
ಮುಂಬೈ(ಫೆ.23): ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಎಡಪಂಥೀಯ ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ವರವರರಾವ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ 6 ತಿಂಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ವರವರ ರಾವ್ ಅವರ ಆರೋಗ್ಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಷರತ್ತುಬದ್ಧ ಜಾಮೀನು ನೀಡಿದೆ. ಮುಂಬೈನಲ್ಲೇ ಇರುವಂತೆ ಮತ್ತು ತನಿಖೆಗೆ ಲಭ್ಯರಿರುವಂತೆ ಸೂಚಿಸಿದೆ.
ಅಂತೆಯೇ 50 ಸಾವಿರ ರು. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರೂ ಅಷ್ಟೇ ಮೊತ್ತದ ಬಾಂಡ್ ಸಲ್ಲಿಸಬೇಕು. ಅಲ್ಲದೆ ಪಾಸ್‌ಪೋರ್ಟ್ ಅನ್ನು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂಬ ಕಠಿಣ ಷರತ್ತುಗಳನ್ನು ವಿಧಿಸಿದೆ.
2017ರ ಡಿ.31ರಂದು ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕಲ್ಲಿ ಸಭೆ ನಡೆದಿತ್ತು. ಈ ವೇಳೆ ಉದ್ರೇಕಕಾರಿ ಭಾಷಣ ಮಾಡಿ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ವರವರ ರಾವ್(82) ಅವರನ್ನು ರಾಷ್ಟ್ರೀಯ ತನಿಖಾ ದಳ ಆಗಸ್ಟ್ 28, 2018ರಂದು ಬಂಧಿಸಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರಿಗೆ ಇಲ್ಲಿನ ನಾನಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ