ಪ್ರಧಾನಿ ಮೋದಿ ತಾಯಿ ಹೀರಾಬೆನ್ ನಿಧನ: ಮೋದಿ ನೀಡಿದ ಸಂದೇಶ ಏನು?

By Govindaraj SFirst Published Dec 30, 2022, 7:21 PM IST
Highlights

ಬಹುತೇಕ ಶಾಸಕರು, ಸಂಸದರನ್ನು ನೀವು ಕೇಳಿ ನೋಡಿ, ತಮ್ಮ ಕ್ಷೇತ್ರದಲ್ಲಿ ಯಾವುದೇ ಸಾವು ಸಂಭವಿಸಿದ್ರು ಸಾವದವರ ಮನೆಗೆ ಹೋಗಿ ಬರ್ತಾರೆ. ಅಪ್ಪಿ ತಪ್ಪಿ ಅವರಿಗೆ ಹೋಗಲು ಆಗದೆ ಇದ್ದರೂ ಅವರ ಕುಟುಂಬಸ್ಥರನ್ನಾದರೂ ಕಳುಹಿಸಿತ್ತಾರೆ.

ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್

ಬಹುತೇಕ ಶಾಸಕರು, ಸಂಸದರನ್ನು ನೀವು ಕೇಳಿ ನೋಡಿ, ತಮ್ಮ ಕ್ಷೇತ್ರದಲ್ಲಿ ಯಾವುದೇ ಸಾವು ಸಂಭವಿಸಿದ್ರು ಸಾವದವರ ಮನೆಗೆ ಹೋಗಿ ಬರ್ತಾರೆ. ಅಪ್ಪಿ ತಪ್ಪಿ ಅವರಿಗೆ ಹೋಗಲು ಆಗದೆ ಇದ್ದರೂ ಅವರ ಕುಟುಂಬಸ್ಥರನ್ನಾದರೂ ಕಳುಹಿಸಿತ್ತಾರೆ. ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಸಾವಿನ ಮನೆ ಮತ್ತು ಮದುವೆ ಮನೆ ಎರಡನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆ ಎನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.! ಇಂದು ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ತಮ್ಮ ಮನೆಯಲ್ಲಾದ ಸಾವಿಗೆ ಕ್ಷೇತ್ರದ ಪ್ರತಿನಿಧಿ ಬರಬೇಕು ಎಂದು ಬಯಸುತ್ತಾನೆ. ಸಾವು ಕೂಡ ಇತ್ತಿಚೆಗೆ ಒಂದು ಕಮರ್ಷಿಯಲ್ ಆಗಿದೆ. ಹುಟ್ಟಿದಾಗಲೂ ಜಾಹಿರಾತು ಕೊಡ್ತಾರೆ. ಸತ್ತಾಗಲೂ ಜಾಹಿರಾತು ನೀಡ್ತಾರೆ.! ವ್ಯತ್ಯಾಸ ಏನು ಗೊತ್ತಾಗಿಲ್ಲ.! ಇರಲಿ ಬಿಡಿ. ಅವರವರ ಭಾವಕ್ಕೆ. 

ಕೆಲವರು ನಿಧನದ ಬಳಿಕ ಹೆಸರಾಗ್ತಾರೆ. ಇನ್ನು ಹಲವರು ಮರಣದ ಬಳಿಕ ಸಮಾಜದಲ್ಲಿ ಹೆಸರು ಮಾಡಿದವರ ದೂರದ ಸಂಬಂಧಿ ಎನ್ನುವ ಕಾರಣಕ್ಕೆ ಸುದ್ದಿ ಆಗ್ತಾರೆ. ಕೆಲವರು ಸತ್ತ ಬಳಿಕ ಅವರ ಕುಟುಂಬದವರು ಸರ್ಕಾರಿ ಗೌರವ ಕೇಳುತ್ತಾರೆ. ಅಥವಾ ಇನ್ಯಾರದ್ದೋ ಮೂಲಕ ಒತ್ತಡ ಹಾಕಿ, ಸಾವಿಗೆ ನಾಲ್ಕಾರು ರಾಜಕಾರಣಿಗಳು ಮನೆ ಬಾಗಿಲಿಗೆ ಬರೋದನ್ನೇ ನಿರೀಕ್ಷಿಸುತ್ತಾರೆ. ಮಕ್ಕಳು ಆಡುವ ಆಟದ ಮೈದಾನವನ್ನೇ ಸ್ಮಶಾನವಾಗಿ ಬದಲಿಸುತ್ತಾರೆ. ಇನ್ಯಾವುದೊ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯ ಸ್ಮಾರಕ ನಿರ್ಮಾಣ ನಿರ್ಮಿಸುತ್ತಾರೆ.. ! (ಅರ್ಹ ವ್ಯಕ್ತಿಗಳಿಗೆ ಸಿಗಬೇಕಾದ ಗೌರವ ಸಿಗಬೇಕು) ಹುಟ್ಟು ಸಾವು ಸಹಜ ಎನ್ನೋದನ್ನೆ ಮೆರೆತು ಬಿಡುತ್ತಾರೆ. ಆದರೆ ದೇಶದ ಪ್ರಧಾನಿ ತಾಯಿಯೇ ನಿಧನವಾದಾಗ ಈ ಯಾವ ಕಾರಣಕ್ಕೂ ಸುದ್ದಿಯಾಗಲೇ ಇಲ್ಲ. 

ಆಡಂಬರವೇ ಇಲ್ಲದ ಮೆರವಣಿಗೆ. ಯಾವ ಮಹಾನ್ ರಾಜಕಾರಣಿಗಳು ಸಾವಿನ ಮನೆಯ ಗೇಟ್ ಓಪನ್ ಮಾಡದಷ್ಟು ಸರಳತೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ನೂಕು ನುಗ್ಗಲು ಇಲ್ಲ. ಟಿವಿ ಮಾಧ್ಯಮಗಳಲ್ಲಿ ಸಂಜೆ ತನಕ ಅಂತಿಮ ಯಾತ್ರೆಯ ಲೈವ್ ವಿಶ್ಯುವಲ್ ನೀಡಲು ಅವಕಾಶವೇ ಸಿಗಲಿಲ್ಲ. ಹೌದು ಇದು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನದ ಬಳಿಕದ ಕತೆ. 

ಪಶ್ಚಿಮ ಬಂಗಾಳ ಜನತೆಯಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಭಾವುಕರಾದ ಜನ!

ದೇಶದ ಜನಪ್ರಿಯ ಪ್ರಧಾನಿ ಮೋದಿ ತಾಯಿ ನಿಧನ ಆದ್ರಂತೆ ಅಂದಾಗಲೇ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕರ್ನಾಟಕದಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಎಂದು ಬಂದಿದ್ದಾರೆ. ಆ ಕಾರ್ಯಕ್ರಮ ಕ್ಯಾನ್ಸಲ್ ಆಗಬಹುದು ಎಂದು ನಾವೆಲ್ಲಾ ಯೋಚಿಸಿದ್ದೇವು. ನಮ್ಮ ಕಚೇರಿಯಿಂದ ಕೂಡ ಅಮಿತ್ ಶಾ ಕಾರ್ಯಕ್ರಮ ಇರುತ್ತಾ/ ಇಲ್ವಾ ಚೆಕ್ ಮಾಡಿ ಎನ್ನುವ ಸೂಚನೆ ಬಂದಿತ್ತು. ಉಹು, ನಾವು ಅಂದು ಕೊಂಡಂತೆ ಯಾವುದು ಆಗಲಿಲ್ಲ. ಅಮಿತ್ ಶಾ ಕಾರ್ಯಕ್ರಮ ರದ್ದಾಗುವ ಮಾತು ದೂರ ಉಳಿದಿತು. ಸ್ವತಃ ಪ್ರಧಾನಿ ಮೋದಿಯೆ ತಾಯಿ ನಿಧನದ ದುಃಖದಲ್ಲೂ ಪೂರ್ವ ನಿಗದಿ ಆಗಿದ್ದ ಕಾರ್ಯಕ್ರಮದಲ್ಲಿ ಭಾಗಿ ಆದರು.

Your Mother Is Our Mother ಎಂದ ಮಮತಾ: ತನ್ನ ತಾಯಿ ನಿಧನ ಆಗದೇ ಇದ್ದಿದ್ದರೆ, ಪ್ರಧಾನಿ ಮೋದಿ ಇಂದು ಕೊಲ್ಕತ್ತಾಗೆ ತೆರಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ಟ್ರೈನ್'ಗೆ ಚಾಲನೆ ನೀಡ್ತಾ ಇದ್ದರು. ಆದರೆ ಹೆತ್ತವಳು ಹೊತ್ತವಳು, ಹರಿಸಿದವಳು, ಎದೆ ಹಾಲುಣಿಸಿದವಳು ಯಾತ್ರೆ ಮಾಡಿದಳಲ್ಲ. ಹೀಗಾಗಿ ಕೋಲ್ಕತಾ ಕಾರ್ಯಕ್ರಮಕ್ಕೆ ವರ್ಚ್ಯುವಲ್ ಮೂಲಕ ಭಾಗಿ ಆದರು. ಆ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಸಿಎಂ, ಸದಾ ಮೋದಿಯ ಜೊತೆ ಸೈದ್ಧಾಂತಿಕ ವಿರೋಧ ಹೊಂದಿರುವ, ಕೇಂದ್ರ ಸರ್ಕಾರದ ನಿಲುವುಗಳನ್ನು ಕಠುವಾಗಿ ಟೀಕಿಸುವ ಮಮತಾ ಬ್ಯಾನರ್ಜಿ "ನಿಮ್ಮ ತಾಯಿ ನನ್ನ ತಾಯಿ ಎಂದರು. 'Please take some rest, I don't know how to condole your mother's death, your mother is our mother' ನನಗೆ ಯಾವ ರೀತಿ ಸಂತಾಪ ಸೂಚಿಸಬೇಕು ಗೊತ್ತಾಗುತ್ತಿಲ್ಲ. ನೀವು ಸ್ವಲ್ಪ ರೆಸ್ಟ್ ಮಾಡಿ ಎಂದು ತನ್ನ ಒಡಲೊಳಗಿನ ಮಾತನ್ನು ಮೋದಿಗೆ ಹೇಳಿ ಸಂತೈಸಿದರು.

ಮೋದಿ ನೀಡಿದ ಸಂದೇಶ ಏನು?: ದೇಶದ ಪ್ರಧಾನಿ ಮೋದಿ ಕುಟುಂಬ ಎಂದರೆ ನಾವೆಲ್ಲಾ ನೋಡಿದ್ದು ಕೇವಲ ಅವರ ತಾಯಿಯನ್ನು ಮಾತ್ರ. ಆಗಾಗ ತಾಯಿಯ ಜೊತೆ ಕೆಲ ಸಮಯ ಕಾಲ ಕಳೆಯುತ್ತಿದ್ದ ಮೋದಿ, ಅವರ ಸಹೋದರರ ಜೊತೆ ಕಾಣಿಸಿಕೊಂಡಿದ್ದು ಅತೀ ಕಡಿಮೆ ಅಥವಾ ಆ ರೀತಿಯ ಸಮಯಕ್ಕೆ ಮೋದಿ ಅವಕಾಶ ನೀಡಿರಲಿಲ್ಲ. ರಾಜಕೀಯದಿಂದ ತಮ್ಮ ಕುಟುಂಬವನ್ನು ದೆಹಲಿಗೂ , ಗುಜರಾತ್'ಗೂ ಇರುವಷ್ಟೇ ದೂರ ಇಟ್ಟಿದ್ದರು. ಈ ವಿಷಯದಲ್ಲಿ ಮೋದಿ ದೇಶದ ರಾಜಕೀಯಕ್ಕೆ ಮಾದರಿ ನಾಯಕ. ತಾಯಿ ಜೊತೆ ಮಾತ್ರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ಮೋದಿ ಹೇಗೆ  ಮಾದರಿ ನಾಯಕನೊ, ಅದೇ ರೀತಿ ತಾಯಿ ಹೀರಾಬೆನ್ ಕೂಡ ಮಾದರಿ ತಾಯಿ.

ಸಂದರ್ಶನ ನೀಡದ ಹೀರಾಬೆನ್: ಮುಂದುವರಿದಿರುವ ಮಾಧ್ಯಮ ಯುಗದಲ್ಲಿ ಒಮ್ಮೆಯಾದರೂ ತನ್ನ ಮಗನ ಬಗ್ಗೆ ಅಲ್ಲ, ಪ್ರಧಾನಿ ಆದ ಮಗನ ಬಗ್ಗೆ ಟಿವಿ ಮುಂದೆ ಕುಳಿತು, ನೀವೆಲ್ಲಾ ಇಷ್ಟ ಪಡುವ ಮೋದಿಯನ್ನು ಬೆಳೆಸಿದ್ದು ನಾನೇ ಎಂದು ಹೇಳಬಹುದಿತ್ತು. ಇಲ್ಲ ಹೇಳಲಿಲ್ಲ. ಅಥವಾ ತನ್ನ ಕಷ್ಟದ ಬಾಲ್ಯ ಹೇಗಿತ್ತು ಎಂದು ತನ್ನ ತಾಯಿ ಮೂಲಕ ಹೇಳಿ ಪ್ರಚಾರ ಪಡೆಯಬಹುದಿತ್ತು. ಮೋದಿ ಅದನ್ನು ಮಾಡಲಿಲ್ಲ. ಕಾರಣ ಮೋದಿ ಕುಟುಂಬಕ್ಕೆ ಮಗನ ಹೆಸರಿಂದ ಪ್ರಚಾರ ಬೇಡ ಅಥವಾ ಪ್ರಧಾನಿ ಮೋದಿಗೆ ಆ ಚೀಪ್ ಗಿಮಿಕ್ ಅಗತ್ಯವಿರಲಿಲ್ಲ ಅನಿಸತ್ತೆ. ಒಮ್ಮೆ ವಿದೇಶಕ್ಕೆ ಹೋಗಿದ್ದಾಗ ಮಾತ್ರ ತಾಯಿ ಕಷ್ಟ ಪಟ್ಟು ಮಕ್ಕಳನ್ನು ಸಾಕಿದ ಹಳೆಯ ನೆನಪು ಬಂದು ಗದ್ಘದಿತರಾಗಿದ್ದರು. 

ಹೀಗೆ ಆಗಾಗ ತಾಯಿ ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳುವ ಮೋದಿ, ಆಡಳಿತ ಬುದ್ದಿವಂತಿಕೆಯಿಂದ ಮಾಡು, ಜೀವನ ಶುದ್ಧಿಯಿರಲಿ ಎಂದು ತಾಯಿ ಹೇಳಿದ್ದ ಮಾತನ್ನು ಮೋದಿ ನೆನೆಸಿಕೊಂಡಿದ್ದಿದೆ. ಇಂದು ತಾಯಿ ನಿಧನ ಸುದ್ದಿ ತಿಳಿದು ಅವರು ನಡೆದುಕೊಂಡ ರೀತಿ ಆಶ್ಚರ್ಯ ತರಿಸಿತ್ತು. ತೋರಿಕೆಗಾಗಿ ಮೋದಿ  ಸರಳವಾಗಿ ತಾಯಿ ಅಂತ್ಯಕ್ರಿಯೆ  ಮಾಡಿದರು ಎಂದು ಯೋಚಿಸುವ ಮನಸ್ಸುಗಳಿದ್ದರು ಅಂತವರಿಗೂ ಮೋದಿ ಆ ಕ್ಷಣ ಇಷ್ಟ ಆಗಿರಬಹುದು. ಆತ್ಮಕ್ಕೆ ಸಾವಿಲ್ಲ, ದೇಹ ಮಾತ್ರ ಮರೆಯಾಗುತ್ತದೆ ಎಂದು ಭಗವಂತ ಶ್ರೀಕೃಷ್ಣ ಹೇಳಿರುವ ಮಾತೇ ಅಂತಿಮ ಸತ್ಯವೆಂದು  ಭಾವಿಸಿ, ಹುಟ್ಟು ಸಾವು ಸಹಜ ಇದು ಸೃಷ್ಟಿಯ ನಿಯಮ ಎನ್ನೋದನ್ನು ತನ್ನ ತಾಯಿ ಅಂತ್ಯ ಕ್ರಿಯೆಯಲ್ಲೂ ಪ್ರಧಾನಿ ಮೋದಿ ಬಲವಾಗಿ ತೋರಿದ್ದಾರೆ. ಅಷ್ಟಕ್ಕೂ ಮೋದಿ ಸಂಘದ ಪ್ರಾಚರಕರಾಗಿ ಬಂದವರು ನೋಡಿ. ಸಂಘದಲ್ಲಿ ಬೆಳೆದ ಬಹುತೇಕರ ಜೀವನ ಶೈಲಿಯೆ ಹೀಗೆ. 

ಪ್ರಧಾನಿ ಅಮ್ಮನಾದರೂ , ಶ್ರೀ ಸಾಮಾನ್ಯರಂತೆಯೇ ನಡೆಯಿತು ಅಂತ್ಯ ಸಂಸ್ಕಾರ!

ಹೀರಾಬೆನ್ ಸಾಧನೆ ಏನು?: ಜಪಾನ್ ದೇಶದಲ್ಲಿ ಯಾರಾದರೂ ಗಣ್ಯ ವ್ಯಕ್ತಿಗಳು ನಿಧನ ಹೊಂದಿದರೆ, ಆ ಒಂದು ದಿನ ತಮ್ಮ ಕೆಲಸದ ಅವಧಿಯ ಜೊತಗೆ ಒಂದು ಗಂಟೆ ಹೆಚ್ಚಾಗಿ ಕೆಲಸ ಮಾಡುತ್ತಾರಂತೆ. ಅದು ಸ್ವರ್ಗಸ್ಥರಾದವರಿಗೆ ನೀಡುವ ಗೌರವವಂತೆ. ಅದೇ ರೀತಿ ಇಂದು ಮೋದಿ ಇಂದು ತನ್ನ ತಾಯಿ ಪಾರ್ಥಿವ ಸಂಸ್ಕಾರ ಮಾಡಿ ಕೆಲಸಕ್ಕೆ ಹಾಜರಾಗಿದ್ದು ಈ ದೇಶಕ್ಕೆ ಹಾಕಿದ ಮೇಲ್ ಪಂಕ್ತಿ. ಹಾಗಾದರೆ ಮೋದಿ ತಾಯಿ ಹೀರಾಬೆನ್ ಸಾಧನೆ ಏನು, ದೇಶಕ್ಕಾಗಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುವ ಅಥವಾ ಆ ರೀತಿ ಯೋಚಿಸುವ ಮನಸ್ಸುಗಳು ಇದ್ದರೆ ಅದಕ್ಕೆ ಉತ್ತರ ಸರಳ. ದೇಶಕ್ಕೆ ಪ್ರಧಾನಿ ಆಗುವ ತನಕ ಸಂಸ್ಕಾರ ಕೊಟ್ಟಿದ್ದಾರೆ ಎನ್ನೋದೆ ಮೋದಿ ತಾಯಿ ಹೀರಾಬೆನ್ ಸಾಧನೆ. ದೇಶದ ನಾಯಕನಾಗುವ ಗುಣ ಬೆಳೆಸಿದ್ದಾರೆ ಎನ್ನೋದೆ ಹೀರಾಬೆನ್ ಸಾಧನೆ.

ನಮ್ಮ ದೇಶ ಮೇಲ್ ಪಂಕ್ತಿ ಹಾಕಿದ ನಾಯಕರ ಮರೆತಿಲ್ಲ: ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮೊಳಗಿಸಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ, ದೇಶದ ಆರ್ಥಿಕ ಸ್ಥಿತಿ ಕಷ್ಟದಲ್ಲಿದ್ದಾಗ ಒಂದು ಹೊತ್ತಿನ ಊಟ ಮಾತ್ರ ಮಾಡಿ ಎಂದು ಕರೆ ನೀಡಿದ್ದರು. ಸ್ವತಃ ತಾವೇ ಮೊದಲಿಗೆ ಅದನ್ನು ಆರಂಭಿಸಿದ್ದರು. ದೇಶದ ಜನತೆ ಶಾಸ್ತ್ರಿಗಳ ಮಾತನ್ನು ತಪ್ಪದೇ ಪಾಲಿಸಿತ್ತು. ಗರಿಬಿ ಹಠಾವೊ ಎಂದು ಘೋಷ ವಾಕ್ಯ ನೀಡೊದು, ಭ್ರಷ್ಟಾಚಾರ ಮುಕ್ತ ಭಾರತ ಎನ್ನೋದು ಇದೆಲ್ಲಾ ನಮ್ಮಲ್ಲಿ ಘೋಷಣೆಯಾಗಿಯೆ ಇದೆ. ಆದರೆ ಕೊನೆ ಪಕ್ಷ ಕರೆ ನೀಡುವ ವ್ಯಕ್ತಿಯಾದರೂ ಸಚ್ಚಾರಿತ್ರ್ಯದಿಂದ ಕೂಡಿರಬೇಕು. ಆಗ ನಿಧಾನಕ್ಕಾದರೂ ಜನ ಅದನ್ನು ಪಾಲಿಸುತ್ತಾ ಬರುತ್ತಾರೆ. ಮೋದಿ ಕುಟುಂಬವನ್ನು ರಾಜಕೀಯದಿಂದ ಹೇಗೆ ದೂರ ಇಡಬೇಕು ಎಂದು ಮೇಲ್ ಪಂಕ್ತಿ ಹಾಕಿದ್ದಾರೆ. ಜೊತೆಗೆ ಫ್ಯಾಮಿಲಿ ಕಾರ್ಯಕ್ರಮ ಅದು ದುಃಖವೊ ಸಂತೋಷವೊ ಹೇಗೆ ನಾಲ್ಕು ಗೋಡೆ ಮಧ್ಯೆ ನಡೆಸಬೇಕು ಎಂದು ಮೇಲ್ ಪಂಕ್ತಿ ಹಾಕಿದ್ದಾರೆ. ಜನರು ಒಳ್ಳೆಯದನ್ನು ಯಾವತ್ತು ಒಪ್ಪಿಕೊಳ್ಳುತ್ತಾರೆ. ಆದರೆ ನಮ್ಮನ್ನು ಆಳುವವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವತಃ ನಡೆಯ ಮೂಲಕ ತೋರಬೇಕು.

click me!