ಭಾರತಕ್ಕೆ 10 ಕೋಟಿ ಲಸಿಕೆ, ರೆಡ್ಡೀಸ್‌ ಲ್ಯಾಬ್‌ ಜತೆ ರಷ್ಯಾ ಒಪ್ಪಂದ!

By Kannadaprabha NewsFirst Published Sep 17, 2020, 10:38 AM IST
Highlights

ಭಾರತಕ್ಕೆ 10 ಕೋಟಿ ಲಸಿಕೆ ನೀಡಲು ರೆಡ್ಡೀಸ್‌ ಲ್ಯಾಬ್‌ ಜತೆ ರಷ್ಯಾ ಒಪ್ಪಂದ| ಭಾರತದಲ್ಲಿ ಶೀಘ್ರವೇ ರಷ್ಯಾ ಲಸಿಕೆಯ 3ನೇ ಹಂತದ ಪ್ರಯೋಗ

ನವದೆಹಲಿ(ಸೆ.17): ಜಗತ್ತಿನ ಮೊದಲ ಕೊರೋನಾ ವೈರಸ್‌ ಲಸಿಕೆ ಎಂಬ ಹೆಗ್ಗಳಿಕೆ ಪಡೆದಿರುವ ಸ್ಪುಟ್ನಿಕ್‌-5 ಲಸಿಕೆಯ 10 ಕೋಟಿ ಡೋಸ್‌ಗಳನ್ನು ಭಾರತಕ್ಕೆ ಪೂರೈಸಲು ಡಾ

ರೆಡ್ಡೀಸ್‌ ಲ್ಯಾಬೋರೇಟರೀಸ್‌ ಜೊತೆಗೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ. ಶೀಘ್ರದಲ್ಲೇ ಈ ಲಸಿಕೆಯ 3ನೇ ಹಂತದ ಪ್ರಯೋಗ ಭಾರತದಲ್ಲಿ ಆರಂಭವಾಗಲಿದ್ದು, ನಂತರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಒಪ್ಪಿಗೆ ದೊರೆತರೆ ಭಾರತದಲ್ಲಿ ರಷ್ಯಾದ ಕೊರೋನಾ ಲಸಿಕೆ ಮಾರುಕಟ್ಟೆಗೆ ಬರಲಿದೆ.

ಭಾರತದ ರೆಡ್ಡೀಸ್‌ ಲ್ಯಾಬೋರೇಟರೀಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದನ್ನು ಸ್ಪುಟ್ನಿಕ್‌-5 ಲಸಿಕೆಯನ್ನು ತಯಾರಿಸಿರುವ ರಷ್ಯನ್‌ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಬುಧವಾರ ಖಚಿತಪಡಿಸಿದೆ. ‘ಭಾರತದಲ್ಲಿ ಒಪ್ಪಿಗೆ ದೊರೆತಾಕ್ಷಣ 10 ಕೋಟಿ ಡೋಸ್‌ಗಳ ಪೂರೈಕೆ ಆರಂಭಿಸಲಾಗುವುದು. ಭಾರತದಲ್ಲಿ ಪ್ರಯೋಗಗಳು ಯಶಸ್ವಿಯಾಗಿ ಮುಗಿದು 2020ರ ಕೊನೆಯಲ್ಲಿ ಲಸಿಕೆ ಪೂರೈಕೆ ಆರಂಭವಾಗಬಹುದು’ ಎಂದೂ ಅದು ತಿಳಿಸಿದೆ.

‘ರಷ್ಯಾದ ಆರ್‌ಡಿಐಫ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಸ್ಪುಟ್ನಿಕ್‌-5 ಲಸಿಕೆಯ 1 ಮತ್ತು 2ನೇ ಹಂತದ ಪ್ರಯೋಗದಲ್ಲಿ ಭರವಸೆಯ ಫಲಿತಾಂಶ ಬಂದಿದೆ. ಈಗ 3ನೇ ಹಂತದ ಪ್ರಯೋಗ ನಡೆಸುತ್ತೇವೆ’ ಎಂದು ರೆಡ್ಡೀಸ್‌ ಲ್ಯಾಬ್‌ನ ಕೋ-ಚೇರ್ಮನ್‌ ಜಿ.ವಿ.ಪ್ರಸಾದ್‌ ತಿಳಿಸಿದ್ದಾರೆ.

click me!