ರೈಲು ನಿಲ್ದಾಣದಲ್ಲಿ ಮಲಗಿದ ಪ್ರಯಾಣಿಕರಿಗೆ ನೀರೆರಚಿದ ಪೊಲೀಸ್: Video Viral ವ್ಯಾಪಕ ಆಕ್ರೋಶ

By Anusha Kb  |  First Published Jul 2, 2023, 12:01 PM IST

ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ ಮೇಲೆ ಮಲಗಿದ್ದ ಪ್ರಯಾಣಿಕರ ಮೇಲೆ ರೈಲ್ವೆ ಪೊಲೀಸ್ ಪೇದೆಯೋರ್ವ ನೀರು ಎರಚುತ್ತಾ ಸಾಗಿದ್ದು, ಈ ವೀಡಿಯೋಗೆ ಈಗ ವ್ಯಾಪಕ ಆಕ್ರೋಶ ವ್ಯಕವಾಗಿದೆ.


ಪುಣೆ: ಭಾರತೀಯ ರೈಲ್ವೆಯಲ್ಲಿ ದಿನವೂ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಬಹಳ ದೂರ ಪ್ರಯಾಣಿಸುವ ಮಧ್ಯಮ ವರ್ಗದ ಜನ ರೈಲನ್ನೇ ಹೆಚ್ಚು ಬಳಸುತ್ತಾರೆ. ಅಗ್ಗ ಹಾಗೂ ಆರಾಮದಾಯಕವಾಗಿರುವುದು ಇದಕ್ಕೆ ಕಾರಣ. ಹೀಗೆ ದೂರ ದೂರ ಪ್ರಯಾಣಿಸುವವರಿಗೆ ಸಮಯಕ್ಕೆ ತಕ್ಕಂತೆ ರೈಲುಗಳು ಸಿಗುವುದಿಲ್ಲ, ಇದರಿಂದ ಬಹಳ ಹೊತ್ತು ಕೆಲವರು ರೈಲು ನಿಲ್ದಾಣದಲ್ಲಿ ಕಾಯಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹವರು ರೈಲು ನಿಲ್ದಾಣದಲ್ಲಿಯೇ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಮಲಗಿರುವುದನ್ನು ನೀವೆಲ್ಲಾ ಗಮನಿಸಿರಬಹುದು. ಆದರೆ ಹೀಗೆ ಮಲಗಿದ್ದ ಪ್ರಯಾಣಿಕರ ಮೇಲೆ ರೈಲ್ವೆ ಪೊಲೀಸ್ ಪೇದೆಯೋರ್ವ ನೀರು ಎರಚುತ್ತಾ ಸಾಗಿದ್ದು, ಈ ವೀಡಿಯೋಗೆ ಈಗ ವ್ಯಾಪಕ ಆಕ್ರೋಶ ವ್ಯಕವಾಗಿದೆ.

ಪುಣೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್‌ ಪೇದೆಯೋರ್ವ ಕೈಯಲ್ಲಿ ಲಾಠಿ ಹಿಡಿದುಕೊಂಡು ಬಾಟಲೊಂದರಲ್ಲಿ ನೀರಿಡಿದುಕೊಂಡು ಪ್ಲಾಟ್‌ಫಾರ್ಮ್‌ನಲ್ಲಿ ಸಾಲಾಗಿ ಮಲಗಿದ್ದವರ ಮುಖದ ಮೇಲೆ ನೀರು ಸುರಿಯುತ್ತಾ ಮುಂದೆ ಸಾಗಿದ್ದಾನೆ. ಸಡನ್ ಆಗಿ ಮುಖದ ಮೇಲೆ ನೀರು ಬಿದ್ದಿದ್ದರಿಂದ  ಮಲಗಿದ್ದ ಪ್ರಯಾಣಿಕರು ಗಾಬರಿಯಿಂದ ಎದ್ದು ಕುಳಿತು ಸುತ್ತಲೂ ಆತಂಕದಿಂದ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ರುಪೇನ್ ಚೌಧರಿ ಎಂಬುವವರು ಪೋಸ್ಟ್ ಮಾಡಿದ್ದು, ಮಾನವತೆಗೆ ಆರ್‌ಐಪಿ ಎಂದು ಬರೆದಿದ್ದಾರೆ. 

Tap to resize

Latest Videos

ಬೆಂಗಳೂರು: 1.21 ಕೋಟಿಯ ಚಿನ್ನ ದೋಚಿದ್ದು ಪೊಲೀಸರೇ..!

ಈ ವೀಡಿಯೋಗೆ ರೈಲ್ವೆ ವಿಭಾಗೀಯ ಮ್ಯಾನೇಜರ್ (DRM) ಇಂದು ದುಬೆ (Indu Dubey) ಅವರು ಕೂಡ ಪ್ರತಿಕ್ರಿಯಿಸಿದ್ದು,  ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಆದರೆ ಈ ಪರಿಸ್ಥಿತಿಯನ್ನು ನಿರ್ವಹಿಸುವ ರೀತಿ ಇದಲ್ಲ, ಈ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಬಹುದಿತ್ತು. ಈ ರೀತಿ ವರ್ತಿಸಿದ ಸಿಬ್ಬಂದಿಗೆ ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಪ್ರಯಾಣಿಕರೊಂದಿಗೆ ಘನತೆ, ಗೌರವ ಮತ್ತು ಸಭ್ಯತೆಯಿಂದ ವ್ಯವಹರಿಸಲು ಸೂಕ್ತವಾಗಿ ಸಲಹೆ ನೀಡಲಾಗಿದೆ. ಆದರೆ ಈ ಘಟನೆಗೆ ತೀವ್ರ ವಿಷಾದವಿದೆ ಎಂದು ಇಂದು ದುಬೆ ಅವರು ಪ್ರತಿಕ್ರಿಯಿಸಿದ್ದಾರೆ. 

ಈ ನಡುವೆ ಈ ವೀಡಿಯೋವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಾಚಿಕೆಗೇಡಿನ ಘಟನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರೈಲ್ವೆ ಇಲಾಖೆ ರೈಲು ನಿಲ್ದಾಣಗಳಲ್ಲಿ ವಿಶ್ರಾಂತಿ ಕೇಂದ್ರ (waiting area)ವನ್ನು ಹೆಚ್ಚು ಮಾಡಬೇಕು. ಹಾಗೆಯೇ ರೈಲುಗಳು ಕೂಡ ಸರಿಯಾದ ಸಮಯಕ್ಕೆ ಬರುವಂತೆ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಹೆರಿಗೆ ಸಂಕಟ: ಹೆರಿಗೆಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಬೆಂಗಳೂರು ರೈಲ್ವೆ ಪೊಲೀಸ್

ಮತ್ತೆ ಕೆಲವರು ಪೊಲೀಸ್ ಸಿಬ್ಬಂದಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ಮಲಗುವಂತಿಲ್ಲ, ಪ್ಲಾಟ್‌ಫಾರ್ಮ್‌ನಲ್ಲಿ ಮಲಗದಂತೆ ನಿಯಮ ಅಥವಾ ಕಾನೂನನ್ನು ಜಾರಿಗೊಳಿಸಲು ತುಂಬಾ ಸೌಮ್ಯವಾದ ಮಾರ್ಗ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟು ಸೃಜನಾತ್ಮಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಈ ಪೊಲೀಸ್‌ಗೆ ಸೆಲ್ಯೂಟ್. ಜನರು ಪ್ಲಾಟ್‌ಫಾರ್ಮ್‌ಗಳು, ಮೆಟ್ಟಿಲುಗಳು ಇತ್ಯಾದಿಗಳಲ್ಲಿ ಮಲಗಲು ಪ್ರಾರಂಭಿಸಿದರೆ, ಆತುರದಲ್ಲಿರುವ ಪ್ರಯಾಣಿಕರು ಹೇಗೆ ಹಾದು ಹೋಗುತ್ತಾರೆ ಎಂದು ಊಹಿಸಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

RIP Humanity 🥺🥺

Pune Railway Station pic.twitter.com/M9VwSNH0zn

— 🇮🇳 Rupen Chowdhury 🚩 (@rupen_chowdhury)

 

Sleeping on the Platform causes inconvenience to others however the way it was handled is not a suitable way of counseling passengers. Concerned staff has been suitably advised to deal with passengers with dignity, politeness & decency. This incident is deeply regretted.

— Smt. Indu Dubey (@drmpune)

 

click me!