ನಮೋ 70: ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ!

By Kannadaprabha News  |  First Published Sep 17, 2020, 11:54 AM IST

ಪಿಎಂ ಮೋದಿಗೆ ಎಪ್ಪತ್ತನೇ ಹುಟ್ಟುಹಬ್ಬದ ಸಂಭ್ರಮ| ನವಭಾರತಕ್ಕೆ ನರೇಂದ್ರ ಮೋದಿ ಎಂಬ ಹೆದ್ದಾರಿ| ಅಸಾಧ್ಯವನ್ನೂ ಸಾಧ್ಯವಾಗಿಸುವ, ಸವಾಲಿನಲ್ಲೇ ಅವಕಾಶ ಹುಡುಕಿಕೊಳ್ಳುವ ದಕ್ಷ ನಾಯಕ


ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ

ನರೇಂದ್ರ ಮೋದಿಯವರು 70ನೇ ವರ್ಷ ಪೂರೈಸುತ್ತಿದ್ದಾರೆ. ಬಿಜೆಪಿಯ ನಾವೆಲ್ಲರೂ ಇದನ್ನು ಸೇವಾ ಸಪ್ತಾಹ ಎಂದು ಆಚರಿಸುತ್ತಿದ್ದೇವೆ. ಭಾರತದ ರಾಜಕೀಯವನ್ನು ಅಧಿಕಾರಕ್ಕಾಗಿ ಬಾಯಿಬಿಡುವವರಿಂದ ಬಿಡಿಸಿ ಸೇವಾ ಮತ್ತು ಸಾರ್ವಜನಿಕ ಸೇವೆಯನ್ನಾಗಿ ದೃಢವಾಗಿ ಮಾರ್ಪಡಿಸಿದ ನಾಯಕನಿಗೆ ಇದೊಂದು ಅತ್ಯಂತ ಸೂಕ್ತ ಕೊಡುಗೆಯಾಗಿದೆ.

Latest Videos

undefined

2014ರಲ್ಲಿ ಪಕ್ಷೇತರ ಸಂಸದನಾಗಿದ್ದ ನಾನು ನರೇಂದ್ರ ಮೋದಿ ಭಾರತದ ಪ್ರಧಾನಿ ಹುದ್ದೆಗೆ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದೆ. ‘ಪಾರದರ್ಶಕವಾದ, ನಿರ್ಣಾಯಕ ನೀತಿಗಳು ಮತ್ತು ಆಡಳಿತ ನಿರ್ವಹಣೆಯ ಕ್ರಿಯೆಗಳ ಮೂಲಕ ಭಾರತವನ್ನು ಸದ್ಯದ ಕೆಸರಿನಿಂದ ಹೊರತರುವ ಸಾಮರ್ಥ್ಯ ಮತ್ತು ದೃಢನಿಶ್ಚಯ ಎರಡೂ ಇರುವ ನಾಯಕ ಮೋದಿ’ ಎಂಬುದು ನನ್ನ ಪ್ರತಿಪಾದನೆಯಾಗಿತ್ತು. ಮೋದಿ ಒಬ್ಬ ಕ್ರಿಯಾಶೀಲ ವ್ಯಕ್ತಿ ಮತ್ತು ಸವಾಲುಗಳನ್ನು ಸ್ವೀಕರಿಸುವ ಛಾತಿಯುಳ್ಳವರು. ಅಭಿವೃದ್ಧಿ ಹಾಗೂ ಸುರಕ್ಷತೆಯನ್ನು ಸಮಾನ ಅವಕಾಶಗಳೊಂದಿಗೆ ಎಲ್ಲ ನಾಗರಿಕರಿಗೆ- ಜಾತಿ, ಧರ್ಮ ಅಥವಾ ಲಿಂಗವನ್ನು ನೋಡದೆ- ಹಂಚುವ ಬದ್ಧತೆ ಹೊಂದಿದವರು. ಇವತ್ತು ಮೋದಿಯವರು ಭಾರತದ ಅತ್ಯಂತ ಯಶಸ್ವಿ ರಾಜಕೀಯ ನಾಯಕರು- ಏಕೆಂದರೆ, 2014ರಲ್ಲಿ ಜನರು ಅವರಿಂದ ಏನನ್ನು ನಿರೀಕ್ಷಿಸಿದ್ದರೋ, ಆ ಭಾರತವನ್ನು ಪರಿವರ್ತನೆ ಮಾಡುವ ನಿರೀಕ್ಷೆಗಳೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ.

ನಮ್ಮ ಪ್ರಧಾನ ಮಂತ್ರಿ ಅತಿ ಹೆಚ್ಚು ಇಷ್ಟಪಡುವ ಮತ್ತು ಗೌರವಿಸುವ ಮೌಲ್ಯ ಯಾವುದು ಎಂದು ನನ್ನನ್ನು ಬಹಳ ಜನರು ಕೇಳುತ್ತಾರೆ. ಭಾರತ ಮೊದಲು ಎಂಬ ಧ್ಯೇಯ ಮತ್ತು ಪರಿವರ್ತನಶೀಲ ಭಾರತದ ಕುರಿತ ಅವರ ಅವಿಶ್ರಾಂತವಾದ ಬದ್ಧತೆಯೇ ಅವರು ಅತಿ ಹೆಚ್ಚು ಇಷ್ಟಪಡುವ ಮೌಲ್ಯ ಎಂಬುದು ನನ್ನ ನಂಬಿಕೆ. ಈ ಕಾರಣಕ್ಕಾಗಿಯೇ ಅವರು ಬಹುತೇಕ ಭಾರತೀಯರಲ್ಲಿ ಮತ್ತು ಸುತ್ತಲಿನ ಜಗತ್ತಿನಲ್ಲಿ ತಮ್ಮ ನಾಯಕತ್ವದ ಬಗ್ಗೆ ಅದಮ್ಯ ಪ್ರಮಾಣದ ವಿಶ್ವಾಸ ಹುಟ್ಟುಹಾಕಿದ್ದಾರೆ. ಇದನ್ನು ಚುನಾವಣೆಗಳು ಮತ್ತೆ ಮತ್ತೆ ತೋರಿಸಿವೆ. ಈ ವಿಶ್ವಾಸ ಎನ್ನುವುದು ದಿನ ಬೆಳಗಾಗುವುದರೊಳಗೆ ಆಗಿಬಿಡುವುದಲ್ಲ. 6 ವರ್ಷಗಳ ಕೆಲಸ ಮತ್ತು ಫಲಿತಾಂಶವು ಇಂತಹದ್ದೊಂದು ವಿಶ್ವಾಸವನ್ನು ಬೆಳೆಸಿದೆ. ಕಠಿಣ ಪರಿಶ್ರಮ, ಸಾಧನೆ, ವಿಶ್ವಾಸ ಮತ್ತು ಪ್ರಾಮಾಣಿಕತೆ ಎಂಬುದು ಬಹಳ ಹಿಂದೆಯೇ ಸರ್ಕಾರದ ರೂಢಿಯಿಂದ ಮಾಯವಾಗಿಹೋಗಿದ್ದು, ಈಗ ಮರಳಿ ಬಂದಿವೆ. ಜನರು ಅವರಲ್ಲಿಟ್ಟಿರುವ ಇಂಥ ಅಚಲವಾದ ವಿಶ್ವಾಸದಿಂದಾಗಿಯೇ ಭಾರತವು ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಕ್ಕೆ ನೆರವಾಗಿದೆ. ಮೋಸಗಾರ ಚೀನಾ ನಮ್ಮ ಗಡಿಯಲ್ಲಿ ವಿಸ್ತರಣಾವಾದಿ ತಂತ್ರಗಳನ್ನು ನಡೆಸಿರುವಾಗಲೂ ಭಾರತ ಮೊದಲು ಎನ್ನುವ ಅವರ ಬದ್ಧತೆಯ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ.

ಮೊದಲ ಭೇಟಿಯಲ್ಲೇ ವಿಶ್ವಾಸ

ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ನಾನು ಅವರನ್ನು ಮೊದಲ ಬಾರಿ ಭೇಟಿಯಾಗಿದ್ದೆ. ಅತ್ಯಂತ ಕಠಿಣವಾದ ಸಮಸ್ಯೆಗಳನ್ನೂ ಪರಿಹರಿಸುವ ಮತ್ತು ಪರಿವರ್ತನೆಯನ್ನು ತರುವ ಅವರ ತಣ್ಣಗಿನ ದೃಢನಿಶ್ಚಯ ಆಗಲೂ ಸ್ಪಷ್ಟವಾಗಿತ್ತು ಮತ್ತು ಈಗಂತೂ ಎಂದಿಗಿಂತ ಬಲಿಷ್ಠವಾಗಿ ಉಳಿದುಕೊಂಡು ಬಂದಿದೆ. ನಾನು ಆಗ ಸ್ವತಂತ್ರ ಸಂಸದನಾಗಿದ್ದೆ. ಮೊದಲ ಬಾರಿ ಸಂಸದನಾಗಿದ್ದ ನಾನು ಸ್ಪೆಕ್ಟ್ರಂ ಹಗರಣಗಳು, ಕೆಲವೇ ಕುಟುಂಬಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿರುವುದು, ಬ್ಯಾಂಕುಗಳ ಲೂಟಿ ಮತ್ತು ಅವುಗಳ ಎನ್‌ಪಿಎ ಹೆಚ್ಚುತ್ತಿರುವುದು ಇವೇ ಮೊದಲಾದ ವಿಷಯಗಳನ್ನು ಹಿಡಿದು ಹೋರಾಟ ಮಾಡುತ್ತಿದ್ದೆ. ಅಂತರ್ಜಾಲ ಆಡಳಿತವನ್ನು ಬದಲಾಯಿಸುವ ಸರ್ಕಾರದ ಪ್ರಯತ್ನಗಳ ವಿರುದ್ಧ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕಾಗಿ, ನಿವೃತ್ತ ಯೋಧರಿಗಾಗಿ ಒಂದು ಶ್ರೇಣಿ ಒಂದು ಪಿಂಚಣಿ ಮೊದಲಾದವುಗಳಿಗೆ ದೊಡ್ಡದಾಗಿ ಹೋರಾಟ ಮಾಡುತ್ತಿದ್ದೆ. ಇವುಗಳನ್ನು ಪರಿಹರಿಸುವುದು ಅಗತ್ಯವೆಂದು ಯಾರೊಬ್ಬರೂ ಭಾವಿಸದೇ ಇದ್ದುದರಿಂದ ನಾನೊಬ್ಬ ವಿಫಲ ಹೋರಾಟಗಾರನೆಂಬ ಭಾವನೆ ಆಗ ನನ್ನಲ್ಲಿ ಮೂಡಿತ್ತು. ಆದರೆ ಪ್ರಧಾನಿ ಮೋದಿಯವರನ್ನು ಮೊದಲ ಬಾರಿ ಭೇಟಿ ಮಾಡಿದಾಗ ನನ್ನ ಹಣೆಬರಹ ಹಾಗೆಯೇ ದೇಶದ ಹಣೆಬರಹ ಕೂಡ ಬದಲಾಗಲಿದೆ, ಬದಲಾಗಬಹುದು ಎಂದು ವಿಶ್ವಾಸ ಮೂಡುವುದಕ್ಕೆ ಆರಂಭವಾಯಿತು.

6 ವರ್ಷಗಳು ಬಹುಬೇಗನೆ ಸಾಗಿಹೋಗಿವೆ. ಮೇಲ್ಕಂಡ ವಿಷಯಗಳಲ್ಲಿ ಮತ್ತು ಇನ್ನೂ ಹಲವದರಲ್ಲಿ ಮೋದಿ ಪರಿವರ್ತನೆ ತಂದಿದ್ದಾರೆ. ಭಾರತ ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ತೋರಿಸಿರುವ ದೃಢನಿಶ್ಚಯವನ್ನು ಅವರ ಕಡು ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಬ್ಯಾಂಕುಗಳಲ್ಲಿಯ ಭ್ರಷ್ಟಾಚಾರವನ್ನು ಅವರು ತೊಳೆದುಹಾಕಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆ ಸರಿ ಮಾಡಿದ್ದಾರೆ ಮತ್ತು ಸ್ವಜನಪಕ್ಷಪಾತದ ಬಂಡವಾಳಶಾಹಿ ವ್ಯವಸ್ಥೆಯನ್ನು ತೊಡೆದುಹಾಕಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಬಲಿಷ್ಠವಾದ ಮತ್ತು ಅತ್ಯಂತ ಸ್ವಚ್ಛವಾದ ಹಣಕಾಸು ಕ್ಷೇತ್ರವನ್ನು ನಿರ್ಮಿಸಿದ್ದಾರೆ. ದೆಹಲಿಯ ಚಲ್ತಾ ಹೈ ಸಂಸ್ಕೃತಿಯನ್ನು ಹೆಚ್ಚು ಹೊಣೆಗಾರಿಕೆಯ ಮತ್ತು ಉತ್ತದಾಯಿ ವ್ಯವಸ್ಥೆಯನ್ನಾಗಿ ಬದಲಿಸಿದ್ದಾರೆ. ಬ್ಯಾಂಕುಗಳ ಸಾಲದ ಶೇ.90-95ರಷ್ಟನ್ನು ಸೆಳೆದುಕೊಳ್ಳುತ್ತಿದ್ದ ಕೆಲವೇ ಕುಟುಂಬಗಳ ಮೇಲೆ ಅರ್ಥವ್ಯವಸ್ಥೆಯು ಹೆಚ್ಚು ಕಾಲ ಅವಲಂಬಿತವಾಗಿ ಉಳಿಯಲಾರದು. ಹೆಚ್ಚು ಶಕ್ತಿಶಾಲಿಯಾದ ಮತ್ತು ಸುಂದರವಾದ ಉದ್ಯಮಶೀಲತೆಯ ಪರಿಕಲ್ಪನೆಯೊಂದಿಗೆ ಸಾಲ ಎಲ್ಲರಿಗೂ ಸಿಗುವಂತೆ ಮಾಡಿದ್ದಾರೆ. ಇದು ದೇಶಾದ್ಯಂತ ಅರ್ಥವ್ಯವಸ್ಥೆಯ ಪಿರಾಮಿಡ್‌ನ ತುದಿಯಿಂದ ತಳದವರೆಗೆ ವ್ಯಾಪಿಸುತ್ತದೆ. ಅಂತರ್ಜಾಲ ಆಡಳಿತದ ವಿಷಯದಲ್ಲಿ ವಿಶ್ವಸಂಸ್ಥೆ ನಿಯಮಾವಳಿಯಡಿ ಅಂತರ್ಜಾಲವನ್ನು ಪಡೆದುಕೊಳ್ಳಲು ಮತ್ತು ಉಚಿತ ಮತ್ತು ಮುಕ್ತ ಸ್ವರೂಪದಲ್ಲಿ ಅಂತರ್ಜಾಲವನ್ನು ಉಳಿಸಿಕೊಳ್ಳಲು ಅವರು ತಕ್ಷಣವೇ ಯುಪಿಎ ಸರ್ಕಾರವು ಚೀನಾದ ಪಾಲುಗಾರಿಕೆಯಲ್ಲಿ ರೂಪಿಸಿದ್ದ ಯೋಜನೆಯನ್ನು ರದ್ದುಗೊಳಿಸಿದರು. ಅಂತರ್ಜಾಲದಲ್ಲಿ ಚೀನಾದ ಕುಕೃತ್ಯಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇದೊಂದು ದೂರದೃಷ್ಟಿಯುಳ್ಳ ನಿರ್ಧಾರ ಎನ್ನಿಸಿದೆ ಈಗ.

ಒಂದು ನಿರ್ದಿಷ್ಟಉದಾಹರಣೆ ಈಗಲೂ ನೆನಪಿಸಿಕೊಳ್ಳುವೆ. ರೇರಾ ಮಸೂದೆಯನ್ನು ಮಂಡಿಸಲಾಗಿತ್ತು. ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು. ಪ್ರಭಾವಶಾಲಿ ರಿಯಲ್‌ ಎಸ್ಟೇಟ್‌ ಲಾಬಿಗಳು ಸಂಸದರು ಮತ್ತು ಮಾಧ್ಯಮದವರನ್ನು ಹಿಡಿದುಕೊಂಡು ಮಸೂದೆಯಲ್ಲಿಯ ಗ್ರಾಹಕರ ಹಕ್ಕುಗಳನ್ನು ಮೊಟಕುಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಮಸೂದೆಯ ಪರಿಶೀಲನೆಗೆ ನಿಯೋಜಿಸಲಾಗಿದ್ದ ಸಂಸತ್ತಿನ ಆಯ್ದ ಸಮಿತಿಯಲ್ಲಿ ನಾನು ಇದ್ದೆ. ‘ಹಿತಾಸಕ್ತಿ’ಯ ಕಾರಣಗಳಿಗಾಗಿ ಈ ಮಸೂದೆ ಬಲ ಕಳೆದುಕೊಳ್ಳುತ್ತದೆ ಎಂದು ನಾನಂದುಕೊಂಡಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅದನ್ನು ಬಲ ಕಳೆದುಕೊಳ್ಳಲು ಬಿಡಲಿಲ್ಲ. ಇತರ ಅನೇಕ ಶಾಸನಗಳ ಮೂಲಕ ವೈಯಕ್ತಿಕ ನಾಗರಿಕರ ಹಕ್ಕುಗಳಿಗೆ ರಕ್ಷಣೆಯೊದಗಿಸುವ ಪ್ರವೃತ್ತಿಯನ್ನು ರೂಢಿಸಿದರು.

ದೇಶಕ್ಕೆ ನವ ಆರ್ಥಿಕ ಮಾದರಿ

ಆತ್ಮನಿರ್ಭರ ಭಾರತದ ಪರಿಕಲ್ಪನೆಯೊಂದಿಗೆ ಅವರು ಆರ್ಥಿಕ ಮತ್ತು ಅಭಿವೃದ್ಧಿಯ ಮಾದರಿಗಳನ್ನು ಪ್ರಕಟಿಸಿದ್ದಾರೆ. ಇದು ಪಶ್ಚಿಮದ ಆರ್ಥಿಕ ಮಾದರಿಯ ಕುರುಡು ಅನುಕರಣೆಯಲ್ಲ. ‘ನೀತಿಗಳು ಭಾರತಕ್ಕಾಗಿ ಮತ್ತು ಭಾರತದಲ್ಲಿ’ ಎಂಬ ಅವರ ಮಾತುಗಳು ಪ್ರಧಾನಿ ಮೋದಿಯ ಭಾರತ ಮೊದಲು ಆರ್ಥಿಕ ಚಿಂತನೆಯಲ್ಲಿ ಪ್ರತಿಫಲಿಸುತ್ತವೆ. ಅದು ಜಾಗತಿಕವಾದದ್ದು ಮತ್ತು ಮುಂಬರುವ ದಶಕಗಳಲ್ಲಿ ಭಾರತವನ್ನು ಒಂದು ಪ್ರಬಲ ಆರ್ಥಿಕ ಶಕ್ತಿಯ ಪಾತ್ರ ವಹಿಸುವಂತೆ ಮಾಡಲಿದೆ.

ಒಬ್ಬ ಉದ್ಯಮಿಯಾಗಿ ಮತ್ತು ಒಬ್ಬ ಸಂಸದನಾಗಿ ನಾನು ಯಾವತ್ತೂ ಭಾರತದ ಹಿರಿಮೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಂಬಿಕೆಯನ್ನು ಹೊಂದಿದ್ದೇನೆ. ಅಟಲ್‌ಜೀಯವರ 6 ವರ್ಷಗಳ ಅವಧಿಯನ್ನು ಹೊರತುಪಡಿಸಿದರೆ ದಶಕಗಳ ಕಾಲ ನಮ್ಮ ರಾಜಕೀಯದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂಥದ್ದು ಏನೂ ಇರಲಿಲ್ಲ. ಬಹುತೇಕ ಭಾರತೀಯರಿಗೆ ಪ್ರಧಾನಿ ಮೋದಿಯವರ ಅವಿಶ್ರಾಂತ ಕೆಲಸ ನಂಬಿಕೆಯನ್ನು ಹುಟ್ಟುಹಾಕಿದೆ ಮತ್ತು ಭಾರತೀಯರು ಎನ್ನಿಸಿಕೊಳ್ಳಲು ಹೆಮ್ಮೆ ಎನಿಸಿದೆ.

ಭಾರತದ ಈ ರೀತಿಯ ಅಭ್ಯುದಯಕ್ಕೆ ಜಗತ್ತು ಪ್ರತಿಕ್ರಿಯಿಸುತ್ತಿದೆ. ಏಷ್ಯಾ-ಪೆಸಿಫಿಕ್‌ ಪ್ರದೇಶವನ್ನು ಈಗ ಇಂಡೋ- ಪೆಸಿಫಿಕ್‌ ಎನ್ನಲಾಗುತ್ತಿದೆ. ಭಾರತ, ಅಮೆರಿಕ, ಆಸ್ಪ್ರೇಲಿಯಾ ಮತ್ತು ಜಪಾನ್‌ ಸೇರಿದ ನಾಲ್ಕು ಬಲದ ಕೂಟ ರಚನೆ ಚೀನಾದ ವಿಸ್ತರಣಾ ನೀತಿಯ ವಿರುದ್ಧ ಜಗತ್ತು ಹೇಗೆ ಗಟ್ಟಿಮತ್ತು ದೃಢನಿರ್ಧಾರ ಕೈಗೊಂಡಿದೆ ಎಂಬುದನ್ನು ತೋರಿಸುತ್ತದೆ. ಇವೆಲ್ಲವೂ, ಜಗತ್ತಿನಲ್ಲಿ ಭಾರತದ ಸ್ಥಾನವನ್ನು ನಿರ್ದೇಶಿಸುವ ಮತ್ತು ರಾಷ್ಟ್ರೀಯ ಸಮಗ್ರತೆಯ ವಿಷಯದಲ್ಲಿ ನಿಸ್ಸಂದಿಗ್ಧವಾದ ಸ್ಪಷ್ಟತೆಯನ್ನು ಮೋದಿ ಹೊಂದಿರುವುದನ್ನು ತೋರಿಸುತ್ತದೆ. ಇದು ದಶಕಗಳ ಭೌಗೋಳಿಕ ರಾಜಕೀಯದ ಭಿನ್ನತೆಯನ್ನು ಮತ್ತು ಸಂದಿಗ್ಧತೆಯನ್ನು ಮತ್ತು ‘ಕಾರ್ಯತಂತ್ರದ ಸಂಯಮ’ ಎನ್ನುವ ಸಿದ್ಧಾಂತವನ್ನೆಲ್ಲ ಬದಲಿಸಿದೆ. ಪಾಕಿಸ್ತಾನ ಅಥವಾ ಚೀನಾ ಇಲ್ಲವೆ ಬೇರೆ ಯಾರಿಗೋ ಭಾರತದ ಅಭ್ಯುದಯಕ್ಕೆ ತಡೆ ಒಡ್ಡುವುದು ಅಥವಾ ನಿಧಾನಗೊಳಿಸುವುದು ತುಂಬ ಕಷ್ಟವಾಗಲಿದೆ. ಏಕೆಂದರೆ ನರೇಂದ್ರ ಮೋದಿಯವರು ತಮ್ಮ ಆತ್ಮನಿರ್ಭರ ಭಾರತದ ದರ್ಶನದೊಂದಿಗೆ ಶತಕೋಟಿ ಭಾರತೀಯರಲ್ಲಿ ಅವರ ಹೊಸ ಬಲಿಷ್ಠ ಭವಿಷ್ಯಕ್ಕಾಗಿ ಮತ್ತು ಭಾರತಕ್ಕಾಗಿ ಆಶೆಗಳ ಕಿಡಿ ಹೊತ್ತಿಸಿದ್ದಾರೆ.

ಸವಾಲಿನಲ್ಲೇ ಹೊಸ ಅವಕಾಶ

ನರೇಂದ್ರ ಮೋದಿ 6 ವರ್ಷಗಳ ಹಿಂದೆ ದೆಹಲಿಗೆ ಕಾಲಿಟ್ಟರು. ವಿವಿಧ ಪಿತೂರಿಗಾರರು ಸರ್ಕಾರವನ್ನು ಹಿಡಿದಿಟ್ಟುಕೊಂಡಿದ್ದ ಕಾಲ ಅದು. ತಮ್ಮ ಸ್ನೇಹಶೀಲ ಸಂಬಂಧಗಳೆಲ್ಲ ಹೊಡೆತಕ್ಕೆ ಸಿಕ್ಕಿಹೋಯಿತಲ್ಲ ಎಂದು ಕೆಲವರು ಪರಿತಪಿಸಿದರು. ಇದು ಹೊಸ ಭಾರತಕ್ಕೆ ತೆರೆದ ಮಾರ್ಗ ಎಂದು ಬಹುತೇಕ ಭಾರತೀಯರು ಸಂಭ್ರಮಾಚರಣೆ ಮಾಡಿದರು.

ಗಮನಾರ್ಹವಾದ ಪ್ರಗತಿ ಸಾಧಿಸಿರುವುದರ ಹೊರತಾಗಿಯೂ ಕೋವಿಡ್‌ ಸಾಂಕ್ರಾಮಿಕ ರೋಗವು ಮತ್ತು ಅದರಿಂದಾದ ಗಂಭೀರ ಸ್ವರೂಪದ ಆರ್ಥಿಕ ಪರಿಣಾಮಗಳು ಒಂದು ಹಿನ್ನಡೆಯಾಗಿದೆ ಹಾಗೂ ಅದು ಒಂದು ಗಂಭೀರವಾದ ಸವಾಲನ್ನು ಮುಂದೊಡ್ಡಿದೆ. ಆದರೆ ಪ್ರಧಾನಿ ಮೋದಿಯವರು ಈ ಸಾಂಕ್ರಾಮಿಕ ರೋಗದ ಇನ್ನೊಂದು ಮಗ್ಗುಲಿನಲ್ಲಿರುವ ಹೊಸ ವಿಶ್ವಶ್ರೇಣಿಯ ಕಡೆ ಗಮನ ನೀಡಿದ್ದಾರೆ. ಆರ್ಥಿಕತೆಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಜಾಗತಿಕ ಸ್ತರದ ರಾಚನಿಕ ಬದಲಾವಣೆಗಳು, ಭಾರತಕ್ಕೆ ಅಭೂತಪೂರ್ವವಾದ ಅವಕಾಶವನ್ನೊದಗಿಸುವ ತಂತ್ರಜ್ಞಾನ ಮತ್ತು ಸುರಕ್ಷತೆಯನ್ನು ಇದು ಒಳಗೊಂಡಿದೆ.

ಇಂದು ನಾನು ಅವರ ನಾಯಕತ್ವಕ್ಕೆ ಕೃತಜ್ಞತಾಪೂರ್ವಕ ಅಭಿನಂದನೆಗಳನ್ನು ಮತ್ತು ಶುಭಹಾರೈಗಳನ್ನು ಸಲ್ಲಿಸುತ್ತೇನೆ. ಇದು ಅವರ ನಾಯಕತ್ವಕ್ಕೆ ಮತ್ತು ಸೇವೆಗೆ ಹಾಗೂ ಈ ಸವಾಲಿನ ಸಮಯದಲ್ಲಿಯೂ ತಮ್ಮ ಗುರಿಯಾದ ಎಲ್ಲರಿಗೂ ಸಮೃದ್ಧಿಯನ್ನು ತರುವ ಹೊಸ ಭಾರತದ ಕಡೆಗೆ ನಮ್ಮನ್ನು ಮುನ್ನಡೆಸುತ್ತಿರುವುದಕ್ಕಾಗಿ ಶತಕೋಟಿಗೂ ಅಧಿಕ ಭಾರತೀಯರ ಶುಭಹಾರೈಕೆಯೂ ಕೂಡ ಆಗಿದೆ.

click me!