ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಗೆ ಪ್ರಶಾಂತ್ ಕಿಶೋರ್

By Suvarna NewsFirst Published Jul 14, 2021, 11:57 PM IST
Highlights

* ಚುನಾವಣಾ ತಂತ್ರಗಾರನ ನಡೆ ಎತ್ತ ಕಡೆ?
* ರಾಹುಲ್ ಭೇಟಿ ಮಾಡಿದ ಪ್ರಶಾಂತ್ ಕಿಶೋರ್
* ಮುಂದಿನ ಚುನಾವಣಾ ಕಣ ಬದಲಾಗಬಹುದೆ?

ಡೆಲ್ಲಿ ಮಂಜು

ನವದೆಹಲಿ (ಜು. 14) ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಯಲ್ಲಿ ಈಗ ಈ ಪಿಕೆಯದ್ದೇ ಮಾತು. ಪಿ ಕೆ ಅಂದ್ರೆ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅಲ್ಲ ಬದಲಿಗೆ ಪಿ ಕೆ ಅಂದ್ರೆ `ಎಲೆಕ್ಷನ್ ವುಡ್' ತಂತ್ರಗಾರ ಪ್ರಶಾಂತ್ ಕಿಶೋರ್ ಅಂಥ.

ರಾಜಕೀಯ ರಂಗದಲ್ಲಿ ಈ ಹೆಸರಿಗೆ ಬಹಳ ಪ್ರಾಮುಖ್ಯತೆ ಇದೆ. ಪಕ್ಷಗಳು ಅಧಿಕಾರವೆಂಬ ಆಕ್ಸಿಜನ್ ಪಡೆಯಲು ಒಂದು ರೀತಿ ಡಾಕ್ಟರಿಕೆ ಪಾತ್ರ ನಿರ್ವಹಿಸುವಲ್ಲಿ ಪ್ರಶಾಂತ್ ಕಿಶೋರ್ ಎತ್ತಿದ ಕೈ. ಗೆಲುವು ಎಂಬ ಅಸ್ತ್ರವನ್ನು ಯಾವಾಗಲು ಕೈಯಲ್ಲಿ ಹಿಡಿದು ತಿರುಗಾಡುವ ಮನುಷ್ಯ ಅಂತ್ಲೆ ರಾಜಕೀಯ ಪಕ್ಷಗಳ ಮುಖಂಡರು ಪರಿಗಣಿಸುತ್ತಾರೆ. ಪಶ್ಚಿಮ ಬಂಗಾಳದ ವಿಜಯೋತ್ಸವದ ಬಳಿಕ ವಿಶ್ರಾಂತಿಗೆ ತೆರಳಿದ್ದ ಪಿಕೆ ಇದೀಗ ಡೆಲ್ಲಿಯ `ಅಧಿಕಾರದ ಅಡ್ಡೆ'ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ಒಂದೆರಡು ದಿನಗಳಿಂದ ಪಿಕೆಯನ್ನು ಫಾಲೋ ಮಾಡೋಕೆ ಅಂತ್ಲೆ ರಾಷ್ಟ್ರೀಯ ವಾಹಿನಿಗಳು ರಿರ್ಪೋಟಿಂಗ್ ಟೀಂ ಬಿಡುವಂಥ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನರಲ್ ಎಲೆಕ್ಷನ್‍ಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೂ ಕೂಡ ತಂತ್ರಗಾರ ಪಿಕೆ ಇದ್ದ ಕಡೆ ಸುದ್ದಿಗೆ ಬರವಿಲ್ಲ ಎನ್ನುವಂತಾಗಿದೆ.

ಕಾಂಗ್ರೆಸ್ಸಿಗೆ ಪಿಕೆ ? : ಈ ಮಾತು ಆಶ್ಚರ್ಯ ಅಂದುಕೊಳ್ಳಿ, ನಿಜಾನಾ ? ಅಂಥ ಪ್ರಶ್ನೆ ಮಾಡಿ ಅಥವಾ ಇದೆಂಥಾ ಸುದ್ದಿ ಮಾರಾಯಾ ? ಅಂದರೂ ಕೂಡ ಆಶ್ಚರ್ಯ ಪಡಬೇಕಿಲ್ಲ. ದೀದಿಯ ವಿಜಯದ ಸ್ಕ್ರಿಪ್ಟ್ ಬರೆದಿದ್ದ ಪಿಕೆ ಪೊಲಿಟಿಕಲ್ ಸನ್ಯಾಸ ( ತಂತ್ರಗಾರಿಕೆ ಕೆಲಸಕ್ಕೆ) ಸ್ವೀಕರಿಸುವುದಾಗಿ ಹೇಳಿದ್ದರು. ಆದರೆ ಡೆಲ್ಲಿ ರಾಜಕೀಯ ಕಟ್ಟೆಯಲ್ಲಿ ಮಾತ್ರ ಪಿಕೆ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ ಅಂತ್ಲೆ ಚರ್ಚೆಯಾಗುತ್ತಿದೆ. ಅದರಲ್ಲೂ ಮಂಗಳವಾರ ಕಾಂಗ್ರೆಸ್‍ನ ಯುವರಾಜ ರಾಹುಲ್ ಗಾಂಧಿ ಹಾಗು ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಈ ವಿಚಾರಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ಕಾಂಗ್ರೆಸ್ ಪಕ್ಷ ಮುಳುಗಿರುವ ಹಡುಗು ಅಂತಲೆ ಹೇಳಿಸಿಕೊಳ್ಳುತ್ತಿರುವ ಹೊತ್ತಲ್ಲಿ ಹೊಸದಾಗಿ ಜೀವಧಾನ ನೀಡಲು ಪಿಕೆ ಬಂದಿದ್ದಾರೆ ಅನ್ನೋದು ಮತ್ತೊಂದು ಮಾತು. ಆದರೆ ಜೆಸ್ಟ್ ಇದೊಂದು ಸೌಜನ್ಯದ ಭೇಟಿ ಅಂತ ಮಾತ್ರ ಉತ್ತರ ಕೊಟ್ಟಿದ್ದಾರೆ ಪಿ.ಕೆ.

ಮೋದಿ ಪಾಳಯದತ್ತ ಹೊಸ ಅಸ್ತ್ರ ಬಿಡಲು ಸಜ್ಜಾಗಿರುವ ಪಿ.ಕೆ., ರಾಷ್ಟ್ರಪತಿಯ ಚುನಾವಣೆ ವಿಚಾರ ಮುಂದಿಟ್ಟಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಇನ್ನು ಒಂದು ವರ್ಷದ ಸಮಯ ಇದೆ. ಜುಲೈ 25, 2022ಕ್ಕೆ ರಾಮನಾಥ್ ಕೋವಿಂದ್ ಅವರ ಅಧಿಕಾರ ಮುಗಿಯಲಿದೆ. ಹಾಗಾಗಿ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷದ ಅಭ್ಯರ್ಥಿ ಹುಡುಕುವ ಕೆಲಸಕ್ಕೆ ಪಿಕೆ ಚಾಲನೆ ಕೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಎನ್‍ಸಿಪಿ ಜನಕ ಶರತ್ ಪವಾರ್ ಅವರನ್ನು ಮೂರು ಬಾರಿ ಪಿಕೆ ಭೇಟಿಯಾಗಿದ್ದಾರೆ. ಈ ಬಗ್ಗೆ ಇತರೆ ವಿಪಕ್ಷಗಳ ಜೊತೆ ಚರ್ಚಿಸುವ ಇರಾದೆ ಹೊಂದಿದ್ದಾರೆ ಪ್ರಶಾಂಕ್ ಕಿಶೋರ್.

ಬಿಎಸ್‌ವೈಗೆ ಮೂರು ದಿನಗಳ ಅಗ್ನಿ ಪರೀಕ್ಷೆ, ಮತ್ತೆ ಹಳೆಯ ಸೂತ್ರ

ಪಿಕೆ ಮತ್ತು ಎಲೆಕ್ಷನ್ : ಕಳೆದ ಎರಡು ದಶಕಗಳಿಂದ ಪಿಕೆ ಅಂದರೆ ಎಲೆಕ್ಷನ್, ಎಲೆಕ್ಷನ್ ಅಂದ್ರೆ ಪಿಕೆ ಅನ್ನುವಂತೆ ಚುನಾವಣಾ ತಂತ್ರಗಾರನ ಪಟ್ಟ ಸಂಪಾದಿಸಿಕೊಂಡಿದ್ದಾರೆ ಪ್ರಶಾಂತ್ ಕಿಶೋರ್. ಒಂದು ದಶಕದ ಹಿಂದೆ ಗುಜರಾತ್ ಚುನಾವಣೆಯಲ್ಲಿ ಮೋದಿಯವರನ್ನು ಸಿಎಂ ಪಟ್ಟಕ್ಕೆ ತಂದ ಬಳಿಕ ಪಿಕೆ ಹೆಸರು ಸಿಕ್ಕಾಪಟ್ಟೆ ಚಾಲ್ತಿಗೆ ಬಂತು. ನಂತರ ಏಳು ವರ್ಷಗಳ ಹಿಂದೆ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯವರು ಪ್ರಧಾನಿ ಪಟ್ಟ ವಹಿಸಿಕೊಳ್ಳುವ ತಂತ್ರಗಾರಿಕೆ ಹಿಂದೆ ಪಿಕೆ ಕೈಚಳಕ ಇತ್ತು ಅನ್ನೋದರಲ್ಲಿ ಎರಡು ಮಾತಿಲ್ಲ. ಆ ಬಳಿಕ ನಡೆದ ಆಂಧ್ರಪ್ರದೇಶದ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ, ಮೊನ್ನೆ ನಡೆದ ಪಶ್ಚಿಮ ಬಂಗಾಳದ ಚುನಾವಣೆ ದೀದಿಯ ವಿಜಯೋತ್ಸವದ ಹಿಂದೆ, ತಮಿಳುನಾಡಿನಲ್ಲಿ ಸಿಎಂ ಸ್ಟಾಲಿನ್ ಅವರ ಗೆಲುವಿನ ಹಿಂದೆ ಪಿಕೆ ತಂತ್ರಗಾರಿಕೆ ಕೈಚಳಕ ಇತ್ತು. ಈತನಕ ಪಿಕೆ ಮುಟ್ಟಿದೆಲ್ಲಾ ಚಿನ್ನವಾಗಿದೆ ಅನ್ನೋ ಮಾತು ಮತ್ತಷ್ಟು ಖ್ಯಾತಿ ಹೆಚ್ಚಿಸಿದೆ.

ಹಲವು ಕಾರಣಗಳಿಗೆ ಮೋದಿ, ಬಿಜೆಪಿ ಪಾಳಯದಿಂದ ಹೊರಬಿದ್ದ ಪಿಕೆ, ಬಿಹಾರದಲ್ಲಿ ಚುನಾವಣೆಗೆ ನಿಲ್ಲುವ ಪ್ರಯತ್ನ ಮಾಡಿದರು. ಆದರೆ ಬಿಹಾರದ ಮತದಾರ ತಿರಸ್ಕರಿಸಿದ. ಇದೀಗ ರಾಷ್ಟ್ರಪತಿ ಚುನಾವಣೆಯ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ಶರತ್ ಪವಾರ್ ಎಂಬ ಹೆಸರನ್ನು ಚಾಲ್ತಿಗೆ ಬಿಟ್ಟಿದ್ದಾರೆ. ಮೋದಿ ಮತ್ತು ಬಿಜೆಪಿ ವಿರುದ್ಧ ವಿಪಕ್ಷಗಳನ್ನು ಒಟ್ಟುಗೂಡಿಸುವ ಅಥವಾ ಒಂದೇ ವೇದಿಕೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ನೋಡೋಣ ವಿಪಕ್ಷದ ಸಾಲಿನಲ್ಲಿರುವ ರಾಜಕೀಯ ಪಕ್ಷಗಳು ಪ್ರಶಾಂತ್ ಕಿಶೋರ್ ತಂತ್ರಗಾರಿಕೆಯನ್ನು ಹೇಗೆ ಬಳಸಿಕೊಳ್ಳುತ್ತವೆ ಅಂಥ.

click me!