ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಕೈಕಟ್!| ಪಂಜಾಬ್‌ನಲ್ಲಿ ಶಸ್ತ್ರಧಾರಿ ಸಿಖ್ ಗುಂಪಿನ ಕೃತ್ಯ| ಪರಾರಿಯಾಗಿದ್ದ ದಾಳಿಕೋರರು ಪೊಲೀಸ್ ಕಾರ್ಯಾಚರಣೆ ಬಳಿಕ ಸೆರೆ| ಅಪಾರ ಶಸ್ತ್ರಾಸ್ತ್ರ ವಶ| 7 ತಾಸು ಶಸ್ತ್ರಚಿಕಿತ್ಸೆ ನಡೆಸಿ ತುಂಡಾಗಿದ್ದ ಎಎಸ್‌ಐ ಕೈಜೋಡಿಸಿದ ವೈದ್ಯರು
ಚಂಡೀಗಢ(ಏ.13): ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದ ಪೊಲೀಸರ ಮೇಲೆ ಶಸ್ತ್ರಧಾರಿ ಸಿಖ್‌ಗಳು (ನಿಹಂಗ್) ಭೀಕರ ದಾಳಿ ನಡೆಸಿರುವ ಘಟನೆ ಪಂಜಾಬ್‌ನ ಪಟಿಯಾಲ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ರಸ್ತೆಗೆ ಇಳಿದ ಕಾರಣ ಪಾಸ್ ಕೇಳಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಅವರ ಕೈಯನ್ನೇ ಖಡ್ಗದಿಂದ ತುಂಡರಿಸಿ, ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಘಟನಾ ಸ್ಥಳದಿಂದ ಪರಾರಿಯಾಗಿ ಗುರುದ್ವಾರದಲ್ಲಿ ಅಡಗಿ ಕುಳಿತಿದ್ದ 11 ಮಂದಿ ನಿಹಂಗ್‌ಗಳನ್ನು ಗುಂಡಿನ ಚಕಮಕಿ ಬಳಿಕ ಬಂಧಿಸಲಾಗಿದೆ. ಅಪಾರ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ನಡುವೆ, 7 ತಾಸು ಶಸ್ತ್ರಚಿಕಿತ್ಸೆ ನಡೆಸಿ ಎಎಸ್‌ಐ ಅವರ ಕೈಜೋಡಿಸಲಾಗಿದೆ.
ಲಾಕ್‌ಡೌನ್ ಜಾರಿಗೊಳಿಸಿದ ಪೊಲೀಸರ ಮೇಲೆಯೇ ನಡೆದ ಈ ದಾಳಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನಿಹಲ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ದೇಶದಲ್ಲಿ 9000 ದಾಟಿದ ಕೊರೋನಾ ಸೋಂಕು, ಮೃತರ ಸಂಖ್ಯೆ 327ಕ್ಕೆ!
ಏನಾಯ್ತು?:
ಪೊಲೀಸರ ತಂಡವೊಂದು ಪಟಿಯಾಲ ಜಿಲ್ಲೆಯ ಸನೌರ್‌ನ ಸಗಟು ತರಕಾರಿ ಮಾರುಕಟ್ಟೆಬಳಿ ಬಂದೋಬಸ್‌್ತಗೆ ನಿಯೋಜನೆಗೊಂಡಿತ್ತು. ಭಾನುವಾರ ಬೆಳಗ್ಗೆ 6.15ರ ವೇಳೆಗೆ ಕಾರಿನಲ್ಲಿ ಬಂದ ಗುಂಪಿನ ಬಳಿ ಪೊಲೀಸರು, ಕಫ್ರ್ಯೂ ಪಾಸ್ ಕೇಳಿದರು. ಆದರೆ ಪಾಸ್ ತೋರಿಸುವ ಬದಲು ಕಾರಿನಲ್ಲಿದ್ದವರು ಕಾರನ್ನು ರಸ್ತೆಗೆ ಅಡ್ಡಲಾಗಿ ಹಾಕಿದ್ದ ತಡೆಗೋಡೆಗೆ ಡಿಕ್ಕಿ ಹೊಡೆಸಿ ಮುಂದೆ ಹೋಗುವ ಯತ್ನ ಮಾಡಿದರು. ಈ ವೇಳೆ ಪೊಲೀಸರು ಮತ್ತೆ ಅವರನ್ನು ಅಡ್ಡಗಟ್ಟಿದ ವೇಳೆ ಕಾರಿನಿಂದ ಹೊರಬಂದ 4-5 ಜನರಿದ್ದ ನೀಲಿ ಸಮವಸ್ತ್ರಧಾರಿ ಗುಂಪು ಏಕಾಏಕಿ ತಮ್ಮ ಬಳಿ ಇದ್ದ ಆಯುಧಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿತು. ಈ ವೇಳೆ ಎಎಸ್‌ಐ ಹರ್ಜಿತ್‌ಸಿಂಗ್ ಅವರ ಕೈನ ಒಂದು ಭಾಗ ತುಂಡಾಗಿದ್ದು, ತಕ್ಷಣವೇ ಅವರನ್ನು ರಾಜೀಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ದಾಳಿಯಲ್ಲಿ ಇತರೆ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿ ಬಳಿಕ ಪರಾರಿಯಾದ ನಿಹಂಗ್‌ಗಳು 25 ಕಿ.ಮೀ. ದೂರದಲ್ಲಿರುವ ಬಲ್ಬೇರಾ ಗ್ರಾಮದ ಗುರುದ್ವಾರದಲ್ಲಿ ಅಡಗಿ ಕುಳಿತರು. ಪೊಲೀಸರು ದಾಳಿ ನಡೆಸಿ ಪೊಲೀಸರ ಮೇಲೆ ಭಾಗಿಯಾಗಿದ್ದ ಐವರು ಸೇರಿದಂತೆ 11 ಮಂದಿಯನ್ನು ಬಂಧಿಸಿದರು. ಈ ವೇಳೆ ಸಣ್ಣ ಪ್ರಮಾಣದಲ್ಲಿ ಗುಂಡಿನ ಚಕಮಕಿಯೂ ನಡೆಯಿತು. ನಿಹಂಗ್‌ಗಳ ಬಳಿ ಮೂರು ಪಿಸ್ತೂಲ್, ಕಾಟ್ರಿಜ್, 2 ಪೆಟ್ರೋಲ್ ಬಾಂಬ್, ಭರ್ಜಿ, ಖಡ್ಗ, ಎಲ್‌ಪಿಜಿ ಸಿಲಿಂಡರ್, ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆದರಬೇಡಿ, ಕೊರೋನಾ ಚಿಕಿತ್ಸೆಗೆ 1 ಲಕ್ಷ ಬೆಡ್ ಇವೆ!
ಯಶಸ್ವಿಯಾಗಿ ಕೈ ಜೋಡಣೆ:
ಈ ನಡುವೆ ನಿಹಂಗ್‌ಗಳಿಂದ ದಾಳಿಗೆ ಒಳಗಾಗಿದ್ದ 50 ವರ್ಷದ ಎಎಸ್‌ಐ ಅವರ ಕೈಗಳನ್ನು ಸತತ 7 ತಾಸು ಶಸ್ತ್ರ ಚಿಕಿತ್ಸೆ ನಡೆಸಿ ಜೋಡಣೆ ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾರು ಈ ನಿಹಂಗ್‌ಗಳು?
ಇದು ಸಿಖ್ ಸಮುದಾಯದ ಒಂದು ಪಂಗಡ. ಸಾಂಪ್ರದಾಯಿಕ ಶಸ್ತ್ರಾಸ್ತ್ರ ಇಟ್ಟುಕೊಂಡಿರುತ್ತಾರೆ. ನೀಲಿ ಬಣ್ಣದ ಬಟ್ಟೆಧರಿಸುತ್ತಾರೆ.