ಎನ್ ಸಿಪಿಯನ್ನು ಹಾಡಿ ಹೊಗಳಿದ ಪ್ರಧಾನಿ/ ಶಿಷ್ಟಾಚಾರ ಪಾಲಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ/ ಸಂಸತ್ ಕಲಾಪದಲ್ಲಿ ಎನ್ ಸಿಪಿ ನಡೆದುಕೊಂಡ ರೀತಿ ಮಾದರಿ/ ದೇಶಕ್ಕೆ ಒಳಿತಾಗುವ ವಿಚಾರ ವಿಮರ್ಶೆ ಮಾಡುವ ರಾಜ್ಯಸಭೆ
ನವದೆಹಲಿ[ನ. 18] ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವ ಮಧ್ಯೆಯೇ, ಪ್ರಧಾನಿ ಮೋದಿ ಅವರು, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಬಿಜೆಡಿ ಪಕ್ಷ ಲೋಕಸಭೆಯಲ್ಲಿ ಶಿಷ್ಟಾಚಾರ ಕಾಪಾಡಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯ ಐತಿಹಾಸಿಕ 250ನೇ ಅಧಿವೇಶನವದಲ್ಲಿ ಮಾತನಾಡಿದ ಪ್ರಧಾನಿ, ಎನ್ ಸಿಪಿ(ಶರದ್ ಪವಾರ್) ಹಾಗೂ ಬಿಜು ಜನತಾ ದಳದ(ನವೀನ್ ಪಟ್ನಾಯಕ್) ಮುಖಂಡರುಸದನದ ಬಾವಿ ಬಳಿ ತೆರಳಿ ಪ್ರತಿಭಟನೆ ನಡೆಸಿಲ್ಲ. ತಮ್ಮ ಅಹವಾಲಿನ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಕೋಲಾಹಲ ನಡೆಸದ, ಗಲಾಟೆ ಎಬ್ಬಿಸದೆ ಜನರಿಗೆ ಉಪಯೋಗವಾಗುವ ವಿಷಯದ ಬಗ್ಗೆ ಹೇಗೆ ಧ್ವನಿ ಎತ್ತಬೇಕು ಎಂಬ ಬಗ್ಗೆ ಭಾರತೀಯ ಜನತಾ ಪಕ್ಷ ಸೇರಿದಂತೆ ಉಳಿದ ಪಕ್ಷಗಳು ಎನ್ ಸಿಪಿ ಮತ್ತು ಬಿಜೆಡಿ ಪಕ್ಷವನ್ನು ನೋಡಿ ಕಲಿಯಬೇಕು ಎಂದು ಪ್ರಧಾನಿ ಸಲಹೆ ನೀಡಲು ಮರೆಯಲಿಲ್ಲ.
ರಾಜ್ಯಸಭೆ ದೂರದೃಷ್ಟಿ ಉಳ್ಳ ಮೇಲ್ಮನೆಯಾಗಿದ್ದು, ಬೌದ್ಧಿಕ ಶ್ರೀಮಂತಿಕೆ ಇದರ ಹೆಸರು. ದೇಶಕ್ಕೆ ಒಳಿತಾಗುವ ಮತ್ತು ಮಾರಕವಾಗುವ ವಿಚಾರಗಳ ಸಮಗ್ರ ವಿಮರ್ಶೆ ಇಲ್ಲಿ ಆಗುತ್ತದೆ. ದೇಶ ಇಂಥಹ ಪರಿಸ್ಥಿತಿಗಳನ್ನೇ ಎದುರು ನೋಡುತ್ತದೆ ಎಂದು ಪ್ರಧಾನಿ ವಿಶ್ಲೇಷಣೆ ಮಾಡಿದರು.