
ನವದೆಹಲಿ(ಮೇ.28): ‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕೈಯಲ್ಲಿ ಸ್ಮಾರ್ಚ್ ಫೋನ್ ಹೊಂದಿರಬೇಕು, ಪ್ರತಿ ಕೃಷಿ ಭೂಮಿಗೂ ಡ್ರೋನ್ ಇರಬೇಕು ಹಾಗೂ ಪ್ರತಿಯೊಂದು ಮನೆಯೂ ಸಂಪದ್ಭರಿತವಾಗಿರಬೇಕು ಎಂಬುದು ನನ್ನ ಕನಸು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ದೇಶದ ಅತಿದೊಡ್ಡ ಡ್ರೋನ್ ಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಈ ಕನಸನ್ನು ಸಭಿಕರೆದುರು ಬಿಚ್ಚಿಟ್ಟರು. ತಾವು ಪ್ರಧಾನಿಯಾಗುವ ಮುನ್ನ ಅಂದರೆ 2014ಕ್ಕೂ ಮೊದಲು ತಂತ್ರಜ್ಞಾನವನ್ನು ಆಡಳಿತದಲ್ಲಿ ಬಳಸಿಕೊಳ್ಳುವ ವಿಚಾರದಲ್ಲಿ ಉದಾಸೀನತೆಯ ವಾತಾವರಣ ಇತ್ತು. ಇದರಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಸಾಕಷ್ಟುಬವಣೆ ಪಡುವಂತಾಯಿತು ಎಂದು ಹೇಳಿದರು. ಈ ಮೂಲಕ ಹಿಂದಿನ ಯುಪಿಎ ಸರ್ಕಾರವನ್ನು ಪರೋಕ್ಷವಾಗಿ ತಿವಿದರು. ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಕಂಡು ಬರುತ್ತಿರುವ ಉತ್ಸಾಹ ವಿಸ್ಮಯಕಾರಿಯಾಗಿದೆ. ಉದ್ಯೋಗ ಸೃಷ್ಟಿಸುವ ಉದಯೋನ್ಮುಖ ವಲಯವಾಗುವ ಸಾಧ್ಯತೆ ಇದಕ್ಕಿದೆ ಎಂಬುದನ್ನು ಸೂಚಿಸುತ್ತದೆ ಎಂದರು.
Modi vs Nehru ನೆಹರೂ ಎಲ್ಲಿ? ಮೋದಿ ಎಲ್ಲಿ? ಆಕಾಶ ಭೂಮಿಯಷ್ಟು ಅಂತರ ಎಂದ ಸಿದ್ದರಾಮಯ್ಯ
ಹಿಂದಿನ ಯುಪಿಎ ಸರ್ಕಾರಕ್ಕೆ ಟಾಂಗ್:
ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ತಮ್ಮ ಸಮಸ್ಯೆಯ ಭಾಗ ಎಂದು ಭಾವಿಸುತ್ತಿದ್ದವು. ಅದನ್ನು ಬಡವರ ವಿರೋಧಿ ಎಂದು ಹಣೆಪಟ್ಟಿಹಚ್ಚುತ್ತಿದ್ದವು. ಪಡಿತರ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಸಮಯ ಇತ್ತು. ಕಳೆದ ಏಳೆಂಟು ವರ್ಷಗಳಲ್ಲಿ ಈ ತೊಡಕನ್ನು ತಂತ್ರಜ್ಞಾನದ ಸಹಾಯದಿಂದ ನಿವಾರಿಸಿದ್ದೇವೆ ಎಂದರು. ಈ ಮೂಲಕ ಹಿಂದಿನ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದರು.
‘ತಾಂತ್ರಿಕ ಅನ್ವೇಷಣೆಗಳನ್ನು ಈ ಮೊದಲೆಲ್ಲಾ ಶ್ರೀಮಂತರಿಗೆ ಮಾತ್ರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ನಾವು ಹೊಸ ತಂತ್ರಜ್ಞಾನಗಳ ಮೊದಲ ಫಲಾನುಭವಿಗಳು ಜನಸಮೂಹ ಆಗಿರುವಂತೆ ನೋಡಿಕೊಳ್ಳುತ್ತಿದ್ದೇವೆ. ಡ್ರೋನ್ ತಂತ್ರಜ್ಞಾನ ಇದಕ್ಕೊಂದು ಉದಾಹರಣೆ. ಸೇವೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ತಂತ್ರಜ್ಞಾನ ಬಹುವಾಗಿ ನೆರವಿಗೆ ಬಂದಿದೆ. ದೊಡ್ಡ ಕ್ರಾಂತಿಗಳಿಗೆ ಡ್ರೋನ್ ತಂತ್ರಜ್ಞಾನ ಯಾವ ರೀತಿ ಆಧಾರವಾಗಿರುತ್ತದೆ ಎಂಬುದಕ್ಕೆ ಪ್ರಧಾನಮಂತ್ರಿ ಸ್ವಾಮಿತ್ವ ಯೋಜನೆಯೇ ಉದಾಹರಣೆ. ಮೊದಲ ಬಾರಿಗೆ ಗ್ರಾಮಗಳಲ್ಲಿರುವ ಪ್ರತಿಯೊಂದು ಆಸ್ತಿಯ ನಕ್ಷೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಯಾರಿಸಲಾಗಿದೆ. 65 ಲಕ್ಷ ಆಸ್ತಿ ಕಾರ್ಡುಗಳನ್ನು ಜನತೆಗೆ ವಿತರಿಸಲಾಗಿದೆ’ ಎಂದು ವಿವರಿಸಿದರು.
ಮೋದಿ ಸಮ್ಮುಖದಲ್ಲೇ ಹಿಂದಿ ಹೇರಿಕೆ, ನೀಟ್‌ಗೆ ಮುಖ್ಯಮಂತ್ರಿ ಸ್ಟಾಲಿನ್ ಕಿಡಿ
ಡ್ರೋನ್ ಬಳಕೆ ಹೆಚ್ಚಳಕ್ಕೆ ಆದ್ಯತೆ:
‘ಕೆಲವೇ ತಿಂಗಳುಗಳ ಹಿಂದೆ ಡ್ರೋನ್ ತಂತ್ರಜ್ಞಾನದ ಮೇಲೆ ಹಲವಾರು ನಿರ್ಬಂಧಗಳು ಇದ್ದವು. ಕೇಂದ್ರ ಸರ್ಕಾರ ಅತ್ಯಂತ ಅಲ್ಪಾವಧಿಯಲ್ಲಿ ಅದನ್ನು ತೆಗೆದು ಹಾಕಿತು’ ಎಂದು ಹೇಳಿದರು. ಇದಲ್ಲದೆ, ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಹಾಗೂ ರಕ್ಷಣಾ ವಲಯದಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ ಹೆಚ್ಚಲಿದೆ ಎಂದೂ ಅವರು ಘೋಷಿಸಿದರು.
ಇಂದೂ ಡ್ರೋನ್ ಮಹೋತ್ಸವ:
ಶುಕ್ರವಾರ ಹಾಗೂ ಶನಿವಾರ ‘ಭಾರತ್ ಡ್ರೋನ್ ಮಹೋತ್ಸವ 2022’ ಆಯೋಜನೆಗೊಂಡಿದೆ. ವಿದೇಶಿ ರಾಜತಾಂತ್ರಿಕರು ಸೇನಾ ಪಡೆಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ಕಂಪನಿಗಳು, ಡ್ರೋನ್ ಸ್ಟಾರ್ಟಪ್‌ಗಳು ಸೇರಿ 1600 ಪ್ರತಿನಿಧಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಮೋದಿ ತ್ರಿವಳಿ ಕನಸು
1. ಎಲ್ಲರ ಕೈಯಲ್ಲೂ ಸ್ಮಾರ್ಚ್ ಫೋನ್ ಇರಬೇಕು
2. ಪ್ರತಿ ಕೃಷಿ ಭೂಮಿಗೂ ಡ್ರೋನ್ ಲಭಿಸಬೇಕು
3. ಪ್ರತಿ ಮನೆ ಕೂಡ ಸಂಪದ್ಭರಿತವಾಗಿರಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ