ಈಗಲೂ ಮೋದಿ ನಂ.1 ನಾಯಕ!

By Kannadaprabha NewsFirst Published Jan 24, 2020, 7:13 AM IST
Highlights

ದೇಶದಲ್ಲಿ ಮತ್ತೊಮ್ಮೆ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಈಗಲೂ ಕೂಡ ನಂ 1 ನಾಯಕರಾಗಿಯೇ ಉಳಿದಿದ್ದಾರೆ. 

ನವದೆಹಲಿ (ಜ.24): 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯದ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ, ನಂತರದ ದಿನಗಳಲ್ಲಿ ವಿವಿಧ ವಿಷಯ ಸಂಬಂಧ ವಿಪಕ್ಷಗಳ ಟೀಕೆಗೆ ಗುರಿಯಾದ ಹೊರತಾಗಿಯೂ, ಈಗಲೂ ದೇಶದ ನಂ.1 ಜನಪ್ರಿಯ ನಾಯಕರಾಗಿಯೇ ಮುಂದುವರೆದಿದ್ದಾರೆ. ಅಲ್ಲದೆ ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ಇಂಡಿಯಾ ಟುಡೇ- ಕಾರ್ವಿ ಇನ್‌ಸೈಟ್ಸ್‌’ ದೇಶಾದ್ಯಂತ ನಡೆಸಿದ ‘ಮೂಡ್‌ ಆಫ್‌ ದಿ ನೇಷನ್‌’ ಸಮೀಕ್ಷೆಯ ವರದಿ ಗುರುವಾರ ಪ್ರಕಟವಾಗಿದ್ದು, ಶೇ.68ರಷ್ಟುಜನ, ಈಗಲೂ ನರೇಂದ್ರ ಮೋದಿ ಅವರೇ ದೇಶದ ನಂ.1 ಜನಪ್ರಿಯ ನಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ 97 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 194 ವಿಧಾನಸಭಾ ಕ್ಷೇತ್ರಗಳಲ್ಲಿನ 12141 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸೋಲು, ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಕುರಿತು ದೇಶವ್ಯಾಪಿ ಪ್ರತಿಭಟನೆ, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರ ಟೀಕೆಗೆ ಗುರಿಯಾಗಿದ್ದರೂ, ಮೋದಿ ಅವರ ಜನಪ್ರಿಯತೆಗೆ ಯಾವುದೇ ಕುಂದು ಉಂಟಾಗಿಲ್ಲ. ಈ ಹಿಂದೆ 2019ರ ಆಗಸ್ಟ್‌ನಲ್ಲಿ ನಡೆಸಿದ್ದ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆಗೆ ಹೋಲಿಸಿದರೆ, ಇದೀಗ ಮೋದಿ ಜನಪ್ರಿಯತೆಯಲ್ಲಿ ಕೇವಲ ಶೇ.3ರಷ್ಟುಮಾತ್ರ ಇಳಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.

ಎನ್‌ಡಿಎ ಅಧಿಕಾರಕ್ಕೆ:

ತಕ್ಷಣಕ್ಕೆ ಸಂಸತ್‌ಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಆದರೆ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಲ 32 ಸ್ಥಾನ ಇಳಿದು 271ಕ್ಕೆ ತಲುಪಲಿದೆ. ಅಂದರೆ ಏಕಾಂಗಿಯಾಗಿ ಸರ್ಕಾರ ರಚನೆಗೆ 1 ಸ್ಥಾನದ ಕೊರತೆ ಅನುಭವಿಸಲಿದೆ. ಆದರೆ ಎನ್‌ಡಿಎ ಮಿತ್ರಪಕ್ಷಗಳು ಒಟ್ಟು 303 ಸ್ಥಾನ ಪಡೆವ ಮೂಲಕ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಇನ್ನು ಯುಪಿಎ ಕಳೆದ ಬಾರಿಗಿಂತ 15 ಸ್ಥಾನ ಹೆಚ್ಚು ಗಳಿಸುವ ಮೂಲಕ ತನ್ನ ಬಲವನ್ನು 108ಕ್ಕೆ ಏರಿಸಿಕೊಳ್ಳಲಿದೆ. ಇತರೆ ಪಕ್ಷಗಳು 132 ಸ್ಥಾನ ಪಡೆಯಲಿವೆ ಎಂದು ಸಮೀಕ್ಷೆ ಹೇಳಿದೆ.

ಮೋದಿ ನಂ.1 ಪ್ರಧಾನಿ, ಇಂದಿರಾ ಗಾಂಧಿ ನಂ.2

ಇದೇ ವೇಳೆ ದೇಶಕಂಡ ಸಾರ್ವಕಾಲಿಕ ಅತ್ಯುತ್ತಮ ಪ್ರಧಾನಿಗಳ ಪಟ್ಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ ಶೇ.34ರಷ್ಟುಜನ ಮೋದಿ ಅವರನ್ನು ಬೆಂಬಲಿಸಿದ್ದಾರೆ. 2ನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ, ದಿ. ಇಂದಿರಾ ಗಾಂಧಿ ಇದ್ದಾರೆ. ಅವರನ್ನು ಶೇ.16ರಷ್ಟುಜನ ಬೆಂಬಲಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಶೇ.13ರಷ್ಟುಜನ ಬೆಂಬಲಿಸಿದ್ದಾರೆ.

ಮುಂದಿನ ಪ್ರಧಾನಿಯೂ ಮೋದಿ?

ಮುಂದಿನ ಪ್ರಧಾನಿ ಯಾರಾಗಬಹುದೆಂಬ ಸಮೀಕ್ಷೆಯಲ್ಲೂ ಮೋದಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.53ರಷ್ಟುಜನ ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿಯಾಗಲು ಅರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ 2ನೇ ಸ್ಥಾನದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕೇವಲ ಶೇ.13ರಷ್ಟುಜನ ಮಾತ್ರ ಬೆಂಬಲಿಸಿದ್ದಾರೆ. ಅಂದರೆ ಪ್ರಧಾನಿ ಮೋದಿ ಮತ್ತು ರಾಹುಲ್‌ ಅವರ ನಡುವೆ ಶೇ.40ರಷ್ಟುಭಾರೀ ವ್ಯತ್ಯಾಸವಿದೆ.

click me!