
ಲಖನೌ(ಫೆ.16) ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರ ಪ್ರದೇಶಕ್ಕೆ ಎಂಟ್ರಿಕೊಟ್ಟಿದೆ. ಆದರೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಖಚಿತಪಡಿಸಿತ್ತು. ಆದರೆ ರಾಹುಲ್ ಗಾಂಧಿ ಯಾತ್ರೆ ಯುಪಿಗೆ ಎಂಟ್ರಿಕೊಟ್ಟರೂ ಪ್ರಿಯಾಂಕಾ ಗಾಂಧಿ ಸುಳಿವಿಲ್ಲ. ಹೀಗಾಗಿ ಪ್ರಿಯಾಂಕಾ ಗಾಂಧಿ ಉದ್ದೇಶಪೂರ್ವಕವಾಗಿ ಯಾತ್ರೆಯಿಂದ ದೂರ ಸರಿದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಖುದ್ದು ಪ್ರಿಯಾಂಕಾ ಗಾಂಧಿ ವಾದ್ರ ಸ್ಪಷ್ಟನೆ ನೀಡಿದ್ದಾರೆ. ಅನಾರೋಗ್ಯದ ಕಾರಣ ಭಾರತ್ ಜೋಡೋ ನ್ಯಾಯಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಉತ್ತರ ಪ್ರದೇಶವನ್ನು ತಲುಪಲು ಕಾತುರದಿಂದ ಕಾಯುತ್ತಿದ್ದೆ. ಆದರೆ ಉತ್ತರ ಪ್ರದೇಶಕ್ಕೆ ನ್ಯಾಯ ಯಾತ್ರೆ ತಲುಪಿದ ದಿನವೇ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಬೇಕಾಯಿತು. ನಾನು ಗುಣಮುಖರಾಗದ ಬೆನ್ನಲ್ಲೇ ಯಾತ್ರೆ ಸೇರಿಕೊಳ್ಳುತ್ತೇನೆ. ಅಲ್ಲೀವರಗೆ ಚಂದೌಲಿ-ಬನಾರಸ್‌ನಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಸಹೋದ್ಯೋಗಿಗಳಿಗೆ, ಉತ್ತರ ಪ್ರದೇಶದ ಆತ್ಮೀಯರಿಗೆ ಅಭಿನಂದನೆಗಳು ಎಂದು ಪ್ರಿಯಾಂಕಾ ಗಾಂಧಿ ವಾದ್ರ ಟ್ವೀಟ್ ಮಾಡಿದ್ದಾರೆ.
ಮೋದಿ ಆದಾಯ 1.6 ಲಕ್ಷ , ಹಾಕೋ ಬಟ್ಟೆ 3 ಕೋಟಿ: ರಾಹುಲ್ ಆರೋಪ
ಚಂದೌಲಿ-ಬನಾರಸ್‌ನಲ್ಲಿ ಪ್ರಿಯಾಂಕಾ ಗಾಂಧಿ ರಾಹುಲ್ ಗಾಂಧಿ ಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇತ್ತ ಉತ್ತರ ಪ್ರದೇಶ ತಲುಪಿರುವ ರಾಹುಲ್ ಗಾಂಧಿ ಯಾತ್ರೆ ರೈತರ ಜೊತೆ ಸಂವಾದ ನಡೆಸಿದೆ. ರೈತರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡಿದೆ. ಉತ್ತರ ಪ್ರದೇಶ, ಹರ್ಯಾಣ ಹಾಗೂ ಪಂಜಾಬ್ ರೈತರು ದೆಹಲಿ ಗಡಿ ಭಾಗದಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ರೈತರ ಜೊತೆ ಸಂವಾದ ನಡೆಸಿ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
ಸೋನಿಯಾ ಗಾಂಧಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ರಾಯ್‌ಬರೇಲಿ ಸ್ಥಾನದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡುವ ಸಾಧ್ಯೆತಗಳು ಕಾಣಿಸುತ್ತಿದೆ. ಪ್ರಿಯಾಂಕಾ ವಾದ್ರಾ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ತಮ್ಮ ತಾಯಿ ಪ್ರತಿನಿಧಿಸುವ ರಾಯ್‌ಬರೇಲಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಪ್ರಿಯಾಂಕಾ ಕಣಕ್ಕೆ ಇಳಿಯಲಿದ್ದಾರೆ ಎಂದು ವರದಿಯಾಗಿತ್ತಾದರೂ ಹಾಗೆ ಆಗಿರಲಿಲ್ಲ.
RLD ಮೈತ್ರಿ ಮುರಿದ ಬೆನ್ನಲ್ಲೇ ರಾಹುಲ್ ಯಾತ್ರೆ ಮಾರ್ಗ ಬದಲಾವಣೆ, ಪಶ್ಚಿಮ ಯುಪಿಗಿಲ್ಲ ಜೋಡೋ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ