ಜೂನ್‌ಗೆ ಬರಲಿದೆ 100 ಪಟ್ಟು ಹೆಚ್ಚು ನಿಖರ ಕರ್ನಾಟಕ ಮ್ಯಾಪ್| ಈ ವರ್ಷಾಂತ್ಯಕ್ಕೆ 9 ರಾಜ್ಯಗಳ ವಿಸ್ತಾರವಾದ ನಕ್ಷೆ ರೆಡಿ| ನಿಖರತೆ 1:50000 ಮೀ.ನಿಂದ 1:500 ಮೀ.ಗೆ ಏರಿಕೆ| ಪ್ರತಿ ಹಳ್ಳಿಯ ಸಣ್ಣ ಲ್ಯಾಂಡ್‌ಮಾರ್ಕ್ ಕೂಡ ಗುರುತು| ದೇಶದ ಪ್ರತಿ ಮನೆ, ಕಚೇರಿಗಳು ಕೂಡ ನಕ್ಷೆಯಲ್ಲಿ ಲಭ್ಯ
ನವದೆಹಲಿ(ಫೆ.05): ಜೂನ್ ವೇಳೆಗೆ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳ ಅತ್ಯಂತ ವಿಸ್ತಾರವಾದ ಹಾಗೂ ನಿಖರವಾದ ಭೂನಕ್ಷೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಲಿದೆ. ನಂತರ ಈ ವರ್ಷಾಂತ್ಯಕ್ಕೆ ಒಂಭತ್ತು ರಾಜ್ಯಗಳ ಇಂತಹ ನಕ್ಷೆ ಸಿದ್ಧವಾಗಲಿದ್ದು, ಒಂದೊಂದು ಹಳ್ಳಿಯ ಅತ್ಯಂತ ಸಣ್ಣ ಗುರುತು ಕೂಡ ಇದರಲ್ಲಿ ದಾಖಲಾಗಲಿದೆ.
ಸರ್ವೇ ಆಫ್ ಇಂಡಿಯಾ (ಎಸ್‌ಒಐ) 16 ವರ್ಷಗಳ ನಂತರ ವಿಸ್ತಾರವಾದ ಭೂನಕ್ಷೆ ಸಿದ್ಧಪಡಿಸುವ, ಅಂದರೆ ಈಗಿರುವ ನಕ್ಷೆಯನ್ನು ಅಪ್‌ಡೇಟ್ ಮಾಡುವ, ಕಾರ್ಯ ಕೈಗೆತ್ತಿಕೊಂಡಿದೆ. ಸದ್ಯ ಬಳಕೆಯಲ್ಲಿರುವುದು 2005ರಲ್ಲಿ ತಯಾರಿಸಿದ ನಕ್ಷೆ. ಈ ನಕ್ಷೆಯನ್ನು ಈಗ ಅಪ್‌ಡೇಟ್ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ಜೂನ್ ವೇಳೆಗೆ ಕರ್ನಾಟಕ, ಹರ್ಯಾಣ, ರಾಜಸ್ಥಾನ, ಉತ್ತರಾಖಂಡ, ಪಂಜಾಬ್ ಹಾಗೂ ಆಂಧ್ರಪ್ರದೇಶದ ನಕ್ಷೆಗಳು ಸಿದ್ಧವಾಗಲಿವೆ. ನಂತರ ಈ ವರ್ಷಾಂತ್ಯಕ್ಕೆ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ನಕ್ಷೆಯೂ ಸಿದ್ಧವಾಗಲಿದೆ. ಉಪಗ್ರಹಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತಿದ್ದು, ಇಲ್ಲಿಯವರೆಗೆ 23,000ಕ್ಕೂ ಹೆಚ್ಚು ಹಳ್ಳಿಗಳ ದಾಖಲೆ ಸಂಗ್ರಹಿಸಲಾಗಿದೆ.
ಹೇಗೆ ಇದು ಹೆಚ್ಚು ನಿಖರ:
ಸ್ವಾತಂತ್ರ್ಯ ಬಂದ ಕಾಲದಲ್ಲಿ ದೇಶದ ಅಧಿಕೃತ ನಕ್ಷೆಯನ್ನು 1:63,000 ಅಳತೆಯಲ್ಲಿ (ನಕ್ಷೆಯ 1 ಸೆಂ.ಮೀ. ಜಾಗ ನೆಲದ ಮೇಲಿನ 630 ಮೀ.ಗೆ ಸಮ) ಸಿದ್ಧಪಡಿಸಲಾಗುತ್ತಿತ್ತು. 1958ರಲ್ಲಿ ಇದನ್ನು ಸುಧಾರಣೆ ಮಾಡಿ 1:50,000 ಅಳತೆಗೆ ಏರಿಸಲಾಯಿತು. ಈಗ ಇದನ್ನು 100 ಪಟ್ಟು ಹೆಚ್ಚು ಸುಧಾರಣೆ ಮಾಡಿ 1:500ಕ್ಕೆ ಏರಿಸಲಾಗುತ್ತಿದೆ. ಇಷ್ಟುಕಾಲ ಕಾರ್ಟೋಸ್ಯಾಟ್ ಉಪಗ್ರಹ ಮತ್ತು ವಿಮಾನದ ಮೇಲೆ ಅಳವಡಿಸಿದ ಆಪ್ಟಿಕಲ್ ಉಪಕರಣದಿಂದ ಕ್ಲಿಕ್ಕಿಸಿದ ಚಿತ್ರಗಳನ್ನು ಬಳಸಿ ಭೂನಕ್ಷೆ ತಯಾರಿಸಲಾಗುತ್ತಿತ್ತು. ಅದರಲ್ಲಿ 100 ಮೀಟರ್ ಗಿ 100 ಮೀಟರ್ ಅಳತೆಯ ಚಿತ್ರಗಳು ಮಾತ್ರ ದಾಖಲಾಗುತ್ತಿದ್ದವು. ಆದರೆ ಈ ಬಾರಿ ಡ್ರೋನ್ ಆಧಾರಿತ ಮ್ಯಾಪಿಂಗ್ ಮತ್ತು ಆಪ್ಟಿಕಲ್ ಏರ್‌ಬೋರ್ನ್ ಹೈ-ರೆಸೊಲ್ಯೂಷನ್ ಸ್ಯಾಟಲೈಟ್ ಇಮೇಜರಿ ತಂತ್ರಜ್ಞಾನ ಬಳಸಿ ನೆಲದ ಮೇಲಿನ 1 ಮೀಟರ್ ಗಿ 1 ಮೀಟರ್ ಅಳತೆಯ ವಸ್ತುಗಳನ್ನು ಕೂಡ ದಾಖಲಿಸಲಾಗುತ್ತಿದೆ. ಅಂದರೆ ದೇಶದಲ್ಲಿರುವ ಪ್ರತಿಯೊಂದು ಮನೆ, ಕಚೇರಿಯಿಂದ ಹಿಡಿದು ಕುಗ್ರಾಮದ ಸಣ್ಣದೊಂದು ಗುರುತು ಕೂಡ ಸರ್ಕಾರದ ನಕ್ಷೆಯಲ್ಲಿ ದಾಖಲಾಗಲಿದೆ.
ಗೂಗಲ್ ಮ್ಯಾಪ್‌ಗಿಂತ ಹೇಗೆ ಭಿನ್ನ:
ಸದ್ಯ ಗೂಗಲ್ ಮ್ಯಾಪ್‌ನಲ್ಲಿ ದೇಶದ ಒಂದೊಂದು ಕಟ್ಟಡವನ್ನೂ ವೀಕ್ಷಿಸಬಹುದು. ಆದರೆ, ಈ ನಕ್ಷೆಯನ್ನು ಸರ್ಕಾರದ ಅಧಿಕೃತ ವ್ಯವಹಾರಗಳಿಗೆ ಬಳಸಲು ಸಾಧ್ಯವಿಲ್ಲ. ಏಕೆಂದರೆ ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಆದರೆ, ಸರ್ಕಾರ ಸಿದ್ಧಪಡಿಸುತ್ತಿರುವ ಸುಧಾರಿತ ನಕ್ಷೆಯನ್ನು ಸರ್ಕಾರದ ಎಲ್ಲಾ ಇಲಾಖೆಗಳೂ ಬಳಕೆ ಮಾಡಲಿವೆ. ಹೆಚ್ಚುಕಮ್ಮಿ ಗೂಗಲ್ ಮ್ಯಾಪ್‌ನಲ್ಲಿ ಸಿಕ್ಕಷ್ಟೇ ಸಣ್ಣ ವಿವರಗಳು ಈ ನಕ್ಷೆಯಲ್ಲೂ ಸಿಗಲಿವೆ.
ಗಡಿ ವಿವಾದಕ್ಕೂ ಪರಿಹಾರ:
ಸರ್ವೇ ಆಫ್ ಇಂಡಿಯಾ ಸಿದ್ಧಪಡಿಸುತ್ತಿರುವ ಅತ್ಯಾಧುನಿಕ ನಕ್ಷೆಯಿಂದ ಅಂತಾರಾಜ್ಯ ಗಡಿ ವಿವಾದ ಪರಿಹಾರ, ನೆರೆ ಮುನ್ನೆಚ್ಚರಿಕೆ, ಗ್ರಾಮೀಣ ಪ್ರದೇಶಗಳ ಆಸ್ತಿ ಹಕ್ಕು ವಿವಾದ, ನಗರ ಯೋಜನೆ, ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ, ನದಿ, ಕಾಲುವೆ, ಪರ್ವತ ಅಥವಾ ಮರುಭೂಮಿಯ ಅಕ್ಕಪಕ್ಕ ಅಕ್ರಮವಾಗಿ ನಡೆಯುವ ವಾಣಿಜ್ಯ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಕೂಡ ಸಾಧ್ಯವಾಗಲಿದೆ. ಈ ನಕ್ಷೆಯನ್ನೇ ಬಳಸಿ ‘ಸ್ವಾಮಿತ್ವ’ ಯೋಜನೆಯಡಿ ದೇಶಾದ್ಯಂತ ವಿವಾದರಹಿತ ಆಸ್ತಿ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯ ಕೂಡ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.