
ಅತ್ತಿಗೆಯ ತಂಗಿಯನ್ನು ಪ್ರೀತಿಸಿ, ಹಲವು ವರ್ಷಗಳೊಂದಿಗೆ ಸಂಬಂಧ ಇಟ್ಟುಕೊಂಡ ಮೈದುನ ಇದೀಗ ಮನೆಯಲ್ಲಿ ವಿರೋಧ ವ್ಯಕ್ತವಾದ ಕೂಡಲೇ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಅತ್ತಿಗೆ ರಾತ್ರಿ ವೇಳೆ ಕೋಣೆಯಲ್ಲಿ ಮಲಗಿದ್ದ ಮೈದುನನ ಖಾಸಗಿ ಅಂಗವನ್ನೇ ಕತ್ತರಿಸಿ ಪರಾರಿಯಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಲ್ಖನ್‌ಪುರ ಗ್ರಾಮದಲ್ಲಿ ನಡೆದಿರುವ ಅಪರಾಧ ಪ್ರಕರಣವೊಂದು ಇಡೀ ಪ್ರದೇಶವನ್ನೇ ಬೆಚ್ಚಿ ಬೀಳಿಸಿದೆ. ಸೇಡು ಮತ್ತು ಭಾವನಾತ್ಮಕ ಕಲಹದ ಕಾರಣದಿಂದ ಮೈದುನನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಆತನ ಖಾಸಗಿ ಅಂಗವನ್ನು ಕತ್ತರಿಸಿದ ಅತ್ತಿಗೆಯ ಕೃತ್ಯ ಇದೀಗ ಬಯಲಾಗಿದೆ. ಅಕ್ಟೋಬರ್ 16ರ ರಾತ್ರಿ 20 ವರ್ಷದ ಉಮೇಶ್ ಎಂಬ ಯುವಕನು ತನ್ನ ಕೋಣೆಯಲ್ಲಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಆತನ ಕಿರುಚಾಟ ಕೇಳಿ ಓಡಿಬಂದ ಕುಟುಂಬಸ್ಥರಿಗೆ, ಉಮೇಶ್‌ಗೆ ಚಾಕುವಿನಿಂದ ಇರಿದು ಗಾಯಗೊಳಿಸಿ, ಆತನ ಖಾಸಗಿ ಅಂಗಗಳನ್ನು ಕತ್ತರಿಸಿರುವುದು ಕಂಡುಬಂದಿದೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಕುಟುಂಬ, ಯಾರೋ ಹೊರಗಿನ ಅಪರಿಚಿತ ದಾಳಿಕೋರರು ಬಂದು ಖಾಸಗಿ ಭಾಗ ಕತ್ತರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿತ್ತು.
ಪೊಲೀಸರ ತನಿಖೆ ಆಳಕ್ಕಿಳಿದಂತೆ ಪ್ರಕರಣದ ಸುತ್ತಲಿನ ಸಂಬಂಧಗಳ ಜಾಲ ಹೊರಬಿದ್ದಿದೆ. ಉಮೇಶ್‌ನ ಅಣ್ಣ ಉದಯ್ ಅವರ ಪತ್ನಿ ಮಂಜುಳಾ. ಉಮೇಶ್‌ಗೆ ಮಂಜುಳ ತಂಗಿಯೊಂದಿಗೆ ನಿಕಟ ಸಂಪರ್ಕವಿತ್ತು. ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಮಂಜುಳಾ ಅವರ ಗಂಡನ ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು. ಕುಟುಂಬದ ಒತ್ತಡಕ್ಕೆ ಮಣಿದ ಉಮೇಶ್, ಆ ಯುವತಿಯನ್ನು ನಿರಾಕರಿಸಿ, ಬೇರೊಬ್ಬ ಯುವತಿಯನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದನು.
ಈ ನಿರಾಕರಣೆಯಿಂದ ಮಂಜುಳಾ ಅವರ ತಂಗಿ ತೀವ್ರ ಖಿನ್ನತೆಗೆ ಒಳಗಾಗಿರುವುದು ಕಂಡುಬಂದಿದೆ. ತನ್ನ ತಂಗಿಯ ನೋವನ್ನು ನೋಡಿದ ಮಂಜುಳಾಗೆ ಉಮೇಶ್‌ನ ಮೇಲೆ ಕೋಪ ಮತ್ತು ಸೇಡಿನ ಭಾವನೆ ಹೆಚ್ಚಾಯಿತು. ಇದೇ ಸೇಡಿನಿಂದ ಮಂಜು ಈ ಭಯಾನಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ನಂಬಿದ್ದಾರೆ.
ಅಕ್ಟೋಬರ್ 16ರ ರಾತ್ರಿ, ಎಲ್ಲರೂ ನಿದ್ರೆಗೆ ಜಾರಿದ ನಂತರ ಮಹಿಳೆ ಮಂಜು, ಅಡುಗೆಮನೆಯ ಚಾಕುವನ್ನು ತೆಗೆದುಕೊಂಡು ಉಮೇಶ್‌ನ ಕೋಣೆಗೆ ನುಗ್ಗಿದ್ದಾಳೆ. ಏಕಾಏಕಿ ಆತನಿಗೆ ಹಲವು ಬಾರಿ ಚಾಕುವಿನಿಂದ ಇರಿದು, ಆನಂತರ ಆತನ ಖಾಸಗಿ ಅಂಗಗಳನ್ನು ಕತ್ತರಿಸಿ ಪರಾರಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಉಮೇಶ್‌ಗೆ ತಕ್ಷಣ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಯುವಕನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೂರ್ಣ ಚೇತರಿಕೆಗೆ 8 ತಿಂಗಳು ಬೇಕಾಗಬಹುದು ಎಂದು ಡಾ. ಗಿರೀಶ್ ಮಿಶ್ರಾ ತಿಳಿಸಿದ್ದಾರೆ.
ಎಸಿಪಿ ವಿವೇಕ್ ಕುಮಾರ್ ಯಾದವ್ ಅವರ ಪ್ರಕಾರ, 'ತನಿಖೆಯಲ್ಲಿ ಅತ್ತಿಗೆ ಮಂಜು ಈ ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವುದು ತಿಳಿದುಬಂದಿದೆ. ಆಕೆ ತನ್ನ ತಂಗಿಯೊಂದಿಗೆ ಮೈದುನ ಸಂಬಂಧ ಮುರಿದಿರುವುದಕ್ಕೆ ಕೋಪಗೊಂಡಿದ್ದಳು. ಇದೀಗ ಆಕೆಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ