ಲೋಕಸಭೆ ಚುನಾವಣೆಯ ಕಣ ರಂಗೇರಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಏಷ್ಯಾನೆಟ್ ನ್ಯೂಸ್ ಸಂಸ್ಥೆಗಳಿಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಅವರು ಹಲವು ವಿಚಾರಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ಸಂದರ್ಶಕರು: ರಾಜೇಶ್ ಕಾಲ್ರಾ, ಅಜಿತ್ ಹನಮಕ್ಕನವರ್, ಸಿಂಧು ಸೂರ್ಯಕುಮಾರ್
* ಮೋದಿ ಜೀ ನೀವು ತುಂಬಾ ಜಾಗಗಳಲ್ಲಿ ಓಡಾಡಿದ್ದೀರಿ, ಸಭೆ ಮಾಡಿದ್ದೀರಿ, ರ್‍ಯಾಲಿ ಮಾಡಿದ್ದೀರಿ. ನಿಮಗೆ ವಾತಾವರಣ ಹೇಗಿದೆ ಅನಿಸುತ್ತೆ?
ಸಾರ್ವಜನಿಕ ಜೀವನದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡಿದ್ದೀನಿ. ಸಂಘಟನೆಯ ಕಾರ್ಯಕರ್ತನಾಗಿದ್ದೆ. ವಾತಾವರಣ ನನಗೆ ಅರ್ಥವಾಗುತ್ತೆ. ನಾನು ಜ್ಯೋತಿಷಿ ಅಲ್ಲ. ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ನಾನು ಚುನಾವಣೆ ಸಮಯದಲ್ಲಿ ಓಡಾಡುವ ಮನುಷ್ಯನಲ್ಲ. ವಾರದಲ್ಲಿ ಪ್ರತಿ ಶನಿವಾರ, ಭಾನುವಾರ ಎಲ್ಲಿಗಾದರೂ ಹೋಗುತ್ತಿರುತ್ತೇನೆ. ಸರ್ಕಾರದ ಕೆಲಸಗಳನ್ನು ನಾನು ಜನರ ಮಧ್ಯೆ ಮಾಡುತ್ತೇನೆ. ನನಗೆ ವಾತಾವರಣ ಬದಲಾಗಿರುವ ಬಗ್ಗೆ ಅರ್ಥವಾಗುತ್ತೆ.ಈಗ ನಾನು ಏನು ವಾತಾವರಣ ನಾನು ನೋಡ್ತಿದ್ದೇನೋ ಅದು ಚುನಾವಣೆ ಘೋಷಣೆಯಾದ ಮೇಲೆ ಶುರುವಾಗಿದ್ದಲ್ಲ. ಕಳೆದ 10 ವರ್ಷದಲ್ಲಿ ನಿರಂತರವಾಗಿ ಹೆಚ್ಚಾಗುತ್ತಿರುವುದು. ನೀವೇ ಸಾಮಾನ್ಯ ಮತದಾರ ಎಂದುಕೊಳ್ಳಿ. ನೀವು ಮತ ಚಲಾಯಿಸಲು ಹೋಗುವ ಮುನ್ನ ಏನು ಯೋಚನೆ ಮಾಡ್ತೀರಿ? ದೇಶವನ್ನು ಯಾರಿಗೆ ಕೊಡಬೇಕು, ಯಾರ ಕೈಯನ್ನು ಬಲಪಡಿಸಬೇಕು ಎಂದು ಯೋಚನೆ ಮಾಡುತ್ತೀರಿ. ಆಗ ಹೋಲಿಕೆ ಮಾಡಿ ನೋಡ್ತೀರಿ. ಇವರನ್ನೇ ಬೆಂಬಲಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತೀರಿ.
ಯಾಕೆಂದರೆ, ಇವರ ಟ್ರ್ಯಾಕ್ ರೆಕಾರ್ಡ್ ಈ ರೀತಿ ಇದೆ, ಏನು ಹೇಳ್ತಾರೋ ಅದನ್ನೇ ಮಾಡ್ತಾರೆ ಎಂಬ ಕಾರಣಕ್ಕೆ.ಎರಡನೆಯದ್ದಾಗಿ, ನಮ್ಮ ಜತೆ ಯಾರಿದ್ದಾರೆ? ನಮ್ಮ ಯೋಚನೆಗಳು ಏನು? ನಮ್ಮ ಅಜೆಂಡಾಗಳು ಏನು? ಎಂಬುದನ್ನೆಲ್ಲಾ ಮತದಾರರು ನೋಡುತ್ತಾರೆ. ಇವರು ಹೇಗೆ ಕೆಲಸ ಮಾಡುತ್ತಾರೆ? ಇವರ ಅನುಭವ ಏನೇನು? ಇದನ್ನೆಲ್ಲಾ ನೋಡುತ್ತಾರೆ. ಈ ಚುನಾವಣೆಯ ಮತ್ತೊಂದು ಸದ್ಭಾಗ್ಯ ಏನೆಂದರೆ, 2014ರಲ್ಲಿ ಮತದಾರನಿಗೆ ಹೋಲಿಕೆ ಮಾಡಿ ನಿರ್ಧರಿಸಲು ಕಡಿಮೆ ಅವಕಾಶಗಳಿದ್ದವು. ಸಿಟ್ಟಿನಲ್ಲಿ ಮೋದಿ ಕರೆತರಬೇಕು ಎಂದು ನಿರ್ಧರಿಸಿದರು. ಆದರೆ ಈಗ ಹೋಲಿಕೆ ಮಾಡಲು ಅವಕಾಶಗಳಿವೆ. ಅವರು ಹೀಗೆ ಮಾಡ್ತಿದ್ರು, ಮೋದಿ ಹೀಗೆ ಮಾಡ್ತಿದ್ದಾರೆ, ಅವರು ಈ ತಪ್ಪು ಮಾಡ್ತಿದ್ರು, ಮೋದಿ ಈ ತಪ್ಪು ಮಾಡುತ್ತಿಲ್ಲ, ಅವರು ಈ ಕೆಟ್ಟ ಕೆಲಸ ಮಾಡ್ತಿದ್ರು, ಮೋದಿ ಇದನ್ನು ಮಾಡ್ತಿಲ್ಲ... ಈ ಹೋಲಿಕೆಗಳನ್ನು ಮಾಡಿದ ಮೇಲೆ ಜನರಿಗೆ ಅರ್ಥವಾಗುತ್ತೆ. ನಾನು ಅವರ ಕಣ್ಣಲ್ಲಿ ಪ್ರೀತಿಯನ್ನು ನೋಡ್ತಿನಿ, ಆಕರ್ಷಣೆಯನ್ನು ನೋಡ್ತೀನಿ ಹಾಗೂ ಅವರ ಕಣ್ಣಲ್ಲಿನ ಜವಾಬ್ದಾರಿ ಸಹ ನೋಡ್ತೀನಿ. ಆ ಜವಾಬ್ದಾರಿ ಹೇಳುತ್ತೆ- ಮೋದಿ ಜೀ ಈ ಚುನಾವಣೆ ನಾವು ಗೆಲ್ಲುತ್ತೇವೆ. ನೀವು ಚಿಂತೆ ಮಾಡಬೇಡಿ. ಶಾಂತವಾಗಿರಿ.
ಕರ್ನಾಟಕ್ಕೆ ತೆರಿಗೆ ಅನ್ಯಾಯ ಆರೋಪ, ವಿಶೇಷ ಸಂದರ್ಶನದಲ್ಲಿ ಅಂಕಿ ಅಂಶ ತೆರೆದಿಟ್ಟ ಪ್ರಧಾನಿ ಮೋದಿ!
undefined
* 2014, 2019ರಲ್ಲಿ ಭರ್ಜರಿ ಗೆಲುವು ಸಿಕ್ಕಿತ್ತು. ಮತ್ತೆ ನೀವು ಅದೇ ಮಾತು ಹೇಳ್ತಿದ್ದೀರಿ, ಈ ಬಾರಿ ನಮಗೆ ದೊಡ್ಡ ಗೆಲುವಿನ ಅಗತ್ಯವಿದೆ ಅಂತ. ಜತೆಗೆ ಭಾರತದ ಅಭಿವೃದ್ಧಿ ಕತೆಗಳ ಬಗ್ಗೆ ನೀವು ಮಾತಾಡ್ತೀರಿ. ನಿರ್ಣಾಯಕ ಗೆಲುವಿಗೂ ಅಭಿವೃದ್ಧಿಗೂ ಹೇಗೆ ಸಂಬಂಧ?
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಆಕಾಂಕ್ಷೆಗಳಿರಬೇಕು. ನಾವು ಚುನಾವಣೆಗೆ ಸ್ಪರ್ಧಿಸಬೇಕು. ಜನರ ವಿಶ್ವಾಸ ಗಳಿಸಬೇಕು. ನಂತರ ಅಧಿಕಾರಕ್ಕೆ ಬಂದ ಮೇಲೆ ನಾವು ಕೊಟ್ಟ ಭರವಸೆ ಹಾಗೂ ನಮ್ಮ ಕನಸುಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಇದು ಮಹತ್ವದ ವಿಚಾರ ಅನಿಸುವುದೇ ಇಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಪ್ರಜಾಪ್ರಭುತ್ವದಲ್ಲಿರುವ ಪ್ರತಿಯೊಂದು ರಾಜಕೀಯ ಪಕ್ಷಗಳು ಒಂದು ಭಾವನೆ ಇಟ್ಟುಕೊಳ್ಳಬೇಕು. ಅಧಿಕಾರಕ್ಕೆ ಬಂದ ಮೇಲೆ ತಮ್ಮ ವಿಚಾರದ ಆಧಾರದ ಮೇಲೆ ದೇಶದ ಸೇವೆ ಮಾಡಬೇಕು. ಇದು ಪ್ರಜಾಪ್ರಭುತ್ವಕ್ಕೆ ಅವಶ್ಯಕವಾಗಿರುತ್ತೆ. ಬಿಜೆಪಿ ಪ್ರಶ್ನೆ ಬಂದರೆ... 2014ರಲ್ಲಿ ನಾವು ಅಧಿಕಾರಕ್ಕೆ ಬರುವ ಮುನ್ನ 5-6 ದಶಕಗಳ ಕಾಲ ಅಧಿಕಾರ ನಡೆಸಲು ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿತ್ತು. ಬಹುಶಃ ಅವರಿಗೆ ಆಗ ಪ್ರಬಲ ವಿಪಕ್ಷಗಳು ಇರಲಿಲ್ಲ.
ಇಷ್ಟೊಂದು ಮಾಧ್ಯಮಗಳ ತೀವ್ರತೆ ಸಹ ಇರಲಿಲ್ಲ. ದೇಶದ ಜನತೆ ಅವರ ಜತೆ ಇದ್ದರು. ಸ್ವಾತಂತ್ರ್ಯ ಹೋರಾಟದ ಭಾವನೆ ಜನರಲ್ಲಿತ್ತು. ಅವರು ಏನು ಹೇಳಿದರೂ ದೇಶ ಮಾಡುತ್ತಿತ್ತು. ಆದರೆ ಅವರು ಆ ಅವಕಾಶವನ್ನು ನಾಶ ಮಾಡಿದರು. ಕ್ರಮೇಣವಾಗಿ ಹಾಳು ಮಾಡುತ್ತಾ ಬಂದರು. 2013ರಲ್ಲಿ ನನ್ನ ಮೇಲೆ ಏನೆಲ್ಲಾ ಹೇಳಿದರು? ಈ ವ್ಯಕ್ತಿಗೆ ಹಿಂದೂಸ್ತಾನದ ಜನರ ಬಗ್ಗೆ ಏನು ಗೊತ್ತು? ವಿಶ್ವದ ಬಗ್ಗೆ ಏನು ಗೊತ್ತು? ನಕಾರಾತ್ಮಕ ವಿಚಾರಗಳ ಮಾತುಗಳನ್ನು ಆಡಿದರು. ಆದರೆ ಜನರು ನಮಗೆ ಅವರ ಸೇವೆ ಮಾಡಲು ಅವಕಾಶ ನೀಡಿದರು. 2014 ಭರವಸೆಯ ಕಾಲಘಟ್ಟವಾಗಿತ್ತು. ಜನರ ಮನಸ್ಸಿನಲ್ಲೂ ಭರವಸೆ ಇತ್ತು. ನನ್ನ ಮನಸ್ಸಲ್ಲೂ ಭರವಸೆ ಇತ್ತು- ಜನರ ಭರವಸೆಗಳನ್ನು ಈಡೇರಿಸಬೇಕು ಅಂತ. ಮೊದಲ 5 ವರ್ಷ ನಾವು ಅಧಿಕಾರ ಚಲಾಯಿಸಲಿಲ್ಲ. ಜನರ ಸೇವೆ ಮಾಡಿದೆವು.
ಸರ್ಕಾರ ನಡೆಸುವುದು ಎಂದರೆ ಕುಳಿತು ಮೋಜು ಮಾಡುವ ಪಕ್ಷದಲ್ಲಿ ನಾನಿಲ್ಲ. ಜನರಿಗಾಗಿ ನಾನು ಸಾಮಾನ್ಯ ಜನರಿಗಿಂತ ಹೆಚ್ಚು ಕಷ್ಟಪಡಲು ಪ್ರಯತ್ನ ಪಡುತ್ತೇನೆ. ಜನ ನಮ್ಮೊಂದಿಗೆ ಸೇರಿ ನಮ್ಮ ಸರ್ಕಾರದ ಕೆಲಸಗಳನ್ನು ನೋಡಿದ್ದಾರೆ. 2014ರಲ್ಲಿ ಒಂದು ಭರವಸೆಯ ವಾತಾವರಣವಿತ್ತು. 2019ರಲ್ಲಿ ಅದು ವಿಶ್ವಾಸವಾಗಿ ಬದಲಾಯ್ತು. ಜನರ ಇಷ್ಟೊಂದು ವಿಶ್ವಾಸ ನನ್ನಲ್ಲಿ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿದೆ. ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ ಎನಿಸಿದೆ.ನಾವು ಎಲ್ಲರಿಗಾಗಿ ಕೆಲಸ ಮಾಡಲು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ಪ್ರಯಾಸ್’ ಅಂದುಕೊಂಡು ನಾವು ಬೀದಿಗಿಳಿದೆವು. ಇದರ ಪರಿಣಾಮ. 2019 ವಿಶ್ವಾಸದ ಕಾಲಘಟ್ಟವಾಯ್ತು. ಈಗ ನಾವು 2024ರಲ್ಲಿ ದೇಶದ ಜನರ ಬಳಿ ಹೋಗ್ತಿದ್ದೇವೆ.
ನಾನು 13-14 ವರ್ಷಗಳ ಕಾಲ ಮುಖ್ಯಮಂತ್ರಿಯಾದ ಅನುಭವ, 10 ವರ್ಷ ಪ್ರಧಾನ ಮಂತ್ರಿಯಾದ ಅನುಭವ, ನಾನು ಮಾಡಿದ ಕೆಲಸಗಳ ಆಧಾರದ ಮೇಲೆ ಹೇಳ್ತೀನಿ.. ಈ ಬಾರಿ ಗ್ಯಾರಂಟಿ ಮೂಲಕ ಬಂದಿದ್ದೇನೆ. ಮೊದಲು ಭರವಸೆ, ಬಳಿಕ ವಿಶ್ವಾಸ, ಈಗ ಗ್ಯಾರಂಟಿ. ಈ ಗ್ಯಾರಂಟಿ ಇದೆಯಲ್ಲ ಇದಕ್ಕೆ ತುಂಬಾ ಜವಾಬ್ದಾರಿ ಬೇಕು. ನನಗನಿಸುತ್ತೆ ಈಗ ವಿಶ್ವದಲ್ಲಿ ಭಾರತ ಭರವಸೆ ಮೂಡಿಸಿದೆ. ಇಡೀ ವಿಶ್ವ ಭಾರತದಲ್ಲಿ 30 ವರ್ಷಗಳ ಕಾಲ ಅಸ್ಥಿರ ಸರ್ಕಾರವನ್ನು ನೋಡಿದೆ. ಅಸ್ಥಿರ ಸರ್ಕಾರಗಳು ದೇಶಕ್ಕೆ ಬಹಳ ನಷ್ಟವನ್ನುಂಟು ಮಾಡಿವೆ. ವಿಶ್ವದಲ್ಲಿ ಭಾರತವನ್ನು ನೋಡುವ ವಿಧಾನ ಬೇರೆ ಆಗಿತ್ತು. ಆಗ ಬೆಲೆ ಇರಲಿಲ್ಲ. ಸ್ಥಿರ ಸರ್ಕಾರ ಏನು ಮಾಡುತ್ತೆ ಎನ್ನುವ ಬದಲಾವಣೆಯನ್ನು ಮತದಾರ ನೋಡಿದ್ದಾನೆ. ನನಗನಿಸುತ್ತೆ, 2024ರ ಚುನಾವಣೆಯಲ್ಲಿ ಮೋದಿ ಸ್ಪರ್ಧೆ ಮಾಡ್ತಿಲ್ಲ. ಬಿಜೆಪಿ ಸ್ಪರ್ಧೆ ಮಾಡ್ತಿಲ್ಲ. ದೇಶದ ಜನರೇ ಮುಂದೆ ಬಂದಿದ್ದಾರೆ. ಅವರ 10 ವರ್ಷಗಳ ಅನುಭವದ ಆಧಾರದಲ್ಲಿ ನಿರ್ಧಾರ ಮಾಡಿದ್ದಾರೆ. ಈ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.
* ಜನರಲ್ಲಿ ಭರವಸೆ ನೋಡುತ್ತಿದ್ದೀರಿ? ಭರವಸೆಗಿಂತ ಹೆಚ್ಚಿನದನ್ನು ನಾನು ನೋಡುತ್ತಿದ್ದೇನೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕೆ ದುರುಪಯೋಗ ಮಾಡಿಕೊಳ್ತಿದ್ದೀರಿ ಎಂದು ವಿಪಕ್ಷದವರು ಹೇಳುತ್ತಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?
ನಾನು ನಿಮಗೆ ಆಭಾರಿಯಾಗಿದ್ದೇನೆ. ನೀವು ಈ ವಿಚಾರವನ್ನು ಗಮನಿಸಿದ್ದೀರಾ. ನಾನು 13 ವರ್ಷಗಳ ಕಾಲ ಭಾರೀ ಬಹುಮತದೊಂದಿಗೆ ಒಂದು ರಾಜ್ಯದಲ್ಲಿ ಸರ್ಕಾರ ನಡೆಸಿದ್ದೇನೆ. ಅದು ಆರ್ಥಿಕತೆ ಆಧಾರದಲ್ಲಿ ಅತ್ಯುತ್ತಮ ರಾಜ್ಯವಾಗಿತ್ತು. ಅಲ್ಲಿ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಕಳೆದ 10 ವರ್ಷಗಳಿಂದ ನಾನು ಇಲ್ಲಿದ್ದೇನೆ. ಜನ ನನ್ನ ಜೀವನವನ್ನು ನೋಡ್ತಿದ್ದಾರೆ. ನನ್ನ ಜೊತೆಗಿದ್ದವರು ನನ್ನ ಜೀವನವನ್ನು ನೋಡ್ತಿದ್ದಾರೆ. ಆ ಜನರು ನನ್ನ ಜೀವನವನ್ನು ನೋಡ್ತಿದ್ದಾರೆ. ಓರ್ವ ನಾಯಕನಾಗಿ ಈ ವಿಚಾರದಲ್ಲಿ ನನ್ನ ಮೌಲ್ಯಗಳಿಗೆ ವಿರುದ್ಧವಾಗಿ ಹೆಜ್ಜೆ ಇಟ್ಟಿಲ್ಲ. ಎರಡನೆಯದು.. ನಾನು ಮೊದಲಿನಿಂದಲೂ ನಿರ್ಧಾರ ಮಾಡಿದ್ದೇನೆ. ನನ್ನ ಸರ್ಕಾರ ನೀತಿ ಆಧಾರಿತವಾಗಿರಬೇಕು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಎಲ್ಲಾ ನೀತಿಗಳು ಬ್ಲ್ಯಾಕ್ ಅಂಡ್ ವೈಟ್‌ನಲ್ಲಿ ಸ್ಪಷ್ಟವಾಗಿರಬೇಕು. ನೀತಿಗಳು ಏನು ಬೇಕಾದರೂ ಆಗಿರಬಹುದು. ಜನರಿಗೆ ಆಲೋಚನೆ ಮಾಡಲು ಹಕ್ಕುಗಳಿವೆ. ನೀತಿಗಳನ್ನು ಮಾಡಿದ ಮೇಲೆ, ಬ್ಲ್ಯಾಕ್ ಅಂಡ್ ವೈಟ್‌ನಲ್ಲಿ ಇದ್ದ ಮೇಲೆ ಯಾರೂ ಅನುಮಾನಿಸುವಂತೆ ಇರಬಾರದು. ಇದು ಸರಿಯಿಲ್ಲ ಎಂದು ಹೇಳಲು ಅವಕಾಶ ಇರಬಾರದು.
ಆಗ ಒಂದು ಕಾಲ ಇತ್ತು. ನೇಮಕಾತಿಯಲ್ಲಿ ಕ್ಲಾಸ್ 3 ಹಾಗೂ 4ಕ್ಕೆ ಸಂದರ್ಶನ ಮಾಡ್ತಿದ್ರು. 30 ಸೆಕೆಂಡ್ ಸಂದರ್ಶನ ಮಾಡ್ತಿದ್ರು. 30 ಸೆಕೆಂಡ್‌ನಲ್ಲಿ ಇವನು ಒಳ್ಳೆಯವನು, ಕೆಟ್ಟವನು ಅಂತಾ ಕಂಡು ಹಿಡಿಯುವಂತಹ ಬುದ್ಧಿವಂತರನ್ನು ನಾನು ಇಡೀ ವಿಶ್ವದಲ್ಲಿ ನೋಡಿಲ್ಲ. ನಾನು ಹೇಳಿದೆ- ಸಂದರ್ಶನ ಬೇಡ, ಜನ ಅವರ ಬಯೋಡೇಟಾ ಪ್ರಕಾರ ಕೆಲಸಕ್ಕೆ ಅರ್ಜಿ ಹಾಕಲಿ. ಕಂಪ್ಯೂಟರ್ ನಿರ್ಧಾರ ಮಾಡಲಿ ಯಾರು ಯೋಗ್ಯರು ಅಂತಾ. ಕಂಪ್ಯೂಟರ್‌ನಲ್ಲಿ ಯಾರು ಮೊದಲು ಬರ್ತಾರೆ ಅವರಿಗೆ ಕೆಲಸ ಕೊಡಿ ಅಂತಾ. ಕೆಲವೊಮ್ಮೆ ಮೂರು-ನಾಲ್ಕು ಜನ ನಮ್ಮ ನಿರೀಕ್ಷೆಗಿಂತ ಕೆಳಗಿನವರು ಆಯ್ಕೆಯಾಗಬಹುದು. ಆದರೆ ನಮಗೆ ಅನಿಸಬೇಕು ನಾವು ಪಾರದರ್ಶಕವಾಗಿ ಕೆಲಸ ಮಾಡ್ತಿದ್ದೇವೆ, ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಂಡು ಕೆಲಸ ಮಾಡಬೇಕು ಅಂತಾ. ಇದರಿಂದಾಗಿ ಕೆಳ ಹಂತದಲ್ಲಿ ಇದರ ಚರ್ಚೆಗಳೇ ಇಲ್ಲ.ಆದಾಯ ತೆರಿಗೆ ಮೌಲ್ಯಮಾಪನದಲ್ಲಿ ತುಂಬಾ ಹೆಚ್ಚು ಸಮಸ್ಯೆಗಳಿದ್ದವು. ಭ್ರಷ್ಟಾಚಾರಕ್ಕೆ ಈ ಸಮಸ್ಯೆಗಳೇ ಸಾಕಲ್ಲ. ನಾವು ಅದನ್ನು ಈಗ ಫಸ್ಟ್ ಕ್ಲಾಸ್ ಮಾಡಿದ್ದೀವಿ. ನಾವು ತಂತ್ರಜ್ಞಾನ ಬಳಕೆ ಮಾಡಿದ್ದೇವೆ.
ಈಗ ಮುಂಬೈನ ಫೈಲ್ ಅನ್ನು ಗುವಾಹಟಿ, ಚೆನ್ನೈ, ಕೊಚ್ಚಿಯಲ್ಲಾದರೂ ನೋಡಬಹುದು. ಯಾರಿಗೂ ಗೊತ್ತೇ ಆಗವುದಿಲ್ಲ. ಮೆರಿಟ್‌ನ ಆಧಾರದಲ್ಲಿ ಫೈಲ್‌ಗಳನ್ನು ನೋಡಲಾಗುತ್ತಿದೆ. ಇದು ಜನರಲ್ಲಿ ವಿಶ್ವಾಸವನ್ನು ಕೂಡ ಹೆಚ್ಚು ಮಾಡಿದೆ. ಹಾಗೇ ಕೆಲಸ ಕೂಡ ಆಗ್ತಿದೆ. ಸೇವಾ ಕ್ಷೇತ್ರದಲ್ಲಿ ನಾವು ತಂತ್ರಜ್ಞಾನ ಬಳಕೆ ಮಾಡಿದ್ದೇವೆ. ಮನುಷ್ಯರ ಮಧ್ಯಪ್ರವೇಶವನ್ನು ನಾವು ಆದಷ್ಟು ಕಡಿಮೆ ಮಾಡೋದಕ್ಕೆ ಪ್ರಯತ್ನ ಮಾಡಿದ್ದೇವೆ. ನಮ್ಮ ಜೆಮ್ ಪೋರ್ಟಲ್ ನೋಡಿ. ಏನಾದ್ರೂ ಖರೀದಿ ಮಾಡ್ಬೇಕಾ? ಜೆಮ್ ಪೋರ್ಟಲ್‌ಗೆ ಹೋಗಿ, ಕಡಿಮೆ ಸಮಯದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಸಿಗುತ್ತವೆ.ಆನ್‌ಲೈನ್ ತಂತ್ರಜ್ಞಾನದಿಂದ ಸಾಕಷ್ಟು ವಿಚಾರಗಳಲ್ಲಿ ಪರಿಣಾಮ ಆಗಿದೆ. ಹಿಂದೆ ಪ್ರಧಾನಮಂತ್ರಿಯೊಬ್ಬರು ಹೇಳಿದ್ದರು. ಜನರಿಗೆ 1 ರುಪಾಯಿ ಕಳಿಸಿದರೆ 15 ಪೈಸೆ ಅವರಿಗೆ ತಲುಪುತ್ತೆ ಅಂತ. ಮಧ್ಯದಲ್ಲಿ ಹಣ ಸೋರಿಕೆ ಆಗ್ತಿತ್ತು ಅಲ್ವಾ? ಈಗ ನಾವು ನೇರವಾಗಿ ಹಣ ವರ್ಗಾವಣೆ ಮಾಡ್ತಿದ್ದೇವೆ.
1 ರುಪಾಯಿ ಕಳಿಸಿದ್ರೆ ಸಂಪೂರ್ಣವಾಗಿ 100 ಪೈಸೆ ಸಹ ತಲುಪುತ್ತೆ. ಸಾಮಾನ್ಯ ಜನರಿಗೆ ಅನಿಸುತ್ತೆ, ನನ್ನ ಹಕ್ಕು ನನಗೆ ಸಿಗುತ್ತಿದೆ ಎಂದು. ಇದೇ ಕಾರಣಕ್ಕೆ ಕೊರೋನಾ ಸಂಕಷ್ಟದ ಮಧ್ಯೆಯೂ ಇಡೀ ದೇಶದ ಜನ ಸರ್ಕಾರದ ಜೊತೆ ನಿಂತಿತ್ತು. ಯಾಕೆಂದರೆ ಅವರಿಗೆ ವಿಶ್ವಾಸವಿತ್ತು. ದೊಡ್ಡ ಸಂಕಷ್ಟ ಬಂದಿದೆ, ನಮ್ಮ ಥರ ಅವರೂ ಕಷ್ಟ ಪಡ್ತಾರೆ, ಇದರಿಂದ ಒಳ್ಳೆದಾಗುತ್ತೆ ಎಂದು.ಇ.ಡಿ ಮತ್ತು ಸಿಬಿಐ ದುರ್ಬಳಕೆ ಆಗ್ತಿದೆ ಎಂಬುದರ ಬಗ್ಗೆ ಏನು ಹೇಳ್ತೀರಾ?ನನಗೆ ಆಶ್ಚರ್ಯವಾಗುತ್ತೆ. ಉದಾಹರಣೆಗೆ ರೈಲ್ವೆ ತೆಗೆದುಕೊಳ್ಳಿ, ರೈಲಿನಲ್ಲಿ ಟಿಕೆಟ್ ಚೆಕ್ ಮಾಡುವ ಒಂದು ಕೆಲಸವಿದೆ. ಅವರ ಬಳಿ ನೀವ್ಯಾಕೆ ಟಿಕೆಟ್ ಚೆಕ್ ಮಾಡ್ತೀರಾ ಅಂದ್ರೆ? ನನ್ನ ಮೇಲೆ ಅನುಮಾನವಿದ್ಯಾ ಅಂದ್ರೆ. ಟಿಕೆಟ್ ಚೆಕ್ ಮಾಡುವವರ ಕೆಲಸ ಟಿಕೆಟ್ ಚೆಕ್ ಮಾಡೋದು.
ಇ.ಡಿ ಸ್ಥಾಪನೆ ಮಾಡಿದ್ದು ಯಾಕೆ? ಸಿಬಿಐ ರಚನೆ ಮಾಡಿದ್ದು ಯಾಕೆ? ಅವುಗಳ ಜವಾಬ್ದಾರಿ ಅದು. ಸರ್ಕಾರ ಸ್ವಾರ್ಥ ರಾಜಕಾರಣಕ್ಕಾಗಿ ಅವನ್ನು ತಡೆಯುವ ಕೆಲಸ ಮಾಡಬಾರದು. ತನಿಖಾಧಿಕಾರಿಗಳಿಗೆ ಅಡ್ಡಿಯಾಗಬಾರದು. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ರೈಲಿನಲ್ಲಿ ಟಿಕೆಟ್ ಚೆಕ್ ಮಾಡಿದಂತೆ ತನಿಖಾ ಸಂಸ್ಥೆಗಳ ಕೆಲಸಕ್ಕೂ ಅವಕಾಶ ಕೊಡಬೇಕು.ಇ.ಡಿ. ಏನೇನು ಕೆಲಸ ಮಾಡಿದೆ? ಇ.ಡಿ. ಬಳಿ ಇರುವ ಪ್ರಕರಣಗಳಲ್ಲಿ ಶೇ.3ರಷ್ಟು ಮಂದಿ ಮಾತ್ರ ರಾಜಕಾರಣಕ್ಕೆ ಸಂಬಂಧಪಟ್ಟವರು. ಶೇ.97ರಷ್ಟು ಜನರಿದ್ದಾರಲ್ಲ, ಕೆಲವರು ಭಯದಿಂದ ಅವಿತುಕೊಂಡಿದ್ದಾರೆ? ಕೆಲವರು ಮನೆಯಲ್ಲಿದ್ದಾರೆ. ಕೆಲವರು ಜೈಲಿನಲ್ಲಿದ್ದಾರೆ. ಅವರ ಬಗ್ಗೆ ಯಾರೂ ಚರ್ಚೆಯನ್ನೇ ಮಾಡುವುದಿಲ್ಲ.ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡಲು ಯಾವ ಸಂಸ್ಥೆಯನ್ನು ಹುಟ್ಟುಹಾಕಿದೆಯೋ ಅದನ್ನೆಲ್ಲಾ ಹಳೇ ಸರ್ಕಾರಗಳು ಮಾಡಿದ್ದು, ನಾವು ಮಾಡಿದ್ದಲ್ಲ. ಅವರು ಕೆಲಸ ಮಾಡಿಲ್ಲ ಅಂದ್ರೆ ಪ್ರಶ್ನೆ ಮಾಡಬೇಕು. ನಾವು ಕೆಲಸ ಮಾಡಿದ್ರೆ ಪ್ರಶ್ನೆ ಮಾಡ್ತಿದ್ದಾರೆ. ಇದರಲ್ಲಿ ಲಾಜಿಕ್ ಅರ್ಥ ಆಗ್ತಿಲ್ಲ. ಸರಿ.. ಮೂರು ಪರ್ಸೆಂಟ್ ಜನರ ಬಳಿಗಷ್ಟೇ ಇ.ಡಿ ಹೋಗಿರೋದು.
ಇನ್ನೂ 97 ಪರ್ಸೆಂಟ್ ಇದ್ದಾರಲ್ಲ ಅದು ಬೇರೆ ಮಾತು. ಭ್ರಷ್ಟಾಚಾರ ಮಾಡಿ ಹಣ ಹೊಡೆದು ಒಂದು ಬ್ರಿಡ್ಜ್ ನಿರ್ಮಿಸಿದ್ದಾರೆ ಎಂದುಕೊಳ್ಳಿ. ಭ್ರಷ್ಟಾಚಾರ ಮಾಡೋಕೆ ಅಂತಾನೆ ಕೆಲವರಿಗೆ ಟೆಂಡರ್ ಕೊಟ್ರು, ಅವರು ಬ್ರಿಡ್ಜ್ ಕಟ್ಟಿದ್ರು, ಕೆಲ ವರ್ಷಗಳಾದ್ಮೇಲೆ ಆ ಸೇತುವೆ ಕುಸಿದು ಬಿತ್ತು. ನೀವು ಹೇಳಿ ಎಷ್ಟು ನಷ್ಟವಾಗುತ್ತೆ ಅಂತ.ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ತುಂಬಾ ಕಷ್ಟಪಟ್ಟು ಪರೀಕ್ಷೆ ಪಾಸ್ ಮಾಡಿದ್ದಾನೆ. ಅವನ್ಯಾಕೆ ಭ್ರಷ್ಟಾಚಾರ ಮಾಡಲ್ಲ ಅಂದ್ರೆ ಅವನಿಗೆ ಯಾರ ಬೆಂಬಲವಿಲ್ಲ. ಈ ಕಾರಣಕ್ಕೆ ಅವನಿಗೆ ಹಕ್ಕು ಸಿಕ್ಕಿಲ್ಲ ಇನ್ಯಾರಿಗೋ ಸಿಗುತ್ತೆ ಅಂದ್ರೆ, ಯಾರೋ ಅರ್ಹತೆಯಿಲ್ಲದವನಿಗೆ ಕೆಲಸ ಸಿಗುತ್ತೆ ಅಂದರೆ ಏನರ್ಥ. ಇಂಥಾ ಜನರ ಅಸಂತೋಷ ದೇಶದಲ್ಲಿ ತುಂಬಾ ದಿನ ನಡೆಯಲ್ಲ.ಮತ್ತೊಂದು, 2014ಕ್ಕೆ ಮೊದಲು ಇ.ಡಿ. ಪಿಎಂಎಲ್ಎ ಅಡಿಯಲ್ಲಿ ದೇಶದಲ್ಲಿ 1800ಕ್ಕೂ ಕಡಿಮೆ ಕೇಸ್‌ಗಳನ್ನು ಹಾಕಿತ್ತು. ನೋಡಿ. ಆಗ ಅವರು ಕೆಲಸ ಮಾಡಬೇಕಿತ್ತು. ಅವರ ಸರ್ಕಾರಗಳ ಮೇಲೆಯೇ ಭ್ರಷ್ಟಾಚಾರದ ಆರೋಪಗಳಿದ್ದವು. 1800 ಕೇಸ್‌ಗಳನ್ನಷ್ಟೇ ಮಾಡಿದ್ರು. 2014ರ ನಂತರ 10 ವರ್ಷದಲ್ಲಿ ನಮ್ಮ ಸರ್ಕಾರದಲ್ಲಿ ಇ.ಡಿ. 5000ಕ್ಕೂ ಹೆಚ್ಚು ಕೇಸ್‌ಗಳನ್ನು ದಾಖಲಿಸಿದೆ.
ಇದು ಇ.ಡಿ. ಕಾರ್ಯಕ್ಷಮತೆ. 2014ಕ್ಕೂ ಮೊದಲು ಕೇವಲ 84 ದಾಳಿ ಮಾಡಿದ್ದರು ಅಷ್ಟೇ. ಎಷ್ಟೊಂದು ಇಲಾಖೆಗಳಿದ್ವು ಅಲ್ವಾ? 2014ರ ನಂತರ 7 ಸಾವಿರ ಇ.ಡಿ. ದಾಳಿ ಮಾಡಲಾಗಿದೆ. 2014ಕ್ಕೂ ಮೊದಲು ಅವರ ಹತ್ತು ವರ್ಷದಲ್ಲಿ 5 ಸಾವಿರ ಕೋಟಿ ಆಸ್ತಿಗಳನ್ನಷ್ಟೇ ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ರು. 2014ರ ನಂತರ ಒಂದು ಲಕ್ಷ ಕೋಟಿ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಅದು ದೇಶದ ಸಂಪತ್ತು. ಕಾರ್ಯಕ್ಷಮತೆಯೇ ಇ.ಡಿ.ಯ ಟ್ರ್ಯಾಕ್ ರೆಕಾರ್ಡ್. ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡ್ತಿದ್ದಾರೆ. ಈ ದೇಶದಿಂದ ಭ್ರಷ್ಟಾಚಾರ ಹೊರಗೆ ಹಾಕಬೇಕು ಅಂದರೆ, ಯಾವ ಸಂಸ್ಥೆಯನ್ನು ಅದಕ್ಕಾಗಿ ಮಾಡಿದ್ದಾರೋ ಅವರಿಗೆ ಕೆಲಸ ಮಾಡಲು ನಾವು ಬಿಡಬೇಕು. ರಾಜಕಾರಣಿಗಳು ಇಂಥಾ ಸಂಸ್ಥೆಗಳ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬಾರದು. ನಾನು ಪ್ರಧಾನ ಮಂತ್ರಿಯಾಗಿದ್ದೀನಿ ಇ.ಡಿ.ಯ ಕೆಲಸವನ್ನು ನಿಲ್ಲಿಸಲು ನನಗೆ ಯಾವುದೇ ಹಕ್ಕಿಲ್ಲ.
ಸ್ಪಷ್ಟವಾಗಿ ಕಾಣಿಸುತ್ತಿದೆ, ಈ ಬಾರಿ ದಕ್ಷಿಣದ ರಾಜ್ಯಗಳನ್ನು ಹೆಚ್ಚಾಗಿ ಕೇಂದ್ರೀಕರಿಸಿದ್ದೀರಿ. ಕರ್ನಾಟಕ ಚುನಾವಣೆಯಲ್ಲೂ ಹೆಚ್ಚು ಪ್ರಚಾರ ಮಾಡಿದ್ದಿರಿ. ಆದ್ರೆ ಪರಿಣಾಮ ಬೀರಲಿಲ್ಲ. ತೆಲಂಗಾಣದಲ್ಲೂ ಹಾಗೇ ಆಯ್ತು. 131 ಸ್ಥಾನಗಳ ಪೈಕಿ 50ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇಟ್ಟಿದ್ದೀರಾ.. ಸಾಧ್ಯವಾಗುತ್ತಾ?ನಮ್ಮ ದೇಶದಲ್ಲಿ ಮೊದಲಿನಿಂದಲೂ ಒಂದು ಅಜೆಂಡಾ ಮಾಡಿಬಿಟ್ಟಿದ್ದರು. ಬಿಜೆಪಿ ಮೇಲ್ವರ್ಗದ ಪಕ್ಷ ಅಂತ. ನಿಜ ಏನೆಂದರೆ ಬಿಜೆಪಿಯಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿಯವರಿದ್ದಾರೆ, ಅತಿ ಹೆಚ್ಚು ಪರಿಶಿಷ್ಟ ಪಂಗಡದವರಿದ್ದಾರೆ, ಅತಿ ಹೆಚ್ಚು ಒಬಿಸಿಯವರಿದ್ದಾರೆ. ನನ್ನ ಸಂಪುಟದಲ್ಲಿ ಅತಿ ಹೆಚ್ಚು ಒಬಿಸಿಯವರಿದ್ದಾರೆ. ಆಮೇಲೆ ಹೇಳಿದರು- ಬಿಜೆಪಿ ನಗರವಾಸಿಗಳ ಪಕ್ಷ ಎಂದು. ಈಗ ನಮ್ಮ ಪಕ್ಷ ಹೇಗಿದೆ ಅಂದ್ರೆ ಹಳ್ಳಿಯ ಜನರೇ ಹೆಚ್ಚಿದ್ದಾರೆ. ಬಿಜೆಪಿ ಸ್ವಭಾವದ ಬಗ್ಗೆ ಏನ್ ಹೇಳಿದ್ದರು ಅಂದ್ರೆ, ಅದು ಸಾಂಪ್ರದಾಯಿಕ ಮನೋಭಾವದ ಪಕ್ಷ, ಅದು ಹೊಸದಾಗಿ ಏನೂ ಯೋಚಿಸೋದಿಲ್ಲ ಎಂದು. ಈಗ ಡಿಜಿಟಲ್ ಆಂದೋಲನದ ನೇತೃತ್ವವನ್ನು ಇಡೀ ವಿಶ್ವದಲ್ಲಿ ಯಾರು ವಹಿಸಿದ್ದಾರೆ?
ಬಿಜೆಪಿ ನೇತೃತ್ವದ ಸರ್ಕಾರ ಈ ಕೆಲಸ ಮಾಡ್ತಿದೆ. ಅವರು ಈ ರೀತಿಯ ಭ್ರಮೆಯನ್ನ ಸೃಷ್ಟಿಸಿದ್ರು.. ಅದು ತಪ್ಪು.ತೆಲಂಗಾಣ ನೋಡಿ, ಮೊದಲು ಅಲ್ಲಿ ನಮ್ಮ ವೋಟ್‌ಶೇರ್ ಎಷ್ಟಿತ್ತು? ಈಗ ಅಲ್ಲಿ ನಮ್ಮ ವೋಟ್ ಶೇರ್ ಎರಡು ಪಟ್ಟು ಹೆಚ್ಚಾಗಿದೆ. 2019ರಲ್ಲಿ ಲೋಕಸಭೆ ಎಲೆಕ್ಷನ್ ಆಯ್ತಲ್ಲ. ಎಷ್ಟೋ ಜನರಿಗೆ ಗೊತ್ತಿಲ್ಲ, ದಕ್ಷಿಣ ಭಾರತದಲ್ಲಿ 2019ರಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷ. ಅತಿ ಹೆಚ್ಚು ಸಂಸದರು ಬಿಜೆಪಿಯವರೇ. 2024ರಲ್ಲಿ ನನಗೆ ಅನಿಸುತ್ತೆ ವೋಟ್ ಶೇರ್ ಕೂಡ ಹೆಚ್ಚಾಗುತ್ತೆ. ಜತೆಗೆ ಸೀಟು ಕೂಡ ಹೆಚ್ಚಾಗುತ್ತೆ.ಕಾಂಗ್ರೆಸ್‌ನ ಯುವರಾಜ ಉತ್ತರದಿಂದ ಓಡಿ ಬಂದು ದಕ್ಷಿಣದಲ್ಲಿ ಆಶ್ರಯ ಪಡೆದಿದ್ದಾರೆ. ವಯನಾಡಿಗೆ ಬಂದಿದ್ದಾರೆ. ಈ ಬಾರಿ ಅವರ ಪ್ಲ್ಯಾನ್ ಏನು ಅಂದರೆ, 26ನೇ ತಾರೀಖು ವಯನಾಡು ಮತದಾನ ಮುಗಿದ ಮೇಲೆ, ಅವರು ಇನ್ನೊಂದು ಕಡೆ ಸ್ಪರ್ಧೆ ಘೋಷಣೆ ಮಾಡಲಿದ್ದಾರೆ.
ಅವರು ಮತ್ತೊಂದು ಕ್ಷೇತ್ರಕ್ಕಾಗಿ ಹುಡುಕಾಟ ಶುರು ಮಾಡಿದ್ದಾರೆ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಒಂದು ಸಲ ಪಾರ್ಲಿಮೆಂಟ್‌ನಲ್ಲಿ ನಾನೇ ಘೋಷಣೆ ಮಾಡಿದ್ನಲ್ಲ. ಅವರ ದೊಡ್ಡ ದೊಡ್ಡ ನಾಯಕರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ರಾಜ್ಯಸಭೆಗೆ ಹೋಗ್ತಾರೆ ಅಂತ. ನಾನು ಹೇಳಿದ ಒಂದು ತಿಂಗಳ ನಂತರ ಅವರ ದೊಡ್ಡ ನಾಯಕರು ರಾಜ್ಯಸಭೆಗೆ ಬಂದ್ರು, ಲೋಕಸಭೆಯನ್ನ ತ್ಯಜಿಸಿದ್ರು. ಅವರು ಸೋಲನ್ನು ಮೊದಲೇ ಒಪ್ಪಿಕೊಂಡಿದ್ದಾರೆ.ನನಗೆ ಈ ಬಾರಿ ನಂಬಿಕೆ ಇದೆ. ಶ್ರೀರಾಮ ಮಂದಿರದ ಅನುಷ್ಠಾನದ ವೇಳೆ ದಕ್ಷಿಣ ಭಾರತಕ್ಕೆ ಹೋದಾಗ ಜನರಲ್ಲಿದ್ದ ಪ್ರೀತಿ, ವಿಶ್ವಾಸವನ್ನು ನಾನು ನೋಡಿದ್ದೇನೆ. ಅದು ಅಭೂತಪೂರ್ವವಾಗಿತ್ತು. ದಕ್ಷಿಣ ಭಾರತದ ಬಗ್ಗೆ ಇರುವ ಕಟ್ಟುಕಥೆಗಳನ್ನ ಜನ ಹೊಡೆದು ಹಾಕುತ್ತಾರೆ. ಅತೀ ಶೀಘ್ರದಲ್ಲೇ ನಮ್ಮ ಸಂಸದರಿಗೆ ಸೇವೆ ಮಾಡಲು ಅವಕಾಶ ಸಿಗಲಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ನಮ್ಮ ಸಂಸದರು ನನ್ನ ಜೊತೆ ಕೆಲಸ ಮಾಡಲು ಬರ್ತಾರೆ. ಈ ಬಾರಿ ವೋಟ್ ಶೇರ್ ಅತಿ ಹೆಚ್ಚಾಗಲಿದೆ.
* ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರು ಹೆಚ್ಚು ಅಧಿಕಾರ ಚಲಾಯಿಸ್ತಿದ್ದಾರೆ ಎಂಬ ಚರ್ಚೆ ಇದೆ? ಇದರ ಬಗ್ಗೆ ಏನು ಹೇಳ್ತೀರಾ? ಯಾಕೆ ಈ ರೀತಿ ಆಗ್ತಿದೆ?
ರಾಜ್ಯಪಾಲರ ವಿಚಾರದಲ್ಲಿ ನಾನು ನಿಮಗೆ ಮೊದಲು ಒಂದು ಮಾತು ಹೇಳಬೇಕು. ಅವರಿಗೆ ಕೇಳಿ 5-6 ದಶಕಗಳ ಕಾಲ ಆಡಳಿತ ಮಾಡಿದ್ರಲ್ಲ. ಜಗತ್ತಿನ ಶತ್ರು ರಾಷ್ಟ್ರದಲ್ಲೂ ನಮ್ಮದು ರಾಯಭಾರ ಇರುತ್ತೆ ಅಲ್ವಾ. ಆ ರಾಯಭಾರಿಗಳ ಸಂಪೂರ್ಣ ಜವಾಬ್ದಾರಿ ಆ ರಾಷ್ಟ್ರದ್ದಾಗಿರುತ್ತೆ. ಅವರ ಸುರಕ್ಷತೆ ಹಾಗೂ ಸಂಪೂರ್ಣ ಜವಾಬ್ದಾರಿ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತೆ. ಶತ್ರುರಾಷ್ಟ್ರದಲ್ಲೂ ಕೂಡ ನಮ್ಮ ರಾಯಭಾರಿಗಳಿಗೆ, ನಮ್ಮ ತಂಡಕ್ಕೆ ಸುರಕ್ಷತೆ ಹಾಗೂ ಗೌರವ ಕೊಡ್ತಾರೆ. ಆದರೆ ನಮ್ಮದೇ ದೇಶದಲ್ಲಿ ನಮ್ಮದೇ ರಾಜ್ಯದಲ್ಲಿ ಸಂವಿಧಾನತ್ಮಾಕವಾಗಿ ರಚನೆಯಾಗಿರುವ ರಾಜ್ಯಪಾಲರ ಹುದ್ದೆಗೆ ಗೌರವ ಹಾಗೂ ರಕ್ಷಣೆ ನೀಡೋದು ಆಯಾ ರಾಜ್ಯಗಳ ಕರ್ತವ್ಯ ಅಲ್ಲವೇ..? ಇದು ಹೇಗೆ ನಡೆಯುತ್ತೆ..? ನೀವೇ ಕಲ್ಪನೆ ಮಾಡಿಕೊಳ್ಳಿ,
ಕೇರಳದ ರಾಜ್ಯಪಾಲರು ಏರ್‌ಪೋರ್ಟ್‌ಗೆ ಹೋಗ್ತಿದ್ದಾಗ ಎಡಪಂಥೀಯರು ಸೇರಿ ಗಲಾಟೆ ಮಾಡಿದ್ರೆ, ಅದು ಆ ರಾಜ್ಯ ಸರ್ಕಾರಕ್ಕೆ ಶೋಭೆ ಬರುತ್ತಾ? ನಾನು ಹಲವು ಬಾರಿ ಅಲ್ಲಿಗೆ ಹೋದಾಗ, ನಮ್ಮ ರಾಜ್ಯಪಾಲರು ತಮ್ಮ ಸಮಸ್ಯೆ ಬಗ್ಗೆ ಹೆಚ್ಚು ಹೇಳಲಿಲ್ಲ. ಆರಿಫ್ ಸಾಬ್ ಅವರಿಗೆ ಬಜೆಟ್ ಫಂಡ್ ಕೂಡ ಸಿಕ್ಕಿಲ್ಲ. ಕೇರಳದಲ್ಲಿ ರಾಜ್ಯಪಾಲರಿಗೆ ಊಟವನ್ನು ಕೂಡ ನಿಲ್ಲಿಸಿದ್ದಾರೆ. ಅವರ ಮೇಲಿನ ರಾಜಕೀಯ ಸಿಟ್ಟಿನ ಕಾರಣಕ್ಕೆ ಅವರ ವಿದ್ಯುತ್ ಬಂದ್ ಮಾಡಿದರೆ ಏನಾಗುತ್ತೆ? ಮಹಾರಾಷ್ಟ್ರದಲ್ಲಿ ಒಮ್ಮೆ ರಾಜ್ಯಪಾಲರಿಗೆ ವಿಮಾನ, ಹೆಲಿಕಾಪ್ಟರ್ ಯಾವುದೂ ಕೊಡಲಿಲ್ಲ. ಮೊದಲೇ ನಿರ್ಧರಿತ ಕಾರ್ಯಕ್ರಮಗಳನ್ನು ಕೊನೇ ಹಂತದಲ್ಲಿ ರದ್ದು ಮಾಡುತ್ತಿದ್ದರು. ತಮಿಳುನಾಡಿನಲ್ಲಿ ರಾಜ್ಯಪಾಲರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುತ್ತಾ?
ತ್ರಿಪುರ ಬದಲಾಗಿದೆ, ಕೇರಳ ಬದಲಾವಣೆಯತ್ತ ದಾಪುಗಾಲಿಡುತ್ತಿದೆ, ಸಂದರ್ಶನದಲ್ಲಿ ಮೋದಿ ನೀಡಿದ್ರು ಸುಳಿವು!
ಯಾರೇ ಆಗಲಿ ಸಂವಿಧಾನದ ನಿಯಮದಂತೆ ನಡೆದುಕೊಳ್ಳಬೇಕಲ್ವಾ? ನಾನು ಗುಜರಾತ್‌ನಲ್ಲಿದ್ದಾಗ ನನಗೆ ಎಲ್ಲಾ ಕಾಂಗ್ರೆಸ್‌ನ ರಾಜ್ಯಪಾಲರೇ ಇದ್ದರು. ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅವರು ನನಗೆ ಗೌರವ ಕೊಡ್ತಿದ್ರು. ನಾನು ಅವರಿಗೆ ಗೌರವ ಕೊಡ್ತಿದ್ದೆ. ಇದು ವರ್ಷಗಳ ಕಾಲ ನಡೆದುಬಂತು. ಏನಾದರೂ ತಪ್ಪು ನಡೆದರೆ ಸಂವಿಧಾನಿಕವಾಗಿ ಅವರಿಗೆ ಅಧಿಕಾರವಿದೆ ಕೇಳಲಿ.ವಸತಿ ಯೋಜನೆಯಲ್ಲಿ ನಿಮ್ಮ ಫೋಟೋವನ್ನು ಮನೆ ಮುಂದೆ ಹಾಕೋದು ಕಡ್ಡಾಯವಾ? ಇದು ಫೋಟೋ ಪ್ರಶ್ನೆಯಲ್ಲ. ಇಲ್ಲಿ ಪ್ರಶ್ನೆ ಏನೆಂದರೆ ಯೋಜನೆಯ ಹೆಸರು. ಪಿಎಂ ಆವಾಸ್ ಯೋಜನಾ. ಅದರ ಒಂದು ಲೋಗೋ ಇದೆ. ಅದರ ಗುರುತಿಗಾಗಿ. ಇದರ ಬಜೆಟ್ ಕೇಂದ್ರ ಸರ್ಕಾರ ಮಾಡುತ್ತೆ. ಅದು ಸಂಸತ್ ಮುಖಾಂತರ ಹೋಗುತ್ತೆ. ಯೋಜನೆ ಹಾಗೂ ವೆಚ್ಚ ಅದರ ಹೆಸರಲ್ಲೇ ಮಾಡಲಾಗುತ್ತೆ.
ನಾವು ಏನಾದರೂ ಬೇರೆ ಹೆಸರು ಇಟ್ಟರೆ, ಆಗ ಆಡಿಟ್ ರಿಪೋರ್ಟ್ ಬರುತ್ತೆ. ಪಿಎಂ ಆವಾಸ್ ಯೋಜನೆಯೇ ಇಲ್ಲ, ನೀವು ದುಡ್ಡು ಹೇಗೆ ಕೊಟ್ರಿ ಅಂತ ಕೇಳ್ತಾರೆ. ನಾನು ಸಿಎಜಿಗೆ ಏನಂತಾ ರಿಪೋರ್ಟ್ ಕೊಡಲಿ. ಅದು ನನ್ನ ಜವಾಬ್ದಾರಿ ಇದೆ. ನನಗೆ ಸಂಸತ್ ಖರ್ಚು ಮಾಡೋಕೆ ಅವಕಾಶ ಕೊಟ್ಟಿದೆ. ನಾನು ಏನೇ ಖರ್ಚು ಮಾಡಿದ್ರು ಸಿಎಜಿ ಲೆಕ್ಕ ಹಾಕುತ್ತೆ. ಯೋಜನೆಗಳನ್ನ ನನ್ನ ಹೆಸರಲ್ಲಿ ಕರೆಯೋದಿಲ್ಲ. ಅದೇನು ವ್ಯಕ್ತಿಯ ಹೆಸರಲ್ಲ. ಪಿಎಂ ಯಾರು ಬೇಕಾದ್ರೂ ಆಗಬಹುದು.ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನೇ ತೆಗೆದುಕೊಳ್ಳಿ. ಅಟಲ್ ಜೀ ಸರ್ಕಾರ ಇದ್ದಾಗ ಮಾಡಿದ್ದು. ಬಳಿಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ರು. ಅವರಿದ್ದಾಗಲೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ. ಬದಲಾವಣೆ ಮಾಡುವ ಅವಶ್ಯಕತೆ ಬರಲಿಲ್ಲ. ಪಿಎಂ ಅನ್ನೋದು ಓರ್ವ ವ್ಯಕ್ತಿಯಲ್ಲ. ಇದನ್ನ ವಿರೋಧ ಮಾಡ್ತಾರೆ ಅಂದ್ರೆ, ಅವರಲ್ಲಿ ನಿರಾಸೆ ಹಾಗೂ ದ್ವೇಷ ಎಷ್ಟಿದೆ ಅನ್ನೋದು ತಿಳಿಯುತ್ತೆ.