Covid Report ಕೋವಿಡ್‌ ಸಂಖ್ಯೆ ನೀಡುವಲ್ಲಿ ಕೇರಳ ಚೆಲ್ಲಾಟ, ಕೇಂದ್ರ ಗರಂ!

By Kannadaprabha NewsFirst Published Apr 19, 2022, 5:23 AM IST
Highlights

- ಏ.13ರಂದು ಕೋವಿಡ್‌ ವರದಿ ನೀಡಿಕೆ ನಿಲ್ಲಿಸಿದ್ದ ಕೇರಳ
- 5 ದಿನ ಬಳಿಕ ಏಕಾಏಕಿ 940 ಕೇಸು, 213 ಸಾವು ಘೋಷಣೆ
- ಇದರಿಂದ ದೇಶದ ಕೇಸು ಶೇ.90, ಪಾಸಿಟಿವಿಟಿ ಶೇ.165 ಏರಿಕೆ
 

ನವದೆಹಲಿ(ಏ.19): ಇತ್ತೀಚೆಗೆ ನಿತ್ಯದ ಕೋವಿಡ್‌ ಪ್ರಕರಣಗಳ ಪ್ರಕಟಣೆ ನಿಲ್ಲಿಸಿದ್ದ ಕೇರಳ ಸರ್ಕಾರ, 5 ದಿನಗಳ ಮೌನದ ಬಳಿಕ ಸೋಮವಾರ ಏಕಾಏಕಿ ರಾಜ್ಯದಲ್ಲಿ 940 ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಹಾಗೂ 213 ಸಾವು ಸಂಭವಿಸಿವೆ ಎಂದು ವರದಿ ನೀಡಿದೆ. 5 ದಿನಗಳ ಅಂತರದ ಬಳಿಕ ಕೇಂದ್ರ ಸರ್ಕಾರಕ್ಕೆ ನೀಡಿದ ಈ ವರದಿಯು ದೇಶದ ಕೋವಿಡ್‌ ದೈನಂದಿನ ಅಂಕಿ ಅಂಶಗಳಲ್ಲಿ ಭಾರೀ ಏರುಪೇರು ಸೃಷ್ಟಿಸಿದೆ. ಹೀಗಾಗಿ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ ಈ ನಿತ್ಯ ವರದಿ ನಿಡುವಂತೆ ತಾಕೀತು ಮಾಡಿದೆ.

ಈ ಕುರಿತು ಕೇರಳ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ಈ ರೀತಿ ದತ್ತಾಂಶ ನೀಡಿಕೆಯಲ್ಲಿ ಏರುಪೇರು ಮಾಡುವುದು ಸಲ್ಲದು. ಹೀಗೆ ಕೆಲವು ದಿನಗಳ ಬಳಿಕ ಕೋವಿಡ್‌ ವರದಿಯನ್ನು ನೀವು ನೀಡಿದ್ದರಿಂದ ಅದು ರಾಷ್ಟ್ರೀಯ ಕೋವಿಡ್‌ ಅಂಕಿಸಂಖ್ಯೆಗಳ ಮೇಲೆ ಪರಿಣಾಮ ಬೀರಿದೆ. ದೇಶದ ಕೇಸುಗಳ ಸಂಖ್ಯೆ ಒಂದೇ ದಿನದಲ್ಲಿ ಶೇ.90ರಷ್ಟುಹಾಗೂ ಪಾಸಿಟಿವಿಟಿ ಶೇ.165ರಷ್ಟುಏರಿದೆ. ಸೋಂಕಿನ ಪರಿಣಾಮ ಅರ್ಥೈಸಿಕೊಳ್ಳಲು ನಿತ್ಯ ಕೋವಿಡ್‌ ವರದಿ ನೀಡುವುದು ಅಗತ್ಯ. ಇದರಿಂದ ಸೋಂಕಿನ ಮೇಲೆ ನಿಗಾ ಇರಿಸಿ ನಿರ್ವಹಣೆಗೆ ಕೇಂದ್ರ-ರಾಜ್ಯ-ತಾಲೂಕು ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು ನೆರವಾಗಲಿದೆ’ ಎಂದಿದ್ದಾರೆ.

Covid XE Variant: ಹೊಸ ವೈರಸ್‌ ಬಗ್ಗೆ ತಜ್ಞರ ವಾರ್ನಿಂಗ್, ಓಮಿಕ್ರಾನ್ ರೂಪಾಂತರದ ರೋಗ ಲಕ್ಷಣಗಳೇನು ?

ಕೇರಳ ಈ ಹಿಂದೆ ಏ.13ರಂದು 298 ಪ್ರಕರಣಗಳು ಸಂಭವಿಸಿವೆ ಎಂದು ವರದಿ ನೀಡಿತ್ತು. ಬಳಿಕ ‘ಕೊರೋನಾ ಕಡಿಮೆ ಆಗಿದೆ. ಹೀಗಾಗಿ ಇನ್ನು ದೈನಂದಿನ ವರದಿ ಬಹಿರಂಗಪಡಿಸಲ್ಲ. ಆದರೆ ಸರ್ಕಾರವು ಆಂತರಿಕವಾಗಿ ಪ್ರಕರಣಗಳ ದಾಖಲೀಕರಣ, ಪರೀಕ್ಷೆ ಮುಂದುವರಿಸಲಿದೆ’ ಎಂದಿತ್ತು. ತಾನು ಆಂತರಿಕವಾಗಿ ದಾಖಲಿಸಿಕೊಂಡ ಪ್ರಕರಣಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೂ ನೀಡಿರಲಿಲ್ಲ.

ಆದರೆ ದಿಢೀರನೇ ಸೋಮವಾರ ರಾಜ್ಯದಲ್ಲಿ 940 ಪ್ರಕರಣ ವರದಿಯಾಗಿವೆ ಹಾಗೂ ಹಳೆಯ ಸಾವುಗಳು ಸೇರಿ 213 ಸಾವು ಸಂಭವಿಸಿವೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಹೀಗಾಗಿ ದೇಶದ ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾನುವಾರದ 1150 ಕೇಸಿನಿಂದ 2183ಕ್ಕೆ ಏರಿಕೆಯಾಗಿದೆ. ಅಲ್ಲದೆ, ಉತ್ತರಪ್ರದೇಶದ 1 ಹಾಗೂ ಕೇರಳದ 213 ಸೇರಿ 214 ಸಾವು ಸಂಭವಿಸಿವೆ. ಪಾಸಿಟಿವಿಟಿ ದರ ಶೇ.0.31 ಇದ್ದಿದ್ದು ಶೇ.0.83ಕ್ಕೆ ಏರಿದೆ.

ಕೇರಳ ಬ್ಯಾಕ್‌ಲಾಗ್‌ ಎಫೆಕ್ಟ್: 2183 ಕೋವಿಡ್‌ ಕೇಸು, 214 ಸಾವು
ದೇಶದಲ್ಲಿ ಸೋಮವಾರ 2183 ಕೋವಿಡ್‌ ಕೇಸು ಹಾಗೂ 214 ಸಾವು ವರದಿಯಾಗಿವೆ. ಭಾನುವಾರದ 1150 ಪ್ರಕರಣಗಳಿಗಿಂತ ಇದು ಶೇ.90ರಷ್ಟುಅಧಿಕ. ಆದರೆ ಕಳೆದ 5 ದಿನದಿಂದ ಸುಮ್ಮನಿದ್ದ ಕೇರಳ ಈ ಐದೂ ದಿನದ ಅಂಕಿ-ಅಂಶಗಳನ್ನು ಒಟ್ಟಿಗೇ ಬಿಡುಗಡೆ ಮಾಡಿರುವುದು ಈ ಏರಿಕೆಗೆ ಕಾರಣ. ಕೇರಳ ಸೋಮವಾರ 940 ಪ್ರಕರಣ ಹಾಗೂ ಬ್ಯಾಕ್‌ಲಾಗ್‌ ಸಾವಿನ ಸಂಖ್ಯೆ ಸೇರಿ 213 ಸಾವು ವರದಿ ಮಾಡಿದೆ. ಅದು ಬಿಟ್ಟರೆ ಉತ್ತರಪ್ರದೇಶದಲ್ಲಿ 1 ಸಾವು ಸಂಭವಿಸಿದೆ. ಪಾಸಿಟಿವಿಟಿ ದರ ಕೂಡ ಒಂದೇ ದಿನದಲ್ಲಿ ಶೇ.165 (3 ಪಟ್ಟು) ಏರಿದ್ದು. ಶೇ.0.83ರಷ್ಟುದಾಖಲಾಗಿದೆ. ಇದಕ್ಕೂ ಕೇರಳದ ಅಂಕಿ ಅಂಶಗಳೇ ಕಾರಣ. ಆದರೆ ಸಕ್ರಿಯ ಕೇಸು 11,542ಕ್ಕೆ ಇಳಿದಿದೆ. ಚೇತರಿಕೆ ಪ್ರಮಾಣ ಶೇ.98.76ರಷ್ಟಿದೆ. 186 ಲಸಿಕೆ ಹಾಕಲಾಗಿದೆ.

5 ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ, ಕರ್ನಾಟಕಕ್ಕೂ ಕಂಟಕ ಶುರು

ಭಾರತದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಈಗಿನಿಂದಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ ಎಂದು ಕೇರಳ ಕೋವಿಡ್‌ ತಜ್ಞರ ಸಮಿತಿ ಹೇಳಿದೆ. ‘ಸತತ 2 ವರ್ಷಗಳಿಂದ ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕದ ಮತ್ತೊಂದು ಅಲೆ ಒಮಿಕ್ರೋನ್‌ನಿಂದ ಭಾರತದಲ್ಲಿ ಆರಂಭವಾಗಬಹುದು ಎಂದು ಎಚ್ಚರಿಸಿದ್ದಾರೆ.

click me!