ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ನಾಲ್ಕು ಮಂತ್ರಗಳನ್ನು ಪಠಿಸಿದ್ದಾರೆ. ಆವಿಷ್ಕಾರ, ಪೇಟೆಂಟ್, ಉತ್ಪಾದನೆ ಮತ್ತು ಸಮೃದ್ಧಿ ನಮ್ಮ ಮಂತ್ರವಾಗಿರಬೇಕು ಎಂದು ಹೇಳಿದ್ದಾರೆ.
ಬೆಂಗಳೂರು [ಜ.04]: ‘ಜಾಗತಿಕ ಮಟ್ಟದಲ್ಲಿ ದೇಶವನ್ನು ಮುಂಚೂಣಿಯತ್ತ ಕೊಂಡೊಯ್ಯಲು ಆವಿಷ್ಕಾರ, ಪೇಟೆಂಟ್, ಉತ್ಪಾದನೆ ಮತ್ತು ಸಮೃದ್ಧಿ ನಮ್ಮ ಮಂತ್ರವಾಗಿರಬೇಕು. ಈ ನಾಲ್ಕು ಹೆಜ್ಜೆಗಳು ರಾಷ್ಟ್ರದ ದಿಕ್ಕನ್ನು ಬದಲಿಸುವುದರ ಜತೆಗೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಖ್ಯಾನಿಸಿದ್ದಾರೆ.
ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಐದು ದಿನಗಳ ಕಾಲ ನಡೆಯುವ ಪ್ರತಿಷ್ಠಿತ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
undefined
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಹೊಸದಾಗಿ ಸಂಶೋಧನೆ ಮಾಡಬೇಕು. ಅದಕ್ಕೆ ಅಗತ್ಯ ಇರುವ ಪೇಟೆಂಟ್ ನಾವು ಮಾಡುತ್ತೇವೆ. ಹೊಸ ಸಂಶೋಧನೆಗಳನ್ನು ಜನರ ಮುಂದಿಡಲಾಗುವುದು. ಇದರಿಂದ ದೇಶ ಸಮೃದ್ಧಿಯಾಗಲಿದೆ ಎಂಬ ವಿಶ್ವಾಸ ಇದೆ. ಹೊಸ ಭಾರತಕ್ಕೆ ಬೇಕಾಗಿರುವುದು ತಂತ್ರಜ್ಞಾನ ಮತ್ತು ತಾರ್ಕಿಕ ಮನಸ್ಥಿತಿ. ಇದರಿಂದ ಸಾಮಾಜಿಕ ಮತ್ತು ಆರ್ಥಿಕತೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲು ಸಾಧ್ಯ ಎಂದು ಹೇಳಿದರು.
ಭಾರತೀಯ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಹೊಸ ಪರಿವರ್ತನೆಯ ಅಗತ್ಯತೆ ಬಗ್ಗೆ ಪ್ರತಿಪಾದಿಸಿದ ಪ್ರಧಾನಿ, ತಂತ್ರಜ್ಞಾನದ ನೆರವಿನಿಂದ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಅಲ್ಲದೇ, ಅಧಿಕಾರಿಶಾಹಿಯ ವಿಳಂಬ ಧೋರಣೆ ಕಡಿತವಾಗುತ್ತಿದೆ. ಮುಂದಿನ ದಶಕದ ವೇಳೆಗೆ ಆಡಳಿತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆಯು ನಿರ್ಣಾಯಕವಾಗಿರಲಿದೆ. ವೈಜ್ಞಾನಿಕ ಆವಿಷ್ಕಾರಗಳು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನವನ್ನು ನಿರ್ಧರಿಸಲಿವೆ. 2022ರ ವೇಳೆಗೆ ಕಚ್ಚಾ ತೈಲದ ಆಮದನ್ನು ಶೇ.10ರಷ್ಟುಕಡಿಮೆ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಜೈವಿಕ ಇಂಧನ, ಎಥೆನಾಲ್ ಬಳಕೆ ಹೆಚ್ಚಾಗಬೇಕು. ಕೈಗಾರಿಕೆ ಆಧಾರಿತ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಭಾರತವು ವಿಶ್ವಮಟ್ಟದಲ್ಲಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ವಿಜ್ಞಾನಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಯುವ ವಿಜ್ಞಾನಿಗಳು, ಉದ್ಯಮಿಗಳು ವೈಯಕ್ತಿಕ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ದೇಶದ ಬೆಳವಣಿಗೆಗೆ ಏನಾದರೂ ಕೊಡುಗೆ ನೀಡುವ ತುಡಿತವನ್ನು ಬೆಳೆಸಿಕೊಳ್ಳಬೇಕು. ತಮ್ಮ ಸಾಧನೆ, ದೇಶದ ಸಾಧನೆಯಾಗಬೇಕು ಎಂಬ ಆಕಾಂಕ್ಷೆ ಅವರಲ್ಲಿ ಇರಬೇಕು. ತಂತ್ರಜ್ಞಾನ ಸದ್ಬಳಕೆಯಿಂದಲೇ ಎಲ್ಲರೂ ಸರ್ಕಾರದ ಭಾಗವಾಗಲು ಸಾಧ್ಯ. ಇಂತಹ ಪರಿವರ್ತನೆಯನ್ನು ಪ್ರೋತ್ಸಾಹಿಸಬೇಕು ಮತ್ತು ಸದೃಢಗೊಳಿಸಬೇಕು. ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ತಂತ್ರಜ್ಞಾನದಿಂದಾಗಿಯೇ ಸರ್ಕಾರದ ಯೋಜನೆಗಳು ವೇಗ ಪಡೆದುಕೊಂಡಿವೆ. ಸರ್ಕಾರ ಮತ್ತು ಫಲಾನುಭವಿಗಳ ನಡುವಿನ ಅಂತರ ಕಡಿಮೆಯಾಗಿದೆ. ಇ-ಕಾಮರ್ಸ್‌ನಿಂದಾಗಿ ಎಲ್ಲಾ ವ್ಯವಹಾರಗಳು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ವಿಕಾಸಕ್ಕೆ ತಂತ್ರಜ್ಞಾನ:
ಗ್ರಾಮೀಣಾಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವ ದೊಡ್ಡದಿದ್ದು, ಕಳೆದ ಐದು ವರ್ಷದಲ್ಲಿ ಅದರ ಮಹತ್ವ ಜನತೆಗೆ ಅರಿವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿರುವುದರ ಹಿಂದೆ ವಿಜ್ಞಾನಿಗಳ ಪಾತ್ರ ಮುಖ್ಯವಾಗಿದೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಸೇರಿದಂತೆ ಎಲ್ಲಾ ಯೋಜನೆಗಳು ತಂತ್ರಜ್ಞಾನದ ಮೂಲಕವೇ ಕಾರ್ಯಗತವಾಗುತ್ತಿವೆ. ತಂತ್ರಜ್ಞಾನದಿಂದ ಯೋಜನೆಗಳನ್ನು ಜನತೆಗೆ ಪ್ರಾಮಾಣಿಕವಾಗಿ ತಲುಪಿಸಲು ಸಾಧ್ಯವಾಗುತ್ತಿದೆ. ಸಕಾಲದಲ್ಲಿ ಯೋಜನೆಗಳು ಪೂರ್ಣಗೊಳ್ಳುತ್ತಿವೆ. ಕೃಷಿಕರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ಮಾರುಕಟ್ಟೆಗೆ ತಲುಪಿಸಲು ತಂತ್ರಜ್ಞಾನವು ಸಹಕಾರಿಯಾಗಿದೆ. ಗ್ರಾಮೀಣ ಜನರಿಗೂ ಬೆರಳ ತುದಿಯಲ್ಲಿ ಸೇವೆ ಲಭ್ಯವಾಗುತ್ತಿದೆ ಎಂದು ಹೇಳಿದರು.
ಪೌರತ್ವ ಕಾಯ್ದೆ ವಾಪಸ್ ಆಗುತ್ತಾ? : ಗೃಹ ಸಚಿವರ ಸ್ಪಷ್ಟನೆ ಏನು?...
ನೀರು ಅತ್ಯಮೂಲ್ಯವಾಗಿರುವ ಹಿನ್ನೆಲೆಯಲ್ಲಿ ನೀರಿನ ಸದ್ಬಳಕೆ ಮತ್ತು ಪುನರ್‌ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಜಲಜೀವನ ಮಿಷನ್ ಅಭಿಯಾನ ಪ್ರಾರಂಭಿಸಿದೆ. ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡುವುದರ ಜತೆಗೆ ನೀರಿನ ಸದ್ಬಳಕೆ ಮಾಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಪ್ರತಿ ಮನೆಯಿಂದ ಹೊರಬರುವ ನೀರನ್ನು ಪುನರ್ ಬಳಕೆ ಮಾಡಲು ಸರಳ ತಂತ್ರಜ್ಞಾನದ ಅಗತ್ಯ ಇದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿರ್ಮೂಲನೆಯಾಗಬೇಕು:
ಮನುಕುಲಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆಯಾಗಬೇಕು. ಹೀಗಾಗಿ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಅದನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗಳಿಗೆ ಅಪಾಯ ಕಟ್ಟಿಟ್ಟಬುತ್ತಿ. ಮಣ್ಣು, ಫೈಬರ್, ನಾರು ಬಳಸಿ ತಂತ್ರಜ್ಞಾನ ಅಭಿವೃದ್ಧಿ ಮಾಡಬೇಕಾಗಿದೆ. ಎಲೆಕ್ಟ್ರಿಕ್ ತ್ಯಾಜ್ಯ ಕೂಡ ಇತ್ತೀಚೆಗೆ ದೊಡ್ಡ ಸಮಸ್ಯೆಯಾಗಿ ಎದುರಾಗುತ್ತಿದೆ. ಇದಕ್ಕೊಂದು ಪರಿಹಾರ ಪತ್ತೆ ಮಾಡಬೇಕಾಗಿದೆ. ಜಾಗತಿಕ ತಾಪಮಾನ ಬದಲಾಗುತ್ತಿರುವುದರಿಂದ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ಕ್ಷೇತ್ರದಲ್ಲಿಯೂ ಭಾರತವು ಮುಂಚೂಣಿಯತ್ತ ಸಾಗಿ, ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಲು ನಾಯಕತ್ವ ವಹಿಸಬೇಕು. ಉಪಕರಣ ವಿಚಾರದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮತ್ತಷ್ಟುಕೆಲಸವಾಗಬೇಕು. ಬಯೋ ಟೆಕ್ನಾಲಜಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಾಂಕ್ರಾಮಿಕ ರೋಗಗಳಿಂದ ಜನತೆ ಮುಕ್ತರಾಗಬೇಕು. ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಸಾಧನಗಳನ್ನು ಬಳಸಲು ಹೆಚ್ಚಿನ ಸಂಶೋಧನೆಯಾಗಬೇಕು. ನಿಫಾ ಮತ್ತು ಟಿ.ಬಿ. ರೋಗ ತೊಡೆದು ಹಾಕಲು ಮತ್ತು ಲಸಿಕೆಗಳ ಪೂರೈಕೆಯಲ್ಲಿ ಭಾರತವು ಮುಂಚೂಣಿಯಲ್ಲಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.