ಸಿಎಎ ವಿರೋಧಿಸುವಂತೆ 11 ರಾಜ್ಯಗಳಿಗೆ ಪತ್ರ| 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕೇರಳ ಸಿಎಂ| ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಒಂದಾಗುವಂತೆ ಕರೆ ನೀಡಿದ ಪಿಣರಾಯಿ ವಿಜಯನ್| ‘ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದಲ್ಲಿ ಜನಾಂದೋಲನ ಶುರುವಾಗಿ’| ಕೇರಳ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ|
ತಿರುವನಂತಪುರಂ(ಜ.03): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿಲುವು ತಳೆಯುವಂತೆ ಮನವಿ ಮಾಡಿ, 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.
ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂದು ತಮ್ಮ ಪತ್ರದಲ್ಲಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ 11 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪತ್ರ ಬರೆದಿದ್ದಾರೆ.
ಸಿಎಎ ವಿರುದ್ಧದ ಕೇರಳ ವಿಧಾನಸಭೆ ನಿರ್ಣಯ ಸಂವಿಧಾನ ಬಾಹಿರ ಎಂದ ರಾಜ್ಯಪಾಲ!
ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದಲ್ಲಿ ಜನಾಂದೋಲನ ಶುರುವಾಗಿದ್ದು, ದೇಶದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಬೇಕಾದ ಅಗತ್ಯವಿದೆ ಎಂದು ಪತ್ರದಲ್ಲಿ ಪಿಣರಾಯಿ ಉಲ್ಲೇಖಿಸಿದ್ದಾರೆ.
ಡಿ.31 ರಂದು ಕೇರಳ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಕೈಗೊಂಡ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಪಿಣರಾಯಿ, ಕಾಯ್ದೆ ಜಾರಿಯಿಂದ ದೇಶದ ಜಾತ್ಯತೀತ ಪರಂಪರೆಯ ಮೇಲಾಗುವ ಪರಿಣಾಮಗಳ ಕುರಿತಾಗಿ ಎಚ್ಚರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಈಗಾಗಲೇ 12 ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಪಿಣರಾಯಿ ಪತ್ರ ಬರೆದ 11 ರಾಜ್ಯಗಳ ಪಟ್ಟಿ:
ಮಹಾರಾಷ್ಟ್ರ
ಬಿಹಾರ
ಪ.ಬಂಗಾಳ
ದೆಹಲಿ(ಕೇಂದ್ರಾಡಳಿತ)
ಆಂಧ್ರಪ್ರದೇಶ
ಮಧ್ಯಪ್ರದೇಶ
ಪುದುಚೇರಿ(ಕೇಂದ್ರಾಡಳಿತ)
ಪಂಜಾಬ್
ರಾಜಸ್ಥಾನ
ಒಡಿಶಾ
ಜಾರ್ಖಂಡ್