Mann ki Baat: ಮಾತೃಭಾಷೆಯಲ್ಲಿ ಹೆಮ್ಮೆಯಿಂದ ಮಾತಾಡಿ: ಪ್ರಧಾನಿ ನರೇಂದ್ರ ಮೋದಿ

Published : Feb 28, 2022, 08:20 AM ISTUpdated : Feb 28, 2022, 08:56 AM IST
Mann ki Baat: ಮಾತೃಭಾಷೆಯಲ್ಲಿ ಹೆಮ್ಮೆಯಿಂದ ಮಾತಾಡಿ: ಪ್ರಧಾನಿ ನರೇಂದ್ರ ಮೋದಿ

ಸಾರಾಂಶ

*ನಮ್ಮ ಭಾಷೆ, ವಸ್ತ್ರ, ಆಹಾರ, ಪಾನೀಯಗಳ ಬಗ್ಗೆ ಕೀಳರಿಮೆ ಬೇಡ *ಬೇರೆ ಬೇರೆ ಭಾಷೆಯ ಹಾಡಿನ ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ *ಕನ್ನಡಿಗರಿಗೆ ಕಾಶ್ಮೀರಿ ಭಾಷೆ ಹಾಡು ಲಿಪ್‌ ಸಿಂಕ್‌ ಮಾಡಲು ಸಲಹೆ *ಮಾಸಿಕ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತು

ನವದೆಹಲಿ  (ಫೆ. 28): ಮಾತೃ ಭಾಷೆಯಲ್ಲಿಯೇ ಮಾತನಾಡುವ ಅಗತ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯನ್ನು ಹೆಮ್ಮೆಯಿಂದ ಬಳಸಬೇಕು ಎಂದು ಕರೆಕೊಟ್ಟಿದ್ದಾರೆ. ಅಲ್ಲದೆ ಇಂಥ ಬೆಳವಣಿಗೆಯು, ಇಡೀ ಹೊಸ ತಲೆಮಾರಿಗೆ ಮತ್ತು ಇಡೀ ಜಗತ್ತಿಗೆ ನಮ್ಮ ವೈವಿಧ್ಯಮಯ ಸಂಸ್ಕೃತಿಯನ್ನು ಪರಿಚಯಿಸುತ್ತದೆ ಎಂದು ಹೇಳಿದ್ದಾರೆ.ಭಾನುವಾರ ಮಾಸಿಕ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸ್ವಾತಂತ್ರ್ಯಾನಂತರದ 75 ವರ್ಷಗಳ ನಂತರವೂ ತಮ್ಮ ಭಾಷೆ, ವಸ್ತ್ರ, ಆಹಾರ ಮತ್ತು ಪಾನೀಯಗಳ ಹಿರಿಮೆ ಬಗೆಗಿನ ಗೊಂದಲ ಮತ್ತು ಕೀಳರಿಮೆ ಇನ್ನೂ ಉಳಿದುಕೊಂಡಿದೆ. ವಿಶ್ವದಲ್ಲಿ ಎಲ್ಲೂ ಇಲ್ಲ ಇಂಥ ಮನೋಭಾವ ನಮ್ಮಲ್ಲೂ ಬೇಡ. ಭಾಷಾ ಶ್ರೀಮಂತಿಕೆಯಲ್ಲಿ ಭಾರತ ಇಡೀ ವಿಶ್ವದಲ್ಲೇ ಅದ್ವಿತೀಯವಾದುದು. ಹೀಗಾಗಿ ಪ್ರತಿಯೊಬ್ಬರು ತಮ್ಮ ಮಾತೃಭಾಷೆಯಲ್ಲಿ ಹೆಮ್ಮೆಯಿಂದ ಮಾತನಾಡಬೇಕು’ ಎಂದು ಕರೆಕೊಟ್ಟರು.

‘ತಾಯಿ ನಮ್ಮ ಜೀವನವನ್ನು ರೂಪಿಸುವಂತೆ ಮಾತೃ ಭಾಷೆ ಕೂಡಾ ನಮ್ಮ ಜೀವನವನ್ನು ರೂಪಿಸುತ್ತದೆ. ತಾಯಿ ಮತ್ತು ತಾಯ್ನುಡಿ ಎರಡೂ ನಮ್ಮ ಜೀವನದ ಶಕ್ತಿ ಮತ್ತು ತಳಪಾಯ ಇದ್ದಂತೆ. ಹೇಗೆ ನಾವು ನಮ್ಮ ತಾಯಿಯನ್ನು ದೂರ ಮಾಡುವುದು ಸಾಧ್ಯವಿಲ್ಲವೋ ಹಾಗೆಯೇ ತಾಯ್ನುಡಿಯನ್ನು ಕೂಡಾ’ ಎಂದು ಮಾತೃ ಭಾಷೆಯ ಮಹತ್ವ ತಿಳಿ ಹೇಳುವ ಕೆಲಸ ಮಾಡಿದರು.

ಇದನ್ನೂ ಓದಿ: Mann Ki baat ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!

ವಿಶ್ವದ ಶ್ರೀಮಂತ ಭಾಷೆಯಾದ ತಮಿಳು ಇರುವುದು ಭಾರತದಲ್ಲಿ. ಈ ಮಹತ್ವದ ವಿಷಯ ನಮ್ಮದಾಗಿರುವುದಕ್ಕೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡಬೇಕು. ಅದೇ ರೀತಿ ಸಂಸ್ಕೃತದಲ್ಲಿನ ಪುರಾತನ ಗ್ರಂಥಗಳ ಬಗ್ಗೆಯೂ ನಾವು ಹೆಮ್ಮೆ ಪಡಬೇಕು. ಭಾರತದಲ್ಲಿ ನಾವು 121 ವಿವಿಧ ಮಾತೃ ಭಾಷೆಗಳನ್ನು ಹೊಂದಿದ್ದೇವೆ. ಈ ಪೈಕಿ 14 ಭಾಷೆಗಳನ್ನು ನಿತ್ಯವೂ ತಲಾ ಕನಿಷ್ಠ 1 ಕೋಟಿಗಿಂತ ಹೆಚ್ಚು ಜನರು ಬಳಕೆ ಮಾಡುತ್ತಾರೆ. ನಮ್ಮಲ್ಲಿ ನಿತ್ಯ 14 ಭಾಷೆಗಳನ್ನು ಮಾತನಾಡುವ ಜನರ ಒಟ್ಟು ಸಂಖ್ಯೆಯಷ್ಟುಹಲವು ಯುರೋಪಿಯನ್‌ ದೇಶಗಳ ಒಟ್ಟು ಜನಸಂಖ್ಯೆ ಕೂಡಾ ಇಲ್ಲ. ಭಾಷೆ ಎನ್ನುವುದು ಕೇವಲ ಭಾವನೆ ವ್ಯಕ್ತಪಡಿಸುವ ಮಾಧ್ಯಮವಲ್ಲ, ಬದಲಾಗಿ ಅದು ಸಂಸ್ಕೃತಿ ಮತ್ತು ಸಮಾಜದ ಪರಂಪರೆಯನ್ನು ಉಳಿಸುವ ಮಾಧ್ಯಮವಾಗಿಯೂ ಕೆಲಸ ಮಾಡುತ್ತದೆ ಎಂದು ಹೇಳಿದರು.

ಮಾತೃ ಭಾಷೆ ತನ್ನದೇ ಆದ ಅರಿವನ್ನು ಹೊಂದಿದೆ. ಈ ಅರಿವನ್ನು ಅರ್ಥ ಮಾಡಿಕೊಳ್ಳಲೆಂದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅದೇ ರೀತಿ ವೃತ್ತಿಪರ ಕೋರ್ಸ್‌ಗಳನ್ನೂ ಸ್ಥಳೀಯ ಭಾಷೆಯಲ್ಲೇ ಬೋಧಿಸುವ ಸಂಬಂಧ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.

ಸ್ಥಳೀಯ ಉತ್ಪನ್ನ ಖರೀದಿಸಿ:ಇದೇ ವೇಳೆ ಶಿವರಾತ್ರಿ, ಹೋಳಿ ಹಬ್ಬಗಳ ಸಮಯ ಆಗಮಿಸುತ್ತಿದೆ. ಈ ವೇಳೆ ಪ್ರತಿಯೊಬ್ಬ ಭಾರತೀಯ ಕೂಡಾ ಸ್ಥಳೀಯ ಮಾರುಕಟ್ಟೆಯಿಂದ ಸ್ಥಳೀಯ ಉತ್ಪಗಳನ್ನೇ ಖರೀದಿಸಬೇಕು ಎಂದು ಕರೆ ಕೊಟ್ಟರು.

ಇದನ್ನೂ ಓದಿ: PM Modi Meeting ಯುಪಿ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

ಕನ್ನಡಿಗರಿಗೂ ಕರೆ: ಈ ನಡುವೆ ತಾಂಜೇನಿಯಾ ಮೂಲದ ಕಿಲಿ ಪೌಲ್‌ ಮತ್ತು ನೀಮಾ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ತಾಂಜೇನಿಯಾ ಮೂಲದ ಕಿಲಿ ಮತ್ತು ನೀಮಾ ಭಾರತೀಯ ಹಾಡುಗಳಿಗೆ ಲಿಪ್‌ಸಿಂಕ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆ ಎಬ್ಬಿಸಬಹುದಾದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ಕನ್ನಡಿಗರು, ಕಾಶ್ಮೀರಿ ಹಾಡುಗಳಿಗೆ ಏಕೆ ಲಿಪ್‌ ಸಿಂಕ್‌ ಮಾಡಲಾಗದು, ಕೇರಳದವರು ಅಸ್ಸಾಮಿ ಭಾಷೆಯ ಹಾಡುಗಳಿಗೆ ಏಕೆ ಧ್ವನಿಯಾಗಬಾರದು.

ಹೀಗಾಗಿ ಪ್ರತಿ ಯವಸಮೂಹವು ಭಾರತದ ಜನಪ್ರಿಯ ಗೀತೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿ, ಅದನ್ನು ವಿಡಿಯೋ ಮಾಡಿ ಅದನ್ನು ಜನಪ್ರಿಯಗೊಳಿಸಬೇಕು. ಇದು ನಮ್ಮ ಹೊಸ ಪೀಳಿಗೆಗೆ ದೇಶದ ವೈವಿಧ್ಯತೆಯನ್ನು ಪರಿಚಯಿಸಲು ನೆರವಾಗುತ್ತದೆ ಮತ್ತು ಏಕ ಭಾರತ, ಶ್ರೇಷ್ಠ ಭಾರತದ ಅನುಭವ ಪಡೆಯಲು ಸಾಧ್ಯ ಮಾಡಿಕೊಡುತ್ತದೆ’ ಎಂದು ಹೇಳಿದರು.

ಪುರಾತನ ವಿಗ್ರಹ: ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ವಿದೇಶಿಯರ ಪಾಲಾಗಿದ್ದ ಕೇವಲ 13 ವಿಗ್ರಹಗಳನ್ನು ಮಾತ್ರವೇ ಮರಳಿ ದೇಶಕ್ಕೆ ತರಲಾಗಿತ್ತು. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಮರಳಿದ ವಿಗ್ರಹಗಳ ಸಂಖ್ಯೆ 200 ದಾಟಿದೆ. ಇದು ವಿದೇಶಿಯರು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂಬುದರ ಧ್ಯೋತಕ ಎಂದು ಹೇಳಿದರು.

ಕಾಶಿ ಜನರ ಸೇವೆ ಮಾಡುತ್ತಲೇ ಕೊನೆಯುಸಿರು: ಮೋದಿ ಭಾವುಕ ನುಡಿ: ತಮ್ಮ ಜೀವಿತಾವಧಿಯ ಕೊನೆವರೆಗೆ ಉತ್ತರ ಪ್ರದೇಶದ ವಾರಾಣಸಿ ಜನತೆಯ ಸೇವೆ ಮಾಡುವುದು ತಮಗೆ ದೊರೆಯುವ ಸೌಭಾಗ್ಯ ಎಂದು ವಾರಾಣಸಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತನ್ಮೂಲಕ ‘ತಮ್ಮ ಕೊನೇ ದಿನಗಳಲ್ಲಿ ಜನರು ವಾರಾಣಸಿಗೆ ಬರುತ್ತಾರೆ’ ಎಂಬ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಹೇಳಿಕೆಗೆ ಮೋದಿ ಅವರು ತಿರುಗೇಟು ನೀಡಿದರು.

ವಾರಾಣಸಿ ಜನತೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮೋದಿ ಅವರು, ‘ವಾರಾಣಸಿ ಮತ್ತು ಈ ಜನರಿಂದ ನನ್ನನ್ನು ಬೇರ್ಪಡಿಸಲಾಗದು ಎಂದು ನನಗೆ ಗೊತ್ತಾಗಿದೆ. ವಾರಾಣಸಿಯ ಜನತೆ ಸೇವೆ ಮಾಡಿಕೊಂಡೇ ಮಡಿಯುವುದು ನನಗೆ ದೊರೆತ ಸೌಭಾಗ್ಯವಾಗಲಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !