ಟ್ರಂಪ್ ಭೇಟಿ ವೇಳೆ ದಿಲ್ಲಿಯಲ್ಲಿ ಹಿಂಸೆ, ಪೊಲಿಸ್ ಪೇದೆ ಸೇರಿ 4 ಸಾವು!

Published : Feb 25, 2020, 08:58 AM ISTUpdated : Feb 25, 2020, 05:47 PM IST
ಟ್ರಂಪ್ ಭೇಟಿ ವೇಳೆ ದಿಲ್ಲಿಯಲ್ಲಿ ಹಿಂಸೆ, ಪೊಲಿಸ್ ಪೇದೆ ಸೇರಿ 4 ಸಾವು!

ಸಾರಾಂಶ

ದಿಲ್ಲಿ ಪೌರತ್ವ ಕಿಚ್ಚಿಗೆ ನಾಲ್ವರು ಬಲಿ| ಕಲ್ಲು ತೂರಾಟ, ಬೆಂಕಿ ಹಚ್ಚಿ ಪರ- ವಿರೋಧ ಪ್ರತಿಭಟನೆ| ಪೇದೆ, ಮೂವರು ವ್ಯಕ್ತಿಗಳ ಸಾವು| ನಿಷೇಧಾಜ್ಞೆ ಜಾರಿ, ಅಮಿತ್‌ ಶಾ ತುರ್ತು ಸಭೆ| ಟ್ರಂಪ್‌ ಭೇಟಿ ವೇಳೆಯೇ ಹಿಂಸಾಚಾರ

ನವದೆಹಲಿ[ಫೆ.25]: ರಾಜಧಾನಿ ನವದೆಹಲಿಯ ಜಫ್ರಾಬಾದ್‌ ಪ್ರದೇಶದಲ್ಲಿ ಭಾನುವಾರ ಸಂಜೆ ವೇಳೆಗೆ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಹೋರಾಟಗಾರರ ನಡುವಣ ಸಂಘರ್ಷ, ಸೋಮವಾರ ತೀವ್ರ ಹಿಂಸಾ ಸ್ವರೂಪ ಪಡೆದಿದ್ದು, ಮೂವರನ್ನು ಬಲಿ ಪಡೆದಿದೆ. ಸೋಮವಾರ ಪ್ರತಿಭಟನಾ ಸ್ಥಳದಲ್ಲಿನ ಮನೆ, ಅಂಗಡಿ ಮುಂಗಟ್ಟು, ವಾಹನಗಳ ಮೇಲೆ ಮೇಲೆ ಎರಡೂ ಬಣಗಳು ಕಲ್ಲು ತೂರಿ, ಬೆಂಕಿ ಹಚ್ಚಿವೆ. ಹೀಗಾಗಿ ಜಫ್ರಾಬಾದ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದೆಹಲಿ ಭೇಟಿ ವೇಳೆಯೇ ಈ ಹಿಂಸಾಚಾರ ನಡೆದಿರುವುದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರಕ್ಕೆ ಮುಜುಗರ ತರಲೆಂದೇ ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸೋಮವಾರ ರಾತ್ರಿ ತುರ್ತು ಸಭೆ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಏನಾಯ್ತು?:

ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ಮಹಿಳೆಯರು ಶನಿವಾರದಿಂದ ದೆಹಲಿಯ ಜಫ್ರಾಬಾದ್‌ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಇದರ ಹತ್ತಿರದಲ್ಲೇ ಇರುವ ಮೌಜ್ಪುರ-ಬಾಬರ್‌ಪುರ ಮೆಟ್ರೋ ನಿಲ್ದಾಣಗಳ ಬಳಿ ಭಾನುವಾರ ಸಂಜೆ ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ನೇತೃತ್ವದ ಸಿಎಎ ಪರ ಹಾಗೂ ಸಿಎಎ ವಿರೋಧಿ ಬಣಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಮೌಜ್ಪುರ ಬಳಿ ಉಭಯ ಬಣಗಳು ಒಬ್ಬರ ಮೇಲೊಬ್ಬರು ಕಲ್ಲು ತೂರಾಟ ಮಾಡಿದ್ದವು. ಈ ವೇಳೆ ಪೊಲೀಸರು ಶಾಂತಿ ಪುನಃಸ್ಥಾಪನೆ ಹಾಗೂ ಉದ್ರಿಕ್ತರ ಚದುರುವಿಕೆಗಾಗಿ ಆಶ್ರುವಾಯುಗಳನ್ನು ಸಿಡಿಸಿದ್ದರು.

ಈ ಉಭಯ ಗುಂಪಿಗೆ ಸೇರಿದ ಹೋರಾಟಗಾರರು ಸೋಮವಾರ ಮತ್ತೆ ಜಫ್ರಾಬಾದ್‌, ಮೌಜ್ಪುರ, ಕರ್ದಾಂಪುರಿ, ಚಾಂದ್‌ಬಾಗ್‌, ದಯಾಲ್‌ಪುರ ಪ್ರದೇಶಗಳಲ್ಲಿ ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಪರಸ್ಪರರಿಗೆ ಸೇರಿದ ಮನೆ, ಅಂಗಡಿ ಮುಂಗಟ್ಟು, ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ್ದಾರೆ. ಜೊತೆಗೆ ಪರಸ್ಪರರ ಮೇಲೂ ಕಲ್ಲು ತೂರಿದ್ದಾರೆ. ಈ ಹಿಂಸಾಚಾರದ ವೇಳೆ ಕಲ್ಲೇಟು ತಗುಲಿ ಗಾಯಗೊಂಡಿದ್ದ ಹೆಡ್‌ಕಾನ್ಸ್‌ಟೇಬಲ್‌ ರತನ್‌ ಲಾಲ್‌ (42) ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಕಲ್ಲುತೂರಾಟದ ವೇಳೆ ಡಿಸಿಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು ಅವರನ್ನು ಆಸ್ಪತೆಗೆ ದಾಖಲಿಸಲಾಗಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಉದ್ವಿಗ್ನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಗಾಳಿ ಸುದ್ದಿಗಳಿಗೆ ದೆಹಲಿ ಜನರು ಕಿವಿಗೊಡಬಾರದು. ಅಲ್ಲದೆ, ಶಾಂತಿ-ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪಿಸ್ತೂಲ್‌ ಝಳಪಿಸಿದ ಅಪರಿಚಿತ:

ಪ್ರತಿಭಟನೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್‌ ಹಿಡಿದುಕೊಂಡು ಪೊಲೀಸರತ್ತ ನುಗ್ಗಿಬರುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ. ಈ ವೇಳೆ ತನಗೆ ಎದುರಾದ ನಿಶ್ಯಸ್ತ್ರಧಾರಿ ಆಗಿದ್ದ ಪೊಲೀಸ್‌ ಅಧಿಕಾರಿಗೆ ಪಿಸ್ತೂಲ್‌ ತೋರಿಸಿದ ಆತ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರ ಸಾಲಿನಲ್ಲಿ ಸೇರಿಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ವೈರಲ್‌ ಆಗಿದೆ.

ಕೇಜ್ರಿವಾಲ್‌ ಕಿಡಿ:

ಈ ಹಿಂಸಾಚಾರದ ಪ್ರತಿಭಟನೆಗಳನ್ನು ನಿಯಂತ್ರಿಸುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ-ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಒತ್ತಾಯಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆ ದಿಲ್ಲಿಯ ಪೊಲೀಸ್‌ ಆಯುಕ್ತ ಅಮೂಲ್ಯ ಪಟ್ನಾಯಕ್‌ ಅವರಿಗೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅವರು ಸೂಚನೆ ನೀಡಿದ್ದಾರೆ.

ಆಗಿದ್ದೇನು?

- ಸಿಎಎ ಪರ, ವಿರೋಧ ಪ್ರತಿಭಟನೆ ವೇಳೆ ಭಾನುವಾರ ಹಿಂಸಾಚಾರ ಉಂಟಾಗಿತ್ತು

- ಸೋಮವಾರವೂ ಹಿಂಸಾಚಾರ ಮುಂದುವರಿದು ಮತ್ತಷ್ಟುವಿಕೋಪಕ್ಕೆ ಹೋಯಿತು

- ಅಂಗಡಿ, ಮನೆಗಳ ಮೇಲೆ ಕಲ್ಲೆಸೆದ ದುಷ್ಕರ್ಮಿಗಳು, ವಾಹನಗಳಿಗೆ ಬೆಂಕಿ ಹಚ್ಚಿದರು

- ಪೇದೆ ಸೇರಿ ಮೂವರು ಬಲಿಯಾದರು

ಪರಿಸ್ಥಿತಿ ನಿಯಂತ್ರಣಕ್ಕೆ ನಿಷೇಧಾಜ್ಞೆ ಹೇರಲಾಯಿತು

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಡಿಗೆದಾರರ ಮನೆಯಿಂದ ಹೊರಹಾಕಲು ಬಂದ ಮಾಲೀಕನಿಗೆ ಆಘಾತ, ತಾಯಿ-ಇಬ್ಬರು ಮಕ್ಕಳ ಶವಪತ್ತೆ
ಕೇರಳ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು, 45 ವರ್ಷದ LDF ಅಧಿಪತ್ಯ ಅಂತ್ಯ