ಭಸ್ಮ ಆರತಿ ವೇಳೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 13 ಪುರೋಹಿತರಿಗೆ ಸುಟ್ಟ ಗಾಯಗಳಾಗಿವೆ.
ಮಧ್ಯಪ್ರದೇಶ (ಮಾ.25): ಭಸ್ಮ ಆರತಿ ವೇಳೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 13 ಪುರೋಹಿತರಿಗೆ ಸುಟ್ಟ ಗಾಯಗಳಾಗಿವೆ. ಹೋಳಿ ಆರತಿ ವೇಳೆ ಗುಲಾಲ್ ಊದಿದಾಗ ಬೆಂಕಿ ವ್ಯಾಪಿಸಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ. ಹಲವಾರು ಅರ್ಚಕರು ಮತ್ತು ಭಕ್ತರಿಗೆ ಸುಟ್ಟ ಗಾಯಗಳಾಗಿದ್ದು, ಉಜ್ಜಯಿನಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಮುಖ್ಯ ಅರ್ಚಕ ಸಂಜಯ್ ಗುರು, ವಿಕಾಸ್ ಪೂಜಾರಿ, ಮನೋಜ್ ಪೂಜಾರಿ, ಅಂಶ್ ಪುರೋಹಿತ್, ಸೇವಕ ಮಹೇಶ್ ಶರ್ಮಾ, ಚಿಂತಾಮನ್ ಗೆಹ್ಲೋಟ್ ಮತ್ತಿತರರು ಗಾಯಗೊಂಡಿದ್ದಾರೆ. ಒಂಬತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅವರನ್ನು ಇಂದೋರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೋಳಿ ಆಚರಣೆಯ ಅಂಗವಾಗಿ ಗರ್ಭಗುಡಿಯೊಳಗೆ 'ಗುಲಾಲ್' ಎಸೆಯಲಾಗುತ್ತಿತ್ತು. ಯಾರೋ ಬಣ್ಣದ ಗುಲಾಲನ್ನು ಮಣ್ಣಿನ ದೀಪದ ಮೇಲೆ ಎಸೆದರು. ಈ ವೇಳೆ ಗುಲಾಲ್‌ನೊಳಗಿನ ರಾಸಾಯನಿಕಗಳು ಬೆಂಕಿಗೆ ತಗುಲಿ ಒಮ್ಮಿಂದೊಮ್ಮೆಲೆ ಬೆಂಕಿ ಹೆಚ್ಚಾಗಿ ಈ ಘಟನೆ ನಡೆದಿರಬಹುದು ಎಂದು ಊಹಿಸಿದ್ದಾರೆ.
ಉಜ್ಜಯಿನಿ ಪೊಲೀಸ್ ಅಧೀಕ್ಷಕ ಪ್ರದೀಪ್ ಶರ್ಮಾ ಹೇಳಿಕೆ ನೀಡಿ, ಮುಖ್ಯ ಅರ್ಚಕ ಸಂಜೀವ್ ಅವರು ಆರತಿ ಮಾಡುವಾಗ ಹಿಂದಿನಿಂದ ಯಾರೋ ಗುಲಾಲ್ ಎಸೆದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಗುಲಾಲ್ ದೀಪದ ಮೇಲೆ ಬಿದ್ದಿತು. ಗುಲಾಲ್‌ನಲ್ಲಿ ರಾಸಾಯನಿಕ ಅಂಶವಿದೆ ಎಂದು ಅನುಮಾನವಿದೆ ಇದು ಬೆಂಕಿ ದುರಂತಕ್ಕೆ ಕಾರಣವಾಯಿತು ಎಂದಿದ್ದಾರೆ.
ಈ ಅಹಿತಕರ ಘಟನೆಗೆ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಉಜ್ಜಯಿನಿಯ ಶ್ರೀ ಮಹಾಕಾಲ್ ದೇವಸ್ಥಾನದಲ್ಲಿ ಬೆಂಕಿ ಅವಘಡದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಂದ ಮಾಹಿತಿ ಪಡೆದಿದ್ದೇನೆ. ಸ್ಥಳೀಯ ಆಡಳಿತವು ಗಾಯಾಳುಗಳಿಗೆ ನೆರವು ಮತ್ತು ಚಿಕಿತ್ಸೆ ನೀಡುತ್ತಿದೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಬಾಬಾ ಮಹಾಕಾಲ್ ಅವರನ್ನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಕೂಡ ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಭಸ್ಮ ಆರತಿಯ ಸಮಯದಲ್ಲಿ ಮಹಾಕಾಲ್ ದೇವಾಲಯದ 'ಗರ್ಭ ಗೃಹ'ದಲ್ಲಿ ನಡೆದಿರುವ ಬೆಂಕಿ ದುರಂತ ದುರದೃಷ್ಟಕರ. ನಾನು ಬೆಳಿಗ್ಗೆಯಿಂದ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ಈಗ ಎಲ್ಲವೂ ನಿಯಂತ್ರಣದಲ್ಲಿದೆ. ಎಲ್ಲಾ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಾಬಾ ಮಹಾಕಾಲ್‌ಗೆ ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.