಬಾರಿ ದಾಳಿ ನಡೆಸಿದ ನಂತರ ಅಕ್ರಮ ಗಣಿಗಾರಿಕೆಗಾಗಿ ಈ ಪ್ರಕರಣದಲ್ಲಿ ಕುದ್ರತ್ದೀಪ್ ಸಿಂಗ್ ಸೇರಿದಂತೆ 26 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿತ್ತು. 

click me!