ಕೊರೋನಾ ಹೋರಾಟಕ್ಕೆ ಭಾರತೀಯ ಸೇನೆಯ ಸಾಥ್| ಜನ ಸೇವೆ ಮುಂದಾದ ಸೇನೆ| ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!
ನವದೆಹಲಿ(ಏ.29): ಕೊರೋನಾತಂಕ ಇಡೀ ದೇಶದವನ್ನೇ ಆತಂಕಕ್ಕೀಡು ಮಾಡಿದೆ. ದೇಶದಲ್ಲಿ ಎರಡನೇ ಅಲೆ ದಾಳಿ ಇಟ್ಟಿದೆ. ವೇಗವಾಗಿ ಹಬ್ಬುತ್ತಿರುವ ಕೋವಿಡ್ ಜನ ಸಾಮಾನ್ಯರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ, ಆಕ್ಸಿಜನ್ ಸಿಗದೇ ಅನೇಕ ಮಂದಿ ನರಳುತ್ತಾ ಪ್ರಾಣ ಬಿಡುತ್ತಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದ್ದು, ಸರ್ಕಾರ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. ಸದ್ಯ ಭಾರತೀಯ ಸೇನೆಯೂ ಈ ಕೊರೋನಾ ಹೋರಾಟಕ್ಕೆ ಸಾಥ್ ನೀಡಲು ಮುಂದಾಗಿದ್ದು, ಈಗಾಗಲೇ ತನ್ನ ಕೈಲಾದ ಎಲ್ಲಾ ಸೇವೆಯನ್ನು ಒದಗಿಸುತ್ತಿದೆ.
ಇನ್ನು ಕೊರೋನಾ ನಿರ್ವಹಣೆಗೆ ಸೇನೆ ಎಷ್ಟು ಸಜ್ಜಾಗಿದೆ, ಈವರೆಗೆ ಏನೆಲ್ಲಾ ಕ್ರಮ ಕೈಗೊಂಡಿದೆ ಎಂಬಿತ್ಯಾದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಭೂ ಸೇನೆಯ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಬಳಿ ಮಾಹಿತಿ ಪಡೆದುಕಜೊಂಡಿದ್ದಾರೆ. ಈ ವೇಳೆ ಕೋವಿಡ್ ನಿರ್ವಹಣೆಗೆ ಸೇನೆ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಕುರಿತಾಗಿಯೂ ಚರ್ಚೆ ನಡೆದಿದೆ.
undefined
ಇನ್ನು ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಸೇವೆ ಆರಂಭಿಸಿದ್ದಾರೆ. ಅಲ್ಲದೇ ಸೇನೆ ಭಾರತದ ವಿವಿಧ ರಾಜ್ಯಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾರಂಭಿಸಿದೆ ಎಂದೂ ತಿಳಿಸಿದ್ದಾರೆ. ಜನ ಸಾಮಾನ್ಯರ ಸೇವೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ ಸೇನಾ ಮುಖ್ಯಸ್ಥ ನರವಣೆ, ಜನ ಸಾಮಾನ್ಯರು ತಮಗೆ ಹತ್ತಿರವಾಗುವ ಸೇನಾ ಆಸ್ಪತ್ರೆಗಳಿಗೂ ಬಂದು ಚಿಕಿತ್ಸೆ ಪಡೆಯವಬಹುದೆಂದು ತಿಳಿಸಿದ್ದಾರೆ.
ಇದೇ ವೇಳೆ ಆಕ್ಸಿಜನ್ ಪೂರೈಕೆಯಲ್ಲಿ ಸೇನೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆಯೂ ವಿವರಿಸಿದ ಜನರಲ್ ಎಂ. ಎಂ. ನರವಣೆ ಆಮದು ಮಾಡಿಕೊಳ್ಳಲಾದ ಆಕ್ಸಿಜನ್ ಟ್ಯಾಂಕರ್‌ಗಳನ್ನು ಸೂಕ್ತ ಸ್ಥಳಗಳಿಗೆ ರವಾನಿಸುವ ಕಾರ್ಯದಲ್ಲೂ ಸೇನೆ ತೊಡಗಿದೆ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona