ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ; ತೌಕ್ಟೆ ಚಂಡಮಾರುತ ಎದುರಿಸಲು ಸಿದ್ಧತೆ ಪರಿಶೀಲನೆ!

By Suvarna NewsFirst Published May 15, 2021, 7:48 PM IST
Highlights
  • ಚಂಡಮಾರುತ ಎದುರಿಸಲು ಭಾರತ ಸಂಪೂರ್ಣ ಸಿದ್ಧತೆ
  • ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ
  • ಸಿದ್ಧತೆ ಪರಿಶೀಲಿಸಿದ ಮೋದಿ
     

ನವದೆಹಲಿ(ಮೇ.15): ಕೊರೋನಾ ನಡುವೆ ಭಾರತದ ಕರಾವಳಿ ಭಾಗಗಳನ್ನು ತಲ್ಲಣಗೊಳಿಸಿರುವ ತೌಕ್ಟೆ ಚಂಡಮಾರುತ ತೀವ್ರ ತಲೆನೋವಾಗಿ ಪರಿಣಮಿಸಿದೆ. ಗುಜರಾತ್, ಕೇರಳ, ಕರ್ನಾಟಕ ಸೇರಿದಂತೆ ಕರಾವಳಿ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿರುವ ತೌಕ್ಟೆ ಚಂಡಮಾರುತ ಪರಿಸ್ಥಿತಿ ಎದುರಿಸಲು ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. 

 ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ.

ತೌಕ್ಟೆ ಚಂಡಮಾರುತ ಎದುರಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲಾ ಕರಾವಳಿ ರಾಜ್ಯಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಗೃಹ ಸಚಿವಾಲಯ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ.   ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಂಬಂಧಪಟ್ಟ ಎಜೆನ್ಸಿಗಳು ಜೊತೆ ಗೃಹ ಸಚಿವಾಲಯ ಸಂಪರ್ಕದಲ್ಲಿದೆ.  ಈಗಾಗಲೇ ಎಸ್‌ಡಿಆರ್‌ಎಫ್‌ನ ಮೊದಲ ಕಂತನ್ನು ಎಲ್ಲಾ ರಾಜ್ಯಗಳಿಗೆ ಮುಂಚಿತವಾಗಿ ಬಿಡುಗಡೆ ಮಾಡಿದೆ. ಆರು ರಾಜ್ಯಗಳಲ್ಲಿ ದೋಣಿಗಳು,  ಟೆಲಿಕಾಂ ಉಪಕರಣಗಳು ಇತ್ಯಾದಿಗಳನ್ನು ಹೊಂದಿದ 42 ತಂಡಗಳನ್ನು ಎನ್‌ಡಿಆರ್‌ಎಫ್ ಮೊದಲೇ ಇರಿಸಿದೆ. ಇನ್ನು 26 ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಈ ಸಭೆಯಲ್ಲಿ ರಾಜ್ಯಗಳಲ್ಲಿ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ.  ಮೇ. 18ರ ಮಧ್ಯಾಹ್ನ ತೌಕ್ಟೆ ಚಂಡಮಾರುತ ಗುಜರಾತ್ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಲವು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ಇದೀಗ ಕೇರಳದ ಕಾಸರಗೋಡು ಸೇರಿದಂತೆ ಹಲವು ಕರಾವಳಿ ಭಾಗದಲ್ಲಿ ಅಪಾರ ನಷ್ಟ ಸಂಭವಿಸಿದೆ. ಕಡಲತೀರದಲ್ಲಿರುವ ಮನೆಗಳು ಧರೆಗುರುಳಿದೆ.

ಭಾರತೀಯ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ ಕಾರ್ಯಸನ್ನದ್ದವಾಗಿದೆ. ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಡಗುಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ದೋಣಿಗಳು ಮತ್ತೆ ಇತರ ಸಲಕರಣೆಗಳೊಂದಿಗೆ ಸೈನ್ಯದ ವಾಯುಪಡೆ ಮತ್ತು ಎಂಜಿನಿಯರ್ ಟಾಸ್ಕ್ ಫೋರ್ಸ್ ಘಟಕಗಳು ನಿಯೋಜನೆಗೊಂಡಿದೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಘಟಕಗಳನ್ನು ಹೊಂದಿರುವ ಏಳು ಹಡಗುಗಳು ಪಶ್ಚಿಮ ಕರಾವಳಿಯುದ್ದಕ್ಕೂ ನಿಂತಿವೆ. ಕಣ್ಗಾವಲು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪಶ್ಚಿಮ ಕರಾವಳಿಯಲ್ಲಿ ಸರಣಿ ಕಣ್ಗಾವಲು ನಡೆಸುತ್ತಿವೆ. ವಿಪತ್ತು ಪರಿಹಾರ ತಂಡಗಳು (ಡಿಆರ್‌ಟಿ) ಮತ್ತು ವೈದ್ಯಕೀಯ ತಂಡಗಳು (ಎಂಟಿ) ತಿರುವನಂತಪುರ, ಕಣ್ಣೂರು ಮತ್ತು ಪಶ್ಚಿಮ ಕರಾವಳಿಯ ಇತರ ಸ್ಥಳಗಳಲ್ಲಿ ಸ್ಟ್ಯಾಂಡ್‌ಬೈ ಆಗಿವೆ ಎಂದು ಪ್ರಧಾನಿ ಸಭೆಯಲ್ಲಿ ವಿವರಿಸಲಾಯಿತು. 
 

click me!