
ಕಠ್ಮಂಡು(ಮೇ.16): ಪ್ರಧಾನಿ ನರೇಂದ್ರ ಮೋದಿ ನೇಪಾಳ ತಲುಪಿದ್ದಾರೆ. ಅಲ್ಲಿ ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಭೇಟಿಯಾಗಿ ಬಳಿಕ ಮಹಾಮಾಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದಾರೆ. ನೇಪಾಳ ತಲುಪಿದ ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್‌ನಲ್ಲಿ, "ಬುದ್ಧ ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನೇಪಾಳಕ್ಕೆ ಆಗಮಿಸಿದ್ದೇನೆ. ಈ ಸಂದರ್ಭದಲ್ಲಿ ಇಲ್ಲಿನ ಅದ್ಭುತ ಜನರ ನಡುವೆ ಇರುವುದಕ್ಕೆ ಸಂತೋಷವಾಗಿದೆ ಮತ್ತು ಲುಂಬಿನಿಯಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ" ಎಂದು ಬರೆದಿದ್ದಾರೆ. ತಮ್ಮ ಸಹವರ್ತಿ ದೇವುಬಾ ಅವರ ಆಹ್ವಾನದ ಮೇರೆಗೆ, ಪ್ರಧಾನಿ ಮೋದಿ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲುಂಬಿನಿಗೆ ಒಂದು ದಿನದ ಭೇಟಿ ನೀಡುತ್ತಿದ್ದಾರೆ.
2014 ರ ಬಳಿಕ ನೇಪಾಳಕ್ಕೆ ಪ್ರಧಾನಿ ಮೋದಿ ನೀಡುತ್ತಿರುವ ಐದನೇ ಭೇಟಿ ಇದಾಗಿದೆ. ಪ್ರಧಾನಿ ಮೋದಿ ಮತ್ತು ಅವರ ತಂಡ ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಇಲ್ಲಿಗೆ ಆಗಮಿಸಿತು. ದಕ್ಷಿಣ ನೇಪಾಳದ ಟೆರೈ ಬಯಲು ಪ್ರದೇಶದಲ್ಲಿ ನೆಲೆಗೊಂಡಿರುವ ಲುಂಬಿನಿಯು ಬೌದ್ಧ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಭಗವಾನ್ ಬುದ್ಧನ ಜನ್ಮಸ್ಥಳವಾಗಿದೆ.
ಲುಂಬಿನಿ ಮಠದ ಪ್ರದೇಶದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಭೇಟಿ ನೀಡಲಿರುವ ಪ್ರಧಾನಿ ಭಾಗವಹಿಸಲಿದ್ದಾರೆ. ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, "ಸಭೆಯ ಸಮಯದಲ್ಲಿ, ಅವರು ನೇಪಾಳ-ಭಾರತದ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ" ಎನ್ನಲಾಗಿದೆ.
ಭಾನುವಾರದ ಹೇಳಿಕೆಯಲ್ಲಿ, ಪಿಎಂ ಮೋದಿ ಅವರು ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ "ಉತ್ಪಾದಕ" ಚರ್ಚೆಗಳ ನಂತರ ನೇಪಾಳದ ಪ್ರಧಾನಿ ದೇವುಬಾ ಅವರನ್ನು ಮತ್ತೆ ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಹೇಳಿದರು. ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವ ವಿಷಯದ ಕುರಿತು ವಿವರವಾದ ಚರ್ಚೆ ನಡೆಸಿದರು.
ಪ್ರಧಾನಮಂತ್ರಿಯವರು ಬುದ್ಧ ಜಯಂತಿಯಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನೇಪಾಳ ಸರ್ಕಾರದ ಸಹಯೋಗದೊಂದಿಗೆ ಲುಂಬಿನಿ ಡೆವಲಪ್‌ಮೆಂಟ್ ಟ್ರಸ್ಟ್ ಇದನ್ನು ಆಯೋಜಿಸಿದೆ. ಲುಂಬಿನಿ ಡೆವಲಪ್‌ಮೆಂಟ್ ಟ್ರಸ್ಟ್‌ನ ಸಹಯೋಗದೊಂದಿಗೆ ಭಾರತದಲ್ಲಿ ನೆಲೆಗೊಂಡಿರುವ ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಜಾಗತಿಕ ಮನವಿಯೊಂದಿಗೆ ಅಂತರರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಆರ್ಥಿಕ ನೆರವು ನೀಡುತ್ತದೆ.
ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟವು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಅನುದಾನ ನೀಡುವ ಸಂಸ್ಥೆಯಾಗಿದೆ. ಈ ಬೌದ್ಧ ಕೇಂದ್ರವು ನೇಪಾಳದ ಮೊದಲ ಶೂನ್ಯ ಇಂಗಾಲದ ಹೊರಸೂಸುವಿಕೆ ಕಟ್ಟಡವಾಗಿದೆ. ನೇಪಾಳದ ವಿದೇಶಾಂಗ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, "ಸಭೆಯ ಸಮಯದಲ್ಲಿ, ಉಭಯ ನಾಯಕರು ನೇಪಾಳ-ಭಾರತದ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ." ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲುಂಬಿನಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಸಂಜೆ 4 ಗಂಟೆಗೆ ಕುಶಿನಗರಕ್ಕೆ ಹಿಂತಿರುಗಲಿದ್ದಾರೆ. ಪ್ರಧಾನಮಂತ್ರಿಯವರು ಮಹಾಪರಿನಿರ್ವಾಣ ಸ್ತೂಪಕ್ಕೆ ತೆರಳಿ ದರ್ಶನ ಮತ್ತು ಪೂಜೆ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ