ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ

Published : Jun 17, 2023, 01:08 PM IST
ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ

ಸಾರಾಂಶ

ಜೂನ್‌ 20ಕ್ಕೆ ಭಾರತದಿಂದ ತೆರಳಲಿರುವ ಪ್ರಧಾನಿ ಮೋದಿ ಜೂನ್‌ 21ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ವಾಷಿಂಗ್ಟನ್‌ ಡಿಸಿಗೆ ತೆರಳುವ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಅವರ ಪತ್ನಿ ಜಿಲ್‌ ಆತ್ಮೀಯ ಔತಣ ಆಯೋಜಿಸಿದ್ದಾರೆ. 

ನವದೆಹಲಿ (ಜೂನ್ 17, 2023): ಜೂನ್‌ 20ರಿಂದ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಈಜಿಪ್ಟ್‌ಗೂ ಭೇಟಿ ನೀಡಲಿದ್ದಾರೆ. ಈ ಕುರಿತು ಶುಕ್ರವಾರ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ ಜೂನ್‌ 20-25ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಮತ್ತು ಈಜಿಪ್ಟ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ಜೂನ್‌ 20ಕ್ಕೆ ಭಾರತದಿಂದ ತೆರಳಲಿರುವ ಪ್ರಧಾನಿ ಮೋದಿ ಜೂನ್‌ 21ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ವಾಷಿಂಗ್ಟನ್‌ ಡಿಸಿಗೆ ತೆರಳುವ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಅವರ ಪತ್ನಿ ಜಿಲ್‌ ಆತ್ಮೀಯ ಔತಣ ಆಯೋಜಿಸಿದ್ದಾರೆ. 

ಇದನ್ನು ಓದಿ: ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್‌, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ

ಜೂನ್‌ 22ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶ್ವೇತಭವನಕ್ಕೆ ಸ್ವಾಗತಿಸಲಿದ್ದಾರೆ. ಅಂದು ಅಧಿಕೃತ ಔತಣ ಕೂಟದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಅದೇ ದಿನ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ನಂತರ ಜೂನ್‌ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮತ್ತು ಗೃಹ ಸಚಿವ ಆ್ಯಂಟನಿ ಬ್ಲಿಂಕನ್‌ ಆಯೋಜಿಸಿರುವ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ವಿವಿಧ ಕಂಪನಿಗಳ ಸಿಇಒ, ವೃತ್ತಿಪರರು ಮತ್ತು ಗಣ್ಯರನ್ನು ಮೋದಿ ಭೇಟಿ ಮಾಡಲಿದ್ದಾರೆ.

ಜೂನ್ 22 ರಂದು ಶ್ವೇತಭವನದ ಹುಲ್ಲುಹಾಸಿನ ಮೇಲೆ ಮೋದಿ ಅವರಿಗೆ 21 ಕುಶಾಲ ತೋಪು ಹಾರಿಸಿ ಅಮೆರಿಕ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನವನ್ನು ಕೋರಲಾಗುತ್ತದೆ. ಇಡೀ ದಿನ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅದೇ ದಿನ ಸಂಜೆ ಶ್ವೇತಭವನದಲ್ಲಿ ಅಧಿಕೃತ ಔತಣಕೂಟಕ್ಕಾಗಿ ಟೆಂಟ್‌ ವ್ಯವಸ್ಥೆ ಮಾಡಲಾಗುತ್ತದೆ. ಆ ಔತಣದಲ್ಲಿ ಮೋದಿ ಅವರ ಜತೆ ಭಾಗಿಯಾಗಲು ಅಮೆರಿಕದಲ್ಲಿ ಟಿಕೆಟ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್‌ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್‌ ಫಿಕ್ಸ್‌..!

ಎಷ್ಟು ಮಂದಿ ಈ ಔತಣ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಯಾರ್ಯಾರು ಬರುತ್ತಾರೆ ಎಂಬ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ. ಈ ಡಿನ್ನರ್‌ ಸಭೆ ವೈಭವೋಪೇತವಾಗಿ ನಡೆಯಲಿದ್ದು, ಕನಿಷ್ಠ 120ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಇದಾದ ಬಳಿಕ ಜೂನ್ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹಾಗೂ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಕೂಡ ಮೋದಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಳಿಕ ತಮ್ಮ ಪ್ರವಾಸ 2ನೇ ಹಂತವಾಗಿ ಜೂನ್‌ 24-25ಂದು ಮೋದಿ ಈಜಿಪ್ಟ್‌ ರಾಜಧಾನಿ ಕೈರೋಗೆ ಭೇಟಿ ನೀಡಲಿದ್ದಾರೆ. ಈಜಿಪ್ಟ್‌ ಅಧ್ಯಕ್ಷ ಫತ್ತಾ ಎಲ್‌ ಸಿಸಿ ಅವರ ಆಹ್ವಾನ ದ ಮೇರೆಗೆ ಮೋದಿ ಈ ಭೇಟಿ ಕೈಗೊಂಡಿದ್ದಾರೆ. ಕಳೆದ ಜನವರಿ 26ರಂದು ಫತ್ತಾ ಎಲ್‌ ಸಿಸಿ, ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಇದನ್ನೂ ಓದಿ: ಜೂನ್‌ನಲ್ಲಿ ಅಮೆರಿಕಕ್ಕೆ ಮೋದಿ ಮೊದಲ ಅಧಿಕೃತ ಭೇಟಿ..! ಪ್ರಧಾನಿ ಮೋದಿಗೆ ಅಮೆರಿಕದ ವಿಶೇಷ ಗೌರವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana