
ನವದೆಹಲಿ (ಡಿ.1): ಭಾರತವು ಗುರುವಾರ ಅಧಿಕೃತವಾಗಿ ಜಿ20 ದೇಶಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಜಿ20 ಅಧ್ಯಕ್ಷ ಸ್ಥಾನವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರಗಳಲ್ಲಿ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ದೊಡ್ಡ ಅವಕಾಶವನ್ನು ನೀಡುತ್ತದೆ. ಈ ವರ್ಷದ ಜಿ20 ಶೃಂಗಸಭೆ ನವೆಂಬರ್ 15-16ರವರೆ ಇಂಡೋನೇಷ್ಯಾದ ಅಧ್ಯಕ್ಷತೆಯಲ್ಲಿ ಬಾಲಿಯಲ್ಲಿ ನಡೆಯಿತು. ಇದೇ ಶೃಂಗದ ಕೊನೆಯಲ್ಲಿ ಭಾರತಕ್ಕೆ ಜಿ20 ಸದಸ್ಯ ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಗುರುವಾರ ಭಾರತ ಅಧಿಕೃತವಾಗಿ ಜಿ20ಯ ಅಧ್ಯಕ್ಷ ರಾಷ್ಟ್ರ ಎನಿಸಿಕೊಂಡಿದ್ದು, ಮುಂದಿನ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಶೃಂಗದವರೆಗೂ ಈ ಸ್ಥಾನದಲ್ಲಿ ಇರಲಿದೆ. ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸರ್ವ ಸದಸ್ಯರನ್ನು ಟ್ಯಾಗ್ ಮಾಡಿ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಒಂದು ಟ್ವೀಟ್‌ನಲ್ಲಿ ಭಾರತ ಡಿಸೆಂಬರ್ 1 ರಿಂದ ಜಿ20 ರಾಷ್ಟ್ರಗಳ ಅಧ್ಯಕ್ಷನಾಗಿದೆ ಎಂದು ಬರೆದಿದ್ದಾರೆ. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ದ ಧ್ಯೇಯದೊಂದಿಗೆ ಪ್ರೇರಿತವಾಗಿ ಏಕತೆಯನ್ನು ಮತ್ತಷ್ಟು ವೃದ್ಧಿ ಮಾಡಲು ಈ ಅಧ್ಯಕ್ಷ ಸ್ಥಾನವನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ.
ಇದನ್ನು ಭಾರತಕ್ಕೆ ಐತಿಹಾಸಿಕ ಅವಕಾಶ ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಂದರ್ಭದಲ್ಲಿ ತಮ್ಮ ಬ್ಲಾಗ್‌ನಲ್ಲಿ ವಿಚಾರಧಾರೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಟ್ವೀಟ್‌ನಲ್ಲಿ 'ಇಂದು, ಭಾರತವು ತನ್ನ G-20 ಅಧ್ಯಕ್ಷತೆಯನ್ನು ಪ್ರಾರಂಭ ಮಾಡುತ್ತಿದೆ. ಮುಂಬರುವ ವರ್ಷದಲ್ಲಿ ಜಾಗತಿಕ ಒಳಿತಿಗಾಗಿ ನಾವು ಅಂತರ್ಗತ, ಮಹತ್ವಾಕಾಂಕ್ಷೆಯ, ಕ್ರಿಯಾ-ಆಧಾರಿತ ಮತ್ತು ನಿರ್ಣಾಯಕ ಕಾರ್ಯಸೂಚಿಯನ್ನು ಹೇಗೆ ನಿರ್ಮಿಸಲು ಬಯಸುತ್ತೇವೆ ಎಂಬುದರ ಕುರಿತು ಕೆಲವು ಆಲೋಚನೆಗಳು ಇಲ್ಲಿವೆ' ಎಂದು ತಮ್ಮ ಬ್ಲಾಗ್‌ನ ಲಿಂಕ್ ಅನ್ನು ಹಂಚಿಕೊಂಡಿದ್ದು, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಹಾಗೂ ಬ್ರೆಜಿಲ್ ದೇಶದ ಅಧ್ಯಕ್ಷರ ಟ್ವೀಟ್ ಅಕೌಟ್‌ಗೆ ಟ್ಯಾಗ್ ಮಾಡಿದ್ದಾರೆ.
ಜಿ20 ಅಧ್ಯಕ್ಷ ಸ್ಥಾನದ ಕುರಿತಾಗಿ ಪ್ರಧಾನಿ ಮೋದಿ ಬ್ಲಾಗ್ ಬರಹ
G 20 ಅಧ್ಯಕ್ಷರಾಗಿ ಭಾರತಕ್ಕಿರುವ ಅವಕಾಶ ಹಾಗೂ ಸವಾಲುಗಳೇನು..?
ಜಿ20 ಲಾಂಛನ, ಥೀಮ್ ಅನಾವರಣ: ಭಾರತವು ಈಗಾಗಲೇ ತನ್ನ ಜಿ20 ಅಧ್ಯಕ್ಷ ಸ್ಥಾನ ಲಾಂಛನ, ಥೀಮ್ ಹಾಗೂ ವೆಬ್‌ಸೈಟ್‌ಅನ್ನು ನವೆಂಬರ್ 8 ರಂದು ಅನಾವರಣ ಮಾಡಿದೆ. ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸಲುವಾಗಿಯೇ ಇದನ್ನು ರಚಿಸಲಾಗಿತ್ತು. ಭಾರತ ಜಿ20 ಸ್ಥಾನದ ಅಧ್ಯಕ್ಷ ಪದವಿಗೆ ಏರುವುದು ಐತಿಹಾಸಿಕ ಸಾಧನೆ ಎಂದೂ ಮೋದಿ ಈ ವೇಳೆ ಹೇಳಿದ್ದರು.ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತ, ವಿಶ್ವ ವ್ಯಾಪಾರದ ಶೇಕಡಾ 75 ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಪ್ರತಿನಿಧಿಸುವ ಜಿ-20 ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿದೆ ಎಂದು ಪ್ರಧಾನಿ ಹೇಳಿದ್ದರು.
ಇದೊಂದು ಮಹತ್ವದ ಸಂದರ್ಭ ಎಂದು ಬಣ್ಣಿಸಿದ ಪ್ರಧಾನಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ಜಿ-20 ಅಧ್ಯಕ್ಷರಾಗಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ