
ಶಾಲಾ ವಾಹನ ತನ್ನನ್ನು ಕರೆದುಕೊಂಡು ಹೋಗಲು ಬರಲಿಲ್ಲ ಎಂದು ಶಾಲಾ ಬಾಲಕಿಯೊಬ್ಬಳು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡಿದ್ದರಿಂದ ರಸ್ತೆಯುದ್ಧಕ್ಕೂ ವಾಹನಗಳು ಸಾಲಾಗಿ ನಿಂತು ಟ್ರಾಫಿಕ್ ಜಾಮ್ ಉಂಟಾದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. 10 ವರ್ಷದ 5ನೇ ಕ್ಲಾಸ್‌ನಲ್ಲಿ ಓದುತ್ತಿರುವ ಬಾಲಕಿ ಸುರಭಿ ಯಾದವ್ ತನ್ನ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ಸುಮಾರು 3 ಗಂಟೆಯವರೆಗೂ ಆಕೆ ರಸ್ತೆಯಿಂದ ಮೇಲೆ ಏಳುವುದಕ್ಕೆ ನಿರಾಕರಿಸಿದ್ದಾಳೆ. ಬಾಲಕಿಯೊಬ್ಬಳು ರಸ್ತೆ ಮಧ್ಯೆ ಕುಳಿತು ಅಲ್ಲಿಂದ ಏಳುವುದಕ್ಕೆ ನಿರಾಕರಿಸಿದ್ದರಿಂದಾಗಿ ವಾಹನ ಚಾಲಕರು ರಸ್ತೆಯಲ್ಲೇ ಸಾಲುಗಟ್ಟಿ ಬಾಲಕಿ ರಸ್ತೆಯಿಂದ ಏಳುವುದಕ್ಕಾಗಿಯೇ ಕಾದು ನಿಂತಿದ್ದಾರೆ.
ಸುರಭಿ ಯಾದವ್ ಎಂಬ ಈ ಬಾಲಕಿಗೆ ಶಿಕ್ಷಣ ಹಕ್ಕು ಕಾಯ್ದೆ(Right to Education Act)ಯಡಿ ಖಾಸಗಿ ಶಾಲೆಯೊಂದರಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲಾಗಿತ್ತು. ಈಕೆ ಆ ಶಾಲೆಗೆ ಹೋಗುವುದಕ್ಕಾಗಿ ಪ್ರತಿದಿನವೂ 18 ಕಿಲೋ ಮೀಟರ್ ದೂರ ಪ್ರಯಾಣಿಸಬೇಕಿತ್ತು. ಆದರೆ ಆಕೆಯ ಕುಟುಂಬದವರು ವ್ಯಾನ್ ಫೀಸ್ (transportation fees ) ಪಾವತಿಸುವುದಕ್ಕೆ ವಿಫಲರಾದ ಹಿನ್ನೆಲೆ ಶಾಲೆ ಆಡಳಿತ ಮಂಡಳಿಯೂ ಬಾಲಕಿಗೆ ಶಾಲಾ ವ್ಯಾನ್ ಕಳುಹಿಸುವುದನ್ನು ನಿರಾಕರಿಸಿತು. ಆಕೆಯ ಕುಟುಂಬವು ಕಳೆದ ಎರಡು ವರ್ಷಗಳಿಂದ ಶಾಲಾ ವಾಹನ ಶುಲ್ಕವನ್ನು ಪಾವತಿ ಮಾಡುವುದಕ್ಕೆ ನಿರಾಕರಿಸಿದ್ದಾರೆ. ಶಾಲೆಯ ವ್ಯಾನ್ ಸೇವೆಯು ಶುಲ್ಕ ಆಧಾರಿತವಾಗಿದ್ದು, ಪದೇ ಪದೇ ಆಕೆಯ ಪೋಷಕರಿಗೆ ನೀಡಿದ ಸೂಚನೆಯನ್ನು ನಿರ್ಲಕ್ಷಿಸಲಾಗಿದೆ ಶಾಲಾ ಆಡಳಿತ ಮಂಡಳಿ ಹೇಳಿದೆ.
ವಿದ್ಯಾರ್ಥಿನಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ಮಾಡಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ಆಕೆ ನಾನು ಶಾಲೆಗೆ ಹೋಗಬೇಕು ಎಂದು ಹೇಳುತ್ತಲೇ ಇದ್ದಳು. ಆಕೆ ಬೊಬ್ಬೆ ಹೊಡೆಯಲಿಲ್ಲ. ಅಳು ಇಲ್ಲ, ಅವಳು ಕೇವಲ ಅಲ್ಲಿ ಕುಳಿತು ಪ್ರತಿಭಟಿಸಿದಳು ಎಂದು ಹೇಳಿದ್ದಾರೆ. ಬಾಲಕಿಯ ತಾಯಿ ಆಶಾ ಯಾದವ್ ಮಾತನಾಡಿ, ನನ್ನ ಮಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಆ ಶಾಲೆಗೆ ಪ್ರವೇಶ ನೀಡಲಾಗಿತ್ತು. ಶಾಲೆಯು ಅವಳಿಗೆ ಇಡೀ ವರ್ಷ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಿಲ್ಲ. ನಂತರ ನವೆಂಬರ್‌ನಲ್ಲಿ ಕೇವಲ 28 ದಿನಗಳು ಮಾತ್ರ ಓದಲು ಅವಕಾಶ ಮಾಡಿಕೊಟ್ಟರು ಮತ್ತು ಮತ್ತೆ ನಿಲ್ಲಿಸಿದರು. ಇಂದು ಅವರು ಅವಳನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ. ಅವಳು ಅಪಾರ ಒತ್ತಡದಲ್ಲಿದ್ದಾಳೆ. ಅವಳು ಅಳುತ್ತಾಳೆ ಎಂದು ವಿದ್ಯಾರ್ಥಿನಿಯ ತಾಯಿ ಹೇಳಿದ್ದಾರೆ.
ಇದನ್ನೂ ಓದಿ: ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ
ಆದರೆ ಬಾಲಕಿಯ ಈ ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿಸಂಚಾರ ವ್ಯತ್ಯಯ ಉಂಟಾಗಿ, ಪ್ರಯಾಣಿಕರು ಓಡಾಡಲು ಕಷ್ಟಪಟ್ಟರು. ಮಾಹಿತಿ ಪಡೆದ ನಂತರ, ಚಿಚೋಲಿ ಪೊಲೀಸರು ಸ್ಥಳಕ್ಕೆ ತಲುಪಿ ಮಗುವಿನೊಂದಿಗೆ ಮಾತನಾಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಆಗಮಿಸಿ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಸುಮಾರು ಮೂರು ಗಂಟೆಗಳ ನಂತರ, ಹುಡುಗಿ ಕೊನೆಗೂ ಎದ್ದು ರಸ್ತೆಯಿಂದ ಹೊರಟು ಹೋದಳು. ನಂತರ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಲಾ ಆಡಳಿತ ಮಂಡಳಿಯು ಪೋಷಕರೇ ಮಗುವನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಘಟನೆಯ ಸಮಯದಲ್ಲಿ ಚಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ