
ನವದೆಹಲಿ(ಜು.30) ಹಲವು ಅಭಿವೃದ್ಧಿ ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 1 ರಂದು ಪುಣೆಗೆ ಭೇಟಿ ನೀಡಲಿದ್ದಾರೆ. ಮೆಟ್ರೋ ಮಾರ್ಗ ಉದ್ಘಾಟನೆ, ಪ್ರಧಾನಮಂತ್ರಿ ಆವಾಸ್ ಮನೆಗಳ ಹಸ್ತಾಂತರ ಸೇರಿದಂತೆ ಹಲವು ಯೋಜನೆಗಳ ಚಾಲನೆಗೆ ಮೋದಿ ಪುಣೆಗೆ ಬೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಲೋಕಮಾನ್ಯ ತಿಲಕರ ಪರಂಪರೆಯನ್ನು ಗೌರವಿಸಲು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ 1983ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ದುಡಿದ ಜನರಿಗೆ ಅವರ ಕೊಡುಗೆಯನ್ನು ಗಮನಾರ್ಹ ಮತ್ತು ಅಸಾಧಾರಣವೆಂದು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು ಪ್ರತಿ ವರ್ಷ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರ ಪುಣ್ಯತಿಥಿಯಂದು ಪ್ರದಾನ ಮಾಡಲಾಗುತ್ತದೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿರುವ 41ನೇ ಗಣ್ಯ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಈ ಹಿಂದೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ,ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಡಾ. ಮನಮೋಹನ್ ಸಿಂಗ್, ಎನ್.ಆರ್.ನಾರಾಯಣ ಮೂರ್ತಿ, ಡಾ. ಇ. ಶ್ರೀಧರನ್ ಸೇರಿದಂತೆ ಹಲವು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಮೋದಿಗೆ ಅಧಿಕೃತ ಆಹ್ವಾನ
ಆಗಸ್ಟ್ 1 ರಂದು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡುತ್ತಿದ್ದಾರೆ. ಮೋದಿ ಬೆಳಗ್ಗೆ 11 ಗಂಟೆ ಸುಮಾರಿಗೆ ದಗ್ದುಶೇತ್ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬಳಿಕ 11:45ಕ್ಕೆ ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನಂತರ ಮಧ್ಯಾಹ್ನ 12:45 ಕ್ಕೆ ಪ್ರಧಾನ ಮಂತ್ರಿ ಅವರು ಮೆಟ್ರೋ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪುಣೆ ಮೆಟ್ರೋ ಒಂದನೇ ಹಂತದ ಎರಡು ಕಾರಿಡಾರ್‌ಗಳ ಪೂರ್ಣಗೊಂಡ ಮಾರ್ಗಗಳ ಉದ್ಘಾಟನೆಯ ಭಾಗವಾಗಿ ಪ್ರಧಾನ ಮಂತ್ರಿ ಮೆಟ್ರೋ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಈ ಮಾರ್ಗಗಳು ಫುಗೆವಾಡಿ ನಿಲ್ದಾಣದಿಂದ ಸಿವಿಲ್ ಕೋರ್ಟ್ ನಿಲ್ದಾಣದವರೆಗೆ ಮತ್ತು ಗಾರ್ವೇರ್ ಕಾಲೇಜು ನಿಲ್ದಾಣದಿಂದ ರೂಬಿ ಹಾಲ್ ಕ್ಲಿನಿಕ್ ನಿಲ್ದಾಣದವರೆಗೆ ಇವೆ. 2016ರಲ್ಲಿ ಪ್ರಧಾನಮಂತ್ರಿ ಅವರು ಈ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಈ ಹೊಸ ಮಾರ್ಗಗಳು ಪುಣೆ ನಗರದ ಪ್ರಮುಖ ಸ್ಥಳಗಳಾದ ಶಿವಾಜಿನಗರ, ಸಿವಿಲ್ ಕೋರ್ಟ್, ಪುಣೆ ಮಹಾನಗರ ಪಾಲಿಕೆ ಕಚೇರಿ, ಪುಣೆ ಆರ್‌ಟಿಒ ಮತ್ತು ಪುಣೆ ರೈಲು ನಿಲ್ದಾಣವನ್ನು ಸಂಪರ್ಕಿಸುತ್ತವೆ. ದೇಶದಾದ್ಯಂತ ಆಧುನಿಕ ಮತ್ತು ಪರಿಸರ ಸ್ನೇಹಿ ಸಾಮೂಹಿಕ ಕ್ಷಿಪ್ರ ನಗರ ಸಾರಿಗೆ ವ್ಯವಸ್ಥೆಯನ್ನು ನಾಗರಿಕರಿಗೆ ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಮೆಟ್ರೋ ರೈಲು ಸಂಚಾರ ಉದ್ಘಾಟನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ಮಾರ್ಗದಲ್ಲಿನ ಕೆಲವು ಮೆಟ್ರೋ ನಿಲ್ದಾಣಗಳ ವಿನ್ಯಾಸಗೊಳಿಸಲಾಗಿದೆ. ಛತ್ರಪತಿ ಸಂಭಾಜಿ ಉದ್ಯಾನ್ ಮೆಟ್ರೋ ನಿಲ್ದಾಣ ಮತ್ತು ಡೆಕ್ಕನ್ ಜಿಮ್ಖಾನಾ ಮೆಟ್ರೋ ನಿಲ್ದಾಣಗಳು, ಛತ್ರಪತಿ ಶಿವಾಜಿ ಮಹಾರಾಜರ ಸೈನಿಕರು ಧರಿಸುವ ಶಿರಸ್ತ್ರಾಣ ಹೋಲುವ ವಿಶಿಷ್ಟ ವಿನ್ಯಾಸವನ್ನು ಹೊಂದಿವೆ- ಇದನ್ನು "ಮಾವಲ ಪಗಡಿ" ಎಂದೂ ಕರೆಯುತ್ತಾರೆ. ಶಿವಾಜಿ ನಗರದ ನೆಲದಾಳದಲ್ಲಿರುವ ಮೆಟ್ರೋ ನಿಲ್ದಾಣವು ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಕೋಟೆಗಳನ್ನು ನೆನಪಿಸುವ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.
ದೇಶ ಭಕ್ತಿಗಲ್ಲ, ದೇಶವನ್ನು ದೋಚಲು 'ಇಂಡಿಯಾ' ಹೆಸರು ಬಳಕೆ: ಮೋದಿ
ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ, ಸಿವಿಲ್ ಕೋರ್ಟ್ ಮೆಟ್ರೋ ನಿಲ್ದಾಣವು ದೇಶದ ಆಳವಾದ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು 33.1 ಮೀಟರ್ ಆಳವನ್ನು ಹೊಂದಿದೆ. ನಿಲ್ದಾಣದ ಮೇಲ್ಛಾವಣಿಯಿಂದ ನೇರವಾಗಿ ಸೂರ್ಯನ ಬೆಳಕು ಪ್ಲಾಟ್‌ಫಾರ್ಮ್ ಮೇಲೆ ಬೀಳುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಪ್ರಧಾನಿ ಅವರು ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆ (ಪಿಸಿಎಂಸಿ) ವತಿಯಿಂದ ನಿರ್ಮಿಸಿರುವ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದನ್ನು ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಾರ್ಷಿಕ 2.5ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು.
ಸರ್ವರಿಗೂ ವಸತಿಯನ್ನು ಒದಗಿಸುವ ಉದ್ದೇಶದಿಂದ ಮುನ್ನಡೆಯುತ್ತಿರುವ ಪ್ರಧಾನಮಂತ್ರಿ ಅವರು ಪಿಸಿಎಂಸಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 1280 ಕ್ಕೂ ಅಧಿಕ ಮನೆಗಳನ್ನು ಹಸ್ತಾಂತರಿಸಲಿದ್ದಾರೆ. ಅವರು ಪುಣೆ ಮಹಾನಗರ ಪಾಲಿಕೆ ನಿರ್ಮಿಸಿದ 2650ಕ್ಕೂ ಅಧಿಕ ಪಿಎಂಎವೈ ಮನೆಗಳನ್ನೂ ಸಹ ಹಸ್ತಾಂತರ ಮಾಡಲಿದ್ದಾರೆ. ಅಲ್ಲದೆ, ಪಿಸಿಎಂಸಿಯಿಂದ ನಿರ್ಮಿಸಲಾಗುವ ಸುಮಾರು 1190 ಪಿಎಂಎವೈ ಮನೆಗಳಿಗೆ ಮತ್ತು ಪುಣೆ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 6400ಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ