ಬಿಜೆಪಿಯಿಂದ ಸ್ಪರ್ಧಿಸಲಿಚ್ಛಿಸಿದ್ದ ಮೋದಿ ಅಣ್ಣನ ಮಗಳಿಗಿಲ್ಲ ಟಿಕೆಟ್!

By Suvarna NewsFirst Published Feb 5, 2021, 11:02 AM IST
Highlights

ಮೋದಿ ಅಣ್ಣನ ಮಗಳಿಗಿಲ್ಲ ಬಿಜೆಪಿ ಟಿಕೆಟ್| ಸೋನಲ್ ಮೋದಿಗೆ ತೀವ್ರ ನಿರಾಸೆ| ಸಕ್ರಿಯ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿಯುತ್ತೇನೆಂದ ಸೋನಲ್

ಅಹಮದಾಬಾದ್‌(ಫೆ.05): ಅಹಮದಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದ ಮೋದಿ ಅಣ್ಣನ ಮಗಳು ಸೋನಲ್ ಮೋದಿಗೆ ತೀವ್ರ ನಿರಾಸೆಯಾಗಿದೆ. ಪಕ್ಷದ ನೂತನ ನಿಯಮಗಳಿಂದಾಗಿ ಸೋನಲ್ ಮೋದಿ ಈ ಅವಕಾಶದಿಂದ ವಂಚಿತರಾಗಿದ್ದಾರೆ.

ಈಗಾಗಲೇ ಬಿಜೆಪಿಯು ಅಹಮದಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಈ ಪಟ್ಟಿಯಲ್ಲಿ ಸೋನಲ್ ಮೋದಿ ಹೆಸರಿಲ್ಲ ಎಂಬುವುದು ಉಲ್ಲೇಖನೀಯ.

40 ವರ್ಷದ ಸೋನಲ್ ಮೋದಿ ಅಹಮದಾಬಾದ್‌ನ ಜೋದ್ಪುರದ ಸಾಮಾನ್ಯ ಗೃಹಿಣಿ. ಪಿಎಂ ಮೋದಿ ಅಣ್ಣ ಪ್ರಹ್ಲಾದ್ ಮೋದಿಯವರ ಮಗಳಾಗಿರುವ ಸೋನಲ್ ನ್ಯಾಯಬೆಲೆ ಅಂಗಡಿ ಹೊಂದಿದ್ದಾರೆ. ಅಲ್ಲದೇ ಗುಜರಾತ್ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷೆ ಕೂಡಾ ಆಗಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಜಣಕ್ಕಿಳಿಯಲು ಇಚ್ಛಿಸಿದ್ದ ಸೋನಲ್ ಮೋದಿ ಒಬಿಸಿ ವರ್ಗಕ್ಕೆ ಮೀಸಲಿರಿಸಿದ ಬೋಡಕ್‌ದೇವ್ ವಾರ್ಡ್‌ನಿಂದ ಟಿಕೆಟ್ ಬಯಸಿದ್ದರು. ತಾನು ಜನರ ಸೇವೆ ಮಾಡಲು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ ಎಂಬುವುದು ಅವರ ಮಾತಾಗಿದೆ.

ಇನ್ನು ಗುಜರಾಥ್ ಬಿಜೆಪಿ ಪ್ರಾದೇಶೀಕ ಅಧ್ಯಕ್ಷ ಸಿ. ಆರ್‌. ಪಾಟೀಲ್ ಇತ್ತೀಚೆಗಷ್ಟೇ ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದ್ದರು. ಈ ಮೂಲಕ ಕುಟುಂಬ ರಾಜಕೀಯಕ್ಕೆ ಅವಕಾಶ ನೀಡದಿರುವ ಮಾತಿಗೆ ಪಕ್ಷ ಬದ್ಧವಾಗಿರುತ್ತದೆ ಎಂದಿದ್ದರು.

ಆದರೆ ಇತ್ತ ಸೋನಲ್ ಕೂಡಾ ಬಿಜೆಪಿ ಕಾರ್ಯಕರ್ತೆಯಾಗಿ ತನ್ನ ಕ್ಷಮತೆ ಆಧಾರದಲ್ಲಿ ಟಿಕೆಟ್ ನೀಡಬೇಕಿತ್ತೇ ಹೊರತು ಕುಟುಂಬ ಸದಸ್ಯರಿದ್ದಾರೆಂದು ಪರಿಗಣಿಸಿ ಅಲ್ಲ. ನಾನು ಇನ್ನು ಮುಂದೆಯೂ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ. 
 

click me!