
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋತ ಬೆನ್ನಲ್ಲೇ ಈ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಸಭೆ ಹಾಗೂ ಭದ್ರತಾ ಸಮಿತಿ ಸಭೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ, ಮಹಿಳಾ ಮೀಸಲಾತಿ ಜಾರಿ ಬಗ್ಗೆ ಮೋದಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ, ವಿಪಕ್ಷಗಳ ನಿಲುವನ್ನು ಟೀಕಿಸುವ ನಿರೀಕ್ಷೆಯೂ ಇದೆ. ಸಾಮಾನ್ಯವಾಗಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಹಲವು ಬಾರಿ ರಾತ್ರಿ 8 ಗಂಟೆಗೆ ಮಾತನಾಡಿದ್ದುಂಟು. ಹಳೆಯ 500 ಮತ್ತು 1000 ರೂಪಾಯಿ ನೋಟ್ ಬ್ಯಾನ್ ಮತ್ತು ಲಾಕ್‌ಡೌನ್ ಅಂತಹ ಪ್ರಮುಖ ಘೋಷಣೆಯನ್ನು ರಾತ್ರಿ 8 ಗಂಟೆಗೆ ಘೋಷಣೆ ಮಾಡಿದ್ದರು. ಆದರೆ ಇಂದು ಅದೇ ಪ್ರಧಾನಿ ಸಮಯ ಬದಲಾವಣೆ ಮಾಡಿಕೊಂಡಿರೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನರೇಂದ್ರ ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ನಿನ್ನೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ಸೋಲು ಕಂಡಿದೆ. ಮಸೂದೆ ಪರವಾಗಿ 298 ಸಂಸದರು ಮತ ಹಾಕಿದರೆ, 230 ಮಂದಿ ವಿರೋಧಿಸಿದರು. ಸರ್ಕಾರದ ಎಲ್ಲಾ ಪ್ರಯತ್ನಗಳ ನಡುವೆಯೂ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಂತು ತಿದ್ದುಪಡಿಯನ್ನು ವಿರೋಧಿಸಿದವು. 'ಇಂಡಿಯಾ' ಮೈತ್ರಿಕೂಟದ ಯಾವುದೇ ಪಕ್ಷ ತನ್ನ ನಿಲುವು ಬದಲಿಸಲಿಲ್ಲ. ಎನ್‌ಡಿಎ ಹೊರಗಿನ ಪಕ್ಷಗಳಿಂದಲೂ ಸರ್ಕಾರಕ್ಕೆ ಬೆಂಬಲ ಸಿಗಲಿಲ್ಲ. ಒಟ್ಟು ಸೀಟುಗಳನ್ನು 850ಕ್ಕೆ ಏರಿಸುವಾಗ ರಾಜ್ಯಗಳ ಪ್ರಾತಿನಿಧ್ಯ ಎಷ್ಟಿರುತ್ತೆ ಅಂತ ಸ್ಪಷ್ಟಪಡಿಸುವ ತಿದ್ದುಪಡಿ ತರುವುದಾಗಿ ಅಮಿತ್ ಶಾ ಸಲಹೆ ನೀಡಿದರೂ, ವಿಪಕ್ಷಗಳು ಒಪ್ಪಲಿಲ್ಲ. ಕಾಂಗ್ರೆಸ್ ವಿರೋಧಿಸುತ್ತಿರುವುದು ಕ್ಷೇತ್ರ ಪುನರ್ವಿಂಗಡಣೆಗಲ್ಲ, ಬದಲಾಗಿ ಮಹಿಳಾ ಮೀಸಲಾತಿಗೇ ಎಂದು ಅಮಿತ್ ಶಾ ಆರೋಪಿಸಿದರು. ಓಬಿಸಿ ಮೀಸಲಾತಿಯನ್ನು ಯಾವಾಗಲೂ ವಿರೋಧಿಸಿದ ಇತಿಹಾಸ ಕಾಂಗ್ರೆಸ್‌ಗಿದೆ ಎಂದೂ ಶಾ ಕಿಡಿಕಾರಿದರು.
'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕು ಮೂಡಿಸಬಹುದು ಎಂಬ ಸರ್ಕಾರದ ನಿರೀಕ್ಷೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ, ಸಂಸತ್ತಿನ ಹೊರಗೆ ದೊಡ್ಡ ಮಟ್ಟದ ಪ್ರಚಾರಾಂದೋಲನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಸಂಸತ್ತಿನಲ್ಲಿ ಒಂದು ಮಸೂದೆ ಸೋಲನುಭವಿಸುತ್ತಿರುವುದು ಇದೇ ಮೊದಲು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ